ಗೀತೆ – 79 : ಯೋಗವಿದ್ಯೆಯು ಪುರಾತನವಾದದ್ದು

Gitacharya
Spread the love

ಶ್ರೀ ಮದ್ಭಗವದ್ಗೀತಾ : 79

3. ಸ ಏವಾಯಂ ಮಯಾ ತೇಽದ್ಯ ಯೋಗಃ ಪ್ರೋಕ್ತಃ ಪುರಾತನಃ।
ಭಕ್ತೋಽಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದುತ್ತಮಮ್‌॥

(ತ್ವಂ = ನೀನು) ಮೇ = ನನಗೆ, ಭಕ್ತಃ = ಭಕ್ತನೂ, ಚ = ಮತ್ತು, ಸಖಾ= ಮಿತ್ರನೂ, ಅಸಿ = ಆಗಿದ್ದೀಯೆ, ಇತಿ = ಎಂಬೀ ಕಾರಣದಿಂದ, ಸಃ = ಆ, ಅಯಂ = ಈ, ಪುರಾತನಃ = ಪ್ರಾಚೀನವಾದ, ಯೋಗಃ-ಏವ = ಯೋಗವಿದ್ಯೆಯೇ, ಅದ್ಯ = ಇಂದು, ಮಯಾ = ನನ್ನಿಂದ, ತೇ = ನಿನಗೆ, ಪ್ರೋಕ್ತಃ = ಹೇಳಲ್ಪಟ್ಟಿದೆ. ಹಿ = ಏಕೆಂದರೆ, ಏತತ್‌ = ಈ (ವಿದ್ಯೆಯು), ರಹಸ್ಯಂ = ಅನರ್ಹರಾದವರಿಗೆ ಹೇಳುವಂತಹುದಲ್ಲ, ಉತ್ತಮಂ = ಸರ್ವಶ್ರೇಷ್ಠವಾದದ್ದು ಕೂಡ ಆಗಿದೆ.

ಅರ್ಜುನನೆ! ನಾನು ಈ ಎರಡು ಅಧ್ಯಾಯಗಳಿಂದ ನಿನಗೆ ಉಪದೇಶಿಸಿದ ಯೋಗವಿದ್ಯೆಯು ಇಂದಿನದಲ್ಲ. ಇದು ಪುರಾತನವಾದದ್ದು. ರಾಜರ್ಷಿಗಳ ವಂಶಪರಂಪರೆಯಿಂದ ಪ್ರಾಪ್ತವಾದದ್ದು. ಇದು ಎಲ್ಲ ವಿದ್ಯೆಗಳಲ್ಲಿಯೂ ಉತ್ತಮವಾದದ್ದು. ಇದನ್ನು ಅನರ್ಹರಿಗೆ ಹೇಳಬಾರದು. ಅದಕ್ಕಾಗಿಯೇ ಹಿರಿಯರು ಇದನ್ನು ರಹಸ್ಯವಿದ್ಯೆಯಂತೆ ಮುಚ್ಚಿಡುತ್ತಿದ್ದಾರೆ. ಆದರೆ ನೀನು ನನಗೆ ಭಕ್ತನು, ಪ್ರಿಯಮಿತ್ರನು. ಆದ್ದರಿಂದ ನಾನು ಈ ರಹಸ್ಯವಿದ್ಯೆಯನ್ನು ನಿನಗೆ ಈಗ ಬೋಧಿಸಿದ್ದೇನೆ.
ಅರ್ಜುನ ಉವಾಚ:

4. ಅಪರಂ ಭವತೋ ಜನ್ಮ ಪರಂ ಜನ್ಮ ವಿವಸ್ವತಃ।
ಕಥಮೇತದ್ವಿಜಾನೀಯಾಂ ತ್ವಮಾದೌ ಪ್ರೋಕ್ತವಾನಿತಿ॥

ಅರ್ಜುನಃ ಉವಾಚ = ಅರ್ಜುನನು ಹೇಳಿದನು. ಭವತಃ = ನಿನ್ನ, ಜನ್ಮ = ಹುಟ್ಟು, ಅಪರಂ = ಆಮೇಲೆ ನಡೆದದ್ದು. ವಿವಸ್ವತಃ = ಸೂರ್ಯನ, ಜನ್ಮ = ಹುಟ್ಟು, ಪರಂ = ಪೂರ್ವವು ನಡೆದದ್ದು. ತ್ವಂ = ನೀನು, ಆದೌ = ಸೃಷ್ಟಿ ಪ್ರಾರಂಭದಲ್ಲಿಯೇ, ಪ್ರೋಕ್ತವಾನ್‌ = ಈ ಯೋಗವನ್ನು ಹೇಳಿದ್ದೀಯೆ, ಇತಿ-ಏತತ್‌ = ಎಂಬೀ ವಿಷಯವನ್ನು, ಕಥಂ = ಹೇಗೆ, ವಿಜಾನೀಯಾಂ = ನಾನು ಅರ್ಥಮಾಡಿಕೊಳ್ಳಲಿ?

ಅರ್ಜುನನು ಹೇಳಿದನು:-
ಓ ಶ್ರೀಕೃಷ್ಣನೆ! ನೀನು ಇತ್ತೀಚೆಗಷ್ಟೇ ಹುಟ್ಟಿದೀಯೆ. ಸೂರ್ಯನು ಭೂಮಿಗಿಂತಲೂ ಮುಂಚೆಯೇ ಹುಟ್ಟಿದ್ದಾನೆ. “”ಸೃಷ್ಟಿ ಪ್ರಾರಂಭ ಕಾಲದಲ್ಲಿಯೇ ಸೂರ್ಯನಿಗೆ ಈ ಉಪದೇಶವನ್ನು ನಾನೇ ಮಾಡಿದ್ದೇನೆ, ಆ ನಾನೇ ನಿನಗೀಗ ಮತ್ತೆ ಅದೇ ಯೋಗವನ್ನು ಉಪದೇಶಿಸುತ್ತಿದ್ದೇನೆ” ಎಂದು ನೀನು ಹೇಳುತ್ತಿದ್ದೀಯೇ! ಈ ಮಾತುಗಳನ್ನು ನಾನು ಹೇಗೆ ನಂಬಲಿ?
ವಿವರಣೆ:
ಭಗವಂತನು “”ನಾನು ಸೃಷ್ಟಿಗೆ ಪೂರ್ವದಿಂದಲೂ ಇಲ್ಲಿಯವರೆಗೂ ಸಾಗುತ್ತಲೇ ಇದ್ದೇನೆ” ಎಂಬೀ ವಿಷಯವನ್ನು ಮೇಲಿನ ಶ್ಲೋಕಗಳಲ್ಲಿ ಸೂಚನೆಮಾಡುತ್ತಲೇ ಇದ್ದರೂ, ಭಗವಂತನು ಪ್ರಯೋಗಿಸುವ “”ನಾನು” ಎಂಬ ಶಬ್ದಕ್ಕೆ ಸರಿಯಾದ ಅರ್ಥವನ್ನು ನಿಸ್ಸಂದೇಹವಾಗಿ ತಿಳಿದುಕೊಳ್ಳಲು ಅರ್ಜುನನು ಹೀಗೆ ಪ್ರಶ್ನಿಸುತ್ತಿದ್ದಾನೆ ಎಂದು ನಾವು ಗುರುತಿಸಬೇಕು.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ