ಗೀತೆ – 82 : ನಾನು ಯಾವ್ಯಾವಾಗ ಅವತಾರ ತಾಳಲು ಬಯಸುತ್ತೇನೆ ತಿಳಿದುಕೊ

Gitacharya
Spread the love

ಶ್ರೀ ಮದ್ಭಗವದ್ಗೀತಾ : 82

7. ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ!।
ಅಭ್ಯುತ್ಥಾನ-ಮಧರ್ಮಸ್ಯ ತದಾಽಽತ್ಮಾನಂ ಸೃಜಾಮ್ಯಹಮ್‌॥

ಭಾರತ = ಜ್ಞಾನಾಸಕ್ತಿ ಇರುವ ಎಲೈ ಅರ್ಜುನನೆ!, ಯದಾ-ಯದಾ = ಯಾವ ಯಾವಾಗ, ಧರ್ಮಸ್ಯ = ಶಾಸ್ತ್ರವಿಹಿತವಾದ ಧರ್ಮಕ್ಕೆ, ಗ್ಲಾನಿಃ = ಪೀಡೆಯೂ, ಅಧರ್ಮಸ್ಯ = ಅಧರ್ಮಕ್ಕೆ, ಅಭ್ಯುತ್ಥಾನಂ = ಅಭಿವೃದ್ಧಿಯೂ, ಭವತಿ = ಆಗುತ್ತದೆಯೋ, ತದಾ = ಆಗ, ಅಹಂ = ನಾನು, ಆತ್ಮಾನಂ = ನನ್ನನ್ನು, ಸೃಜಾಮಿ = ಅವತಾರರೂಪವಾಗಿ ವ್ಯಕ್ತಮಾಡಿಕೊಳ್ಳುತ್ತಾ ಇರುತ್ತೇನೆ, ಹಿ = ಅಲ್ಲವೇ!

ಭರತವಂಶದಲ್ಲಿ ಹುಟ್ಟಿ ಧರ್ಮರಕ್ಷಣೆಗೋಸ್ಕರ ಕಂಕಣಕಟ್ಟಿಕೊಂಡು ಜ್ಞಾನಾಸಕ್ತನಾಗಿ ಇರುವ ಎಲೈ ಅರ್ಜುನನೆ! ನಾನು ಯಾವಾಗ ಅವತಾರಗಳನ್ನು ತಾಳಬೇಕೆಂದು ಬಯಸುವೆನೋ ಹೇಳುತ್ತೇನೆ ಕೇಳು.
ಸೃಷ್ಟಿ ಪ್ರವಾಹದಲ್ಲಿ ಆಗಾಗ ನ್ಯಾಯಕ್ಕೂ, ಧರ್ಮಕ್ಕೂ, ತೀವ್ರವಾದ ಹಾನಿಯು ಉಂಟಾಗುತ್ತಾ ಇರುತ್ತದೆ. ಅದರೊಂದಿಗೆ ಅಧರ್ಮವೇ ಹೆಚ್ಚು ಬೆಳೆಯುತ್ತಾ ಇರುತ್ತದೆ. ಇಂತಹ ಪರಿಸ್ಥಿತಿಗಳು ಕೈಮೀರಿ ಹೋದಾಗ, ನಿನ್ನಂತಹ ಸಾಮಾನ್ಯ ಪ್ರಜಾಪರಿಪಾಲಕರು ಈ ಪರಿಸ್ಥಿತಿಯನ್ನು ಸರಿಪಡಿಸಲಾರರು. ಇಂತಹ ಸಂದರ್ಭವು ಬಂದಾಗಲೆಲ್ಲಾ ನನಗೆ ನಾನು ಒಂದು ರೂಪವನ್ನು ಸೃಷ್ಟಿ ಮಾಡಿಕೊಂಡು ಅವತಾರವಾಗಿ ವ್ಯಕ್ತವಾಗುತ್ತಾ ಇರುತ್ತೇನೆ. ಈ ವಿಷಯವು ತತ್ತ್ವವೇತ್ತರಿಗೆ ಪ್ರಸಿದ್ಧವಾಗಿಯೇ ಇದೆ.

8. ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್‌। ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ॥

ಸಾಧೂನಾಂ = ಸತ್ಪ್ರವರ್ತನೆ ಉಳ್ಳವರನ್ನು, ಪರಿತ್ರಾಣಾಯ = ಚೆನ್ನಾಗಿ ರಕ್ಷಿಸುವುದಕ್ಕೂ, ದುಷ್ಕೃತಾಂ = ದುಷ್ಟಪ್ರವರ್ತನೆಯುಳ್ಳವರನ್ನು, ವಿನಾಶಾಯ = ಚೆನ್ನಾಗಿ ನಾಶಮಾಡುವುದಕ್ಕೂ, ಚ = ಮತ್ತು, ಧರ್ಮಸಂಸ್ಥಾಪನಾರ್ಥಾಯ = ಧರ್ಮವನ್ನು ಸುಸ್ಥಿರವಾಗಿ ಸ್ಥಾಪನೆಮಾಡುವುದಕ್ಕೂ, ಯುಗೇ = ಯುಗಾಂತದಲ್ಲಿಯೂ, ಅಯುಗೇ = ಯುಗಗಳ ಮಧ್ಯಕಾಲಗಳಲ್ಲಿ ಕೂಡ, ಸಂಭವಾಮಿ = ಅವತರಿಸುತ್ತಾ ಇರುತ್ತೇನೆ.

ಅರ್ಜುನನೆ! ಅಧರ್ಮವು ಹೆಚ್ಚು ಬೆಳೆದು ಹೋದಾಗ ಒಳ್ಳೆಯವರಿಗೆ ರಕ್ಷಣೆ ಇರುವುದಿಲ್ಲ. ಅವರನ್ನು ರಕ್ಷಿಸಬೇಕಾದರೆ, ಕೆಲವು ಸಂದರ್ಭಗಳಲ್ಲಿ ದುಷ್ಟರನ್ನು ಸಂಹರಿಸುವುದು ಒಂದೇ ಮಾರ್ಗವಾಗಿ ಉಳಿದಿರುತ್ತದೆ. ಕೆಲವು ಸಂದರ್ಭಗಳಲ್ಲಿ, ದುಷ್ಟರಲ್ಲಿ ಪರಿವರ್ತನೆ ತರುವುದರಿಂದಲೂ, ಸತ್ಪುರುಷರಲ್ಲಿ ವಿವೇಕ ಬಲವನ್ನು ಹೆಚ್ಚಿಸುವುದರಿಂದಲೂ ಕೂಡ ಅಧರ್ಮಪರಿಹಾರವನ್ನು, ಸದ್ಧರ್ಮ ಸಂರಕ್ಷಣೆಯನ್ನು, ಸಾಧಿಸಬೇಕಾಗಿರುತ್ತದೆ. ಇಂತಹ ಪ್ರಯೋಜನಗಳಿಗೋಸ್ಕರ ಯುಗಾಂತಗಳಲ್ಲಿ ದುಷ್ಟಸಂಹಾರವನ್ನು ಮಾಡುವ ಅವತಾರಗಳಂತೆಯೂ, ಯುಗ ಮಧ್ಯಗಳಲ್ಲಿ ಸಂಘಸಂಸ್ಕರಣೆಯನ್ನು ಮಾಡುವ ಗುರುಗಳ ಅವತಾರಗಳಂತೆಯೂ ನಾನು ರೂಪಗಳನ್ನು ಸ್ವೀಕರಿಸುತ್ತಾ ಇರುತ್ತೇನೆ. ಈ ಕೆಲಸವು ಪ್ರತಿ ಯುಗದಲ್ಲಿಯೂ ನಡೆಯುತ್ತಲೇ ಇರುತ್ತದೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ