ಶ್ರೀ ಮದ್ಭಗವದ್ಗೀತಾ : 83
9. ಜನ್ಮಕರ್ಮ ಚ ಮೇ ದಿವ್ಯಂ ಏವಂ ಯೋ ವೇತ್ತಿ ತತ್ತ್ವತಃ।
ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ ಮಾಮೇತಿ ಸೋಽರ್ಜುನ!॥
ಅರ್ಜುನ = ಎಲೈ ಅರ್ಜುನನೆ!, ಯಃ = ಯಾವನಾದರೆ, ಮೇ = ನನ್ನ, ಜನ್ಮ = ಶರೀರಧಾರಣೆಯೂ, ಕರ್ಮ-ಚ = ಸಜ್ಜನ ರಕ್ಷಣೆ ಮೊದಲಾದ ಲೀಲೆಗಳೂ, ಏವಂ = ಈ ವಿಧವಾಗಿ, ದಿವ್ಯಂ = ಮಾಯೆಗೆ ಅಧೀನವಾಗದವು ಎಂದು, ತತ್ತ್ವತಃ = ತತ್ತ್ವಜ್ಞಾನಪೂರ್ವಕವಾಗಿ, ವೇತ್ತಿ= ತಿಳಿದುಕೊಳ್ಳುತ್ತಾನೋ, ಸಃ = ಅಂತಹ ಸಾಧಕನು, ದೇಹಂ = ತನ್ನ ಶರೀರವನ್ನು, ತ್ಯಕ್ತ್ವಾ = ಬಿಟ್ಟು, ಪುನಃ-ಜನ್ಮ = ಮತ್ತೆ ಜನ್ಮವನ್ನು, ನ ಏತಿ = ಪಡೆಯುವುದಿಲ್ಲ. ಮಾಂ = ಪರಮಾತ್ಮನಾದ ನನ್ನನ್ನೇ, ಏತಿ = ಪಡೆಯುತ್ತಾನೆ.
ಅರ್ಜುನನೆ! ಲೋಕದಲ್ಲಿ ಜೀವಿಗಳೆಲ್ಲರಿಗೂ ಕಾಣಿಸುವ ದೇಹಗಳೆಲ್ಲವೂ ಮಾಯೆಗೆ ಅಧೀನವಾಗಿ ಅವರ ಪೂರ್ವಕರ್ಮಗಳಿಗೆ ಫಲಿತವಾಗಿ ಏರ್ಪಡುತ್ತಾ ಇರುತ್ತವೆ ಎಂದು ಹೇಳಿದೆನಲ್ಲವೆ! ಇಂತಹ ಶರೀರಗಳನ್ನು “ಲೌಕಿಕ ಶರೀರಗಳು’ ಅಥವಾ “ಪ್ರಾಕೃತಿಕ ಶರೀರಗಳು’ ಎನ್ನುತ್ತಾರೆ. ನಾನು ಧರಿಸುವ ಶರೀರಗಳು ಮಾತ್ರ ಅಂತಹವು ಅಲ್ಲ. ಪ್ರಕೃತಿಯನ್ನು ನಾನೇ ಸ್ವಾಧೀನಪಡಿಸಿಕೊಂಡು ನನ್ನ ಶರೀರಗಳಿಗೆ ನಾನೇ ರೂಪಕಲ್ಪನೆಯನ್ನು ಮಾಡಿಕೊಳ್ಳುತ್ತಾ ಇರುತ್ತೇನಾದ್ದರಿಂದ, ನಾನು ಧರಿಸುವ ಶರೀರಗಳನ್ನು, ಅವುಗಳು ಮಾಡುವ ಭಕ್ತರಕ್ಷಣೆಯು ಮೊದಲಾದ ಕರ್ಮಗಳನ್ನೂ ಕೂಡ “ಅಪ್ರಾಕೃತಿಕಗಳು, ಅಲೌಕಿಕಗಳು, ದಿವ್ಯವಾದವು’ ಎಂದು ತತ್ತ್ವವೇತ್ತರು ಹೇಳುತ್ತಿರುತ್ತಾರೆ. ಸತ್ಪದಾರ್ಥ ಸ್ವರೂಪನಾದ ನನ್ನ ನಿಜವಾದ ತತ್ತ್ವವು ಗೊತ್ತಾದಾಗಲೇ ಈ ವಿಷಯವು ಅರ್ಥವಾಗುವುದು. ಯಾವ ಸಾಧಕನಾದರೆ ಈ ವಿಧವಾಗಿ ತತ್ತ್ವಜ್ಞಾನಪೂರ್ವಕವಾಗಿ ನನ್ನ ಜನ್ಮಕರ್ಮಗಳ ಯಥಾರ್ಥ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬಲ್ಲನೋ ಅಂತಹವನು ತನ್ನ ಶರೀರವನ್ನು ಬಿಟ್ಟಮೇಲೆ ಮತ್ತೆ ಮತ್ತೊಂದುಸಲ ಶರೀರ ಧಾರಣೆಯನ್ನು ಮಾಡನು. ಏಕೆಂದರೆ, ಆತನು ಸತ್ಪದಾರ್ಥಸ್ವರೂಪನಾಗಿ ನನ್ನಲ್ಲಿಯೇ ಸೇರಿಬಿಡುತ್ತಾನೆ. ಅಂದರೆ, ಆತನು ನನ್ನೊಂದಿಗೇ ಏಕತ್ವವನ್ನು ಪಡೆಯುತ್ತಾನೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ