ಶ್ರೀ ಮದ್ಭಗವದ್ಗೀತಾ : 81
6. ಅಜೋಽಪಿ ಸನ್ನವ್ಯಯಾತ್ಮಾ ಭೂತಾನಾ-ಮೀಶ್ವರೋಽಪಿ ಸನ್ ।
ಪ್ರಕೃತಿಂ ಸ್ವಾಮಧಿಷ್ಠಾಯ ಸಂಭವಾಮ್ಯಾತ್ಮ-ಮಾಯಯಾ॥
ಅಜಃ = ಸ್ವತಸ್ಸಿದ್ಧವಾಗಿ ಜನ್ಮರಹಿತನೂ, ಅವ್ಯಯಾತ್ಮಾ = ಎಂದಿಗೂ ಕಡಿಮೆಯಾಗದ ಜ್ಞಾನದಿಂದಲೂ, ಶಕ್ತಿಯಿಂದಲೂ, ಪ್ರಕಾಶಿಸುವವನೂ, ಸನ್-ಅಪಿ = ಆಗಿದ್ದುಕೊಂಡು ಕೂಡ, ಭೂತಾನಾಂ = ಸೃಷ್ಟಿಯಲ್ಲಿನ ಸಮಸ್ತ ಜೀವಿಗಳ, ಈಶ್ವರಃ = ನಿಯಾಮಕನೂ, (ನಿಯಂತ್ರಿಸುವವನು), ಸನ್-ಅಪಿ = ಆಗಿದ್ದುಕೊಂಡು ಕೂಡ, ಸ್ವಾಂ = ನನಗೆ ಸ್ವಕೀಯವಾದ, ಪ್ರಕೃತಿಂ = ತ್ರಿಗುಣಾತ್ಮಿಕೆಯಾದ ಮಾಯೆಯನ್ನು, ಅಧಿಷ್ಠಾಯ = ವಶಮಾಡಿಕೊಂಡು, ಆತ್ಮಮಾಯಯಾ = ನನ್ನ ಮಾಯಾಬಲದಿಂದಲೇ, ಸಂಭವಾಮಿ = ಶರೀರಧಾರಣೆಯನ್ನು ಮಾಡಿದವನಂತೆ ಕಾಣಿಸುತ್ತಿದ್ದೇನೆ.
ಅರ್ಜುನನೆ! ನಿಜಕ್ಕೆ ನನಗೆ ಜನ್ಮವೆಂಬುದೇ ಇಲ್ಲ. ನಾನೇ ಸ್ವಯಂ ಜ್ಞಾನಸ್ವರೂಪನೂ, ಶಕ್ತಿಸ್ವರೂಪನೂ ಆದ್ದರಿಂದ, ನನ್ನಲ್ಲಿರುವ ಜ್ಞಾನವಾಗಲೀ, ಇತರ ಶಕ್ತಿಗಳಾಗಲೀ, ಕಡಿಮೆಯಾಗುವ ಅವಕಾಶವೇ ಇಲ್ಲ. ಸೃಷ್ಟಿಕರ್ತನಾದ ಬ್ರಹ್ಮದೇವನಿಂದ, ಸೂಕ್ಷ್ಮಕ್ರಿಮಿಗಳವರೆಗಿರುವ ಸಮಸ್ತ ಜೀವಿಗಳನ್ನೂ ನಿಯಂತ್ರಿಸುವ ಈಶ್ವರನು ನಾನೇ. ಈ ನಿಯಂತ್ರಣವೆಂಬ ಕ್ರಿಯೆಯನ್ನು ಪೂರ್ತಿ ನಿರ್ವಹಿಸುವ ತ್ರಿಗುಣಾತ್ಮಕವಾದ ಪ್ರಕೃತಿಯು ಎಲ್ಲಾ ಕಾಲದಲ್ಲೂ ನನ್ನ ಅಧೀನದಲ್ಲೇ ಇರುತ್ತದೆ. ನಾನು ಬೇಕೆಂದುಕೊಂಡಾಗ ಆ ಪ್ರಕೃತಿಯನ್ನು ನಾನೇ ಆಜ್ಞಾಪಿಸಿ, ಆ ಪ್ರಕೃತಿಶಕ್ತಿಯನ್ನೇ (ಅಥವಾ ಮಾಯಾಶಕ್ತಿಯನ್ನೇ) ಉಪಕರಣವಾಗಿ ಮಾಡಿಕೊಂಡು ಒಂದು ಹೊಸ ಶರೀರವನ್ನು ಧರಿಸಿದ ಹಾಗೆ, ಆ ಶರೀರವು ಕೆಲಕಾಲ ಬೆಳೆದ ಹಾಗೆ ಆಮೇಲೆ ಆ ಶರೀರವು, ಕಣ್ಮರೆಯಾದ ಹಾಗೆ ನಟಿಸುತ್ತಾ ಇರುತ್ತೇನೆ. ಮೇಲ್ನೋಟಕ್ಕೆ ಕಾಣಿಸುವ ನನ್ನ ಶರೀರವು ಯಾವ ದಶೆಯಲ್ಲಿ ಇದ್ದರೂ, ಅದರೊಳಗಿನ ಶಕ್ತಿಯಾಗಲೀ, ಜ್ಞಾನವಾಗಲೀ, ಬದಲಾವಣೆ ಇಲ್ಲದೆಯೇ ಇರುತ್ತವೆ. ಆದ್ದರಿಂದಲೇ ನನ್ನ ಶರೀರಧಾರಣೆಗಳನ್ನು ಅವತಾರಗಳು ಎನ್ನುತ್ತಾರೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ