ಗೀತೆ – 78 : ಯೋಗದ್ವಯವನ್ನು ಸೂರ್ಯನಿಗೆ ಉಪದೇಶಿಸಿದ್ದೆ

Gitacharya
Spread the love

ಶ್ರೀ ಮದ್ಭಗವದ್ಗೀತಾ : 78

4.ಜ್ಞಾನಯೋಗ

ಶ್ರೀ ಭಗವಾನುವಾಚ:
1. ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹ ಮವ್ಯಯಮ್‌।
ವಿವಸ್ವಾನ್ ಮನವೇ ಪ್ರಾಹ ಮನು ರಿಕ್ಷ್ವಾಕವೇಽಬ್ರ ವೀತ್‌॥

ಅಹಂ = ನಾನು, ಇಮಂ = ಈ, ಅವ್ಯಯಂ = ಅಕ್ಷಯವಾದ ಬಲವು, ಫಲವು, ಇರುವ, ಯೋಗಂ = ಯೋಗದ್ವಯವನ್ನು, ವಿವಸ್ವತೇ = ಸೂರ್ಯನಿಗೆ, ಪ್ರೋಕ್ತವಾನ್‌ = ಹೇಳಿದ್ದೇನೆ. ವಿವಸ್ವಾನ್‌ = ಸೂರ್ಯನು, ಮನವೇ = ತನ್ನ ಪುತ್ರನಾದ ಮನುವಿಗೆ, ಪ್ರಾಹ = ಹೇಳಿದ್ದಾನೆ. ಮನುಃ = ಮನುಪ್ರಜಾಪತಿಯು, ಇಕ್ಷ್ವಾಕವೇ = ತನ್ನ ಪುತ್ರನಾದ ಇಕ್ಷ್ವಾಕು ಚಕ್ರವರ್ತಿಗೆ, ಅಬ್ರವೀತ್‌ = ಹೇಳಿದ್ದಾನೆ.

ಶ್ರೀಭಗವಂತನು ಹೇಳಿದನು:-
ಅರ್ಜುನನೆ! ಕಳೆದ ಎರಡು ಅಧ್ಯಾಯಗಳಲ್ಲಿಯೂ ನಿನಗೆ ನಾನು, ಯೋಗದ್ವಯವನ್ನು ಉಪದೇಶಿಸಿದ್ದೇನೆ. ನಿಜಕ್ಕೆ ಈ ಎರಡೂ ಸೇರಿಸಿ ಒಂದೇ ಯೋಗವು. ಇದನ್ನು ಅಭ್ಯಸಿಸಿದವರಿಗೆ ಅಕ್ಷಯವಾದ ಮನೋಬಲವು ಲಭಿಸುವುದು. ಅಕ್ಷಯವಾದ ಮೋಕ್ಷ ಫಲವು ಕೂಡಾ ಲಭಿಸುವುದು. ಅದಕ್ಕಾಗಿಯೇ ಈ ಯೋಗವನ್ನು “ಅವ್ಯಯವು’ ಎನ್ನುತ್ತಾರೆ. ಇಂತಹ ಈ ಯೋಗವನ್ನು ಸೃಷ್ಟಿ ಪ್ರಾರಂಭದ ಸಮಯದಲ್ಲಿ ನಾನು ಮೊಟ್ಟಮೊದಲು ಸೂರ್ಯನಿಗೆ ಉಪದೇಶಿಸಿದೆನು. ಆತನು ತನ್ನ ಪುತ್ರನಾದ ಮನುಪ್ರಜಾಪತಿಗೆ, ಮನುವು ತನ್ನ ಪುತ್ರನಾದ ಇಕ್ಷ್ವಾಕು ಚಕ್ರವರ್ತಿಗೆ, ಕಾಲಕ್ರಮದಲ್ಲಿ ಉಪದೇಶಿಸಿದರು.

2. ಏವಂ ಪರಂಪರಾ-ಪ್ರಾಪ್ತಂ ಇಮಂ ರಾಜರ್ಷಯೋ ವಿದುಃ।
ಸ ಕಾಲೇನೇಹ ಮಹತಾ ಯೋಗೋ ನಷ್ಟಃ ಪರಂತಪ!॥

ಪರಂತಪ = ಶತ್ರುಗಳು ತಪಿಸುವ ಹಾಗೆ ಮಾಡುವಂತಹ ಅರ್ಜುನನೆ!, ಏವಂ = ಈ ವಿಧವಾಗಿ, ಪರಂಪರಾಪ್ರಾಪ್ತಂ = ರಾಜವಂಶ ಪರಂಪರೆಯಿಂದ ಸಂಕ್ರಮಿಸಿದ, ಇಮಂ = ಈ, ಯೋಗದ್ವಯವನ್ನು, ರಾಜರ್ಷಯಃ = ಋಷಿಗಳಾದ ರಾಜರು, ವಿದುಃ = ತಿಳಿದುಕೊಂಡರು. ಸಃ = ಅಂತಹ, ಯೋಗಃ = ಈ ಯೋಗವು, ಇಹ = ಈ ಜಗತ್ತಿನಲ್ಲಿ, ಮಹತಾ = ದೀರ್ಘವಾದ, ಕಾಲೇನ = ಕಾಲಕ್ರಮದಿಂದ, ನಷ್ಟಃ = ನಷ್ಟವಾಗಿಹೋಯಿತು.

ಹೊರಗಿನ ಶತ್ರುಗಳನ್ನು ಸುಟ್ಟುಹಾಕುವಂತಹ ಬಾಹುಪರಾಕ್ರಮವೂ, ಒಳಗಿನ ಅಂತಶ್ಶತ್ರುಗಳನ್ನು ದಹಿಸಿ ಹಾಕಬಲ್ಲ ವಿವೇಕಬಲವೂ ಇರುವಂತಹ ಎಲೈ ಅರ್ಜುನನೆ! ಈ ವಿಧವಾಗಿ ಜ್ಞಾನಯೋಗ ಕರ್ಮಯೋಗಾತ್ಮಕವಾದ ಈ ವಿದ್ಯೆಯು ಮೊಟ್ಟಮೊದಲು ಋಷಿಸಮಾನರಾದ ರಾಜಶ್ರೇಷ್ಠರ ವಂಶಗಳಿಂದಲೇ ಲೋಕದಲ್ಲಿ ವ್ಯಾಪ್ತಿಯಾಯಿತು. ಆದ್ದರಿಂದ ಅಂದಿನ ರಾಜರ್ಷಿಗಳೆಲ್ಲರಿಗೂ ಈ ವಿದ್ಯೆಯು ಚೆನ್ನಾಗಿ ಗೊತ್ತು. ಆದರೆ ಸುದೀರ್ಘವಾದ ಕಾಲಪ್ರವಾಹದಲ್ಲಿ ಯುಗಗಳು ಕಳೆದಂತೆ ಕ್ರಮಕ್ರಮವಾಗಿ ಅಪ್ರಸಿದ್ಧವಾಯಿತು. ಇದು ಶಾಶ್ವತವಾದ ವಿದ್ಯೆಯೇ ಆಗಿದ್ದರೂ ನಷ್ಟವಾಗಿಹೋಯಿತೇನೋ ಎಂಬಂತೆ ಆಗಿಹೋಯಿತು.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ