ಶ್ರೀ ಮದ್ಭಗವದ್ಗೀತಾ : 77
42. ಇಂದ್ರಿಯಾಣಿ ಪರಾಣ್ಯಾಹುಃ ಇಂದ್ರಿಯೇಭ್ಯಃ ಪರಂ ಮನಃ।
ಮನಸಸ್ತು ಪರಾ ಬುದ್ಧಿಃ ಯೋ ಬುದ್ಧೇಃ ಪರತಸ್ತು ಸಃ॥
43. ಏವಂ ಬುದ್ಧೇಃ ಪರಂ ಬುದ್ಧ್ವಾ ಸಂಸ್ತಭ್ಯಾತ್ಮಾನಮಾತ್ಮನಾ।
ಜಹಿ ಶತ್ರುಂ ಮಹಾಬಾಹೋ! ಕಾಮರೂಪಂ ದುರಾಸದಮ್॥
ಇಂದ್ರಿಯಾಣಿ = ಜ್ಞಾನೇಂದ್ರಿಯಗಳು, ಪರಾಣಿ = ದೇಹಕ್ಕಿಂತಲೂ ಹೆಚ್ಚಿನವೆಂದು, ಇಂದ್ರಿಯೇಭ್ಯಃ = ಇಂದ್ರಿಯಗಳಿಗಿಂತ, ಮನಃ = ಮನಸ್ಸು,
ಪರಂ = ಹೆಚ್ಚಿನದೆಂದು, ಮನಸಃ-ತು = ಮನಸ್ಸಿಗಿಂತಲೂ, ಬುದ್ಧಿಃ = ಬುದ್ಧಿಯು, ಪರಾ = ಹೆಚ್ಚಿನದೆಂದು, ಆಹುಃ = ಹಿರಿಯರು ಹೇಳುತ್ತಿದ್ದಾರೆ. ತು = ಆದರೆ, ಯಃ = ಯಾವುದಾದರೆ, ಬುದ್ಧೇಃ = ಬುದ್ಧಿಗಿಂತಲೂ, ಪರತಃ = ಅತೀತವಾದ ಸ್ಥಾನದಲ್ಲಿ ಇರುವುದೋ, ಸಃ = ಅದೇ ಆತ್ಮ.
ಮಹಾಬಾಹೋ = ದೊಡ್ಡ ಪರಾಕ್ರಮವುಳ್ಳ ಅರ್ಜುನನೆ! ಏವಂ = ಈ ವಿಧವಾಗಿ, ಬುದ್ಧೇಃ = ಬುದ್ಧಿಗಿಂತಲೂ, ಪರಂ = ಅತೀತವಾಗಿ ಸಾಕ್ಷಿಯಾಗಿರುವ ಆತ್ಮವನ್ನು, ಬುದ್ಧ್ಯಾ = ತಿಳಿದುಕೊಂಡು, ಆತ್ಮಾನಂ = ಚಂಚಲವಾದ ಮನೋಭಾಗವನ್ನು, ಆತ್ಮನಾ = ವಿವೇಕಯುಕ್ತವಾದ ಮನೋಭಾಗದಿಂದ, ಸಂಸ್ತಭ್ಯ = ನಿಶ್ಚಲವಾಗುವಂತೆ ಮಾಡಿಕೊಂಡು, ದುರಾಸದಂ = ಅರ್ಥಮಾಡಿಕೊಳ್ಳುವುದಕ್ಕೇ ಕಷ್ಟವಾದ, ಕಾಮರೂಪಂ = ಕಾಮವೆಂಬ, ಶತ್ರುಂ = ಶತ್ರುವನ್ನು, ಜಹಿ = ಬಿಟ್ಟುಬಿಡು. (ಕೊಂದುಹಾಕು).
ಮಹಾವೀರನಾದ ಅರ್ಜುನನೆ! ಉಪನಿಷತ್ತುಗಳ ಸಿದ್ಧಾಂತದ ಪ್ರಕಾರ ಜಡವಾದ ದೇಹಕ್ಕಿಂತಲೂ, ಸಾಪೇಕ್ಷಿಕವಾಗಿ, ಚೈತನ್ಯವಂತಗಳಂತೆ ಕೆಲಸಮಾಡುವ ಜ್ಞಾನೇಂದ್ರಿಯಗಳು ಹೆಚ್ಚಿನವು. ಅವುಗಳಿಗಿಂತಲೂ, ಅವುಗಳನ್ನು ನಡೆಸುವ ಮನಸ್ಸು ಹೆಚ್ಚಿನದು. ಅದಕ್ಕಿಂತಲೂ, ಅದನ್ನು ನಿಗ್ರಹಿಸುವ ಬುದ್ಧಿಯು ಹೆಚ್ಚಿನದು. ಆದರೆ, ಬುದ್ಧಿಗಿಂತಲೂ ಅತೀತ ಸ್ಥಾನದಲ್ಲಿದ್ದು ಬುದ್ಧಿಗೆ ಕೂಡ ಚೈತನ್ಯವನ್ನು ಕೊಡುತ್ತಾ, ಬುದ್ಧಿಗೆ ಕೂಡ ಸಾಕ್ಷಿಯಾಗಿ ಯಾವುದಿರುವುದೋ, ಅದೇ ಪರಮಾತ್ಮ. ಮೊಟ್ಟಮೊದಲು ಬುದ್ಧಿಗೆ ಸಾಕ್ಷಿಯಾಗಿರುವ ಪರಮಾತ್ಮನನ್ನು ಕುರಿತು ಅವಗಾಹನೆಯನ್ನು ಸಂಪಾದಿಸಿಕೊಳ್ಳಬೇಕು. ಈ ಜ್ಞಾನದಿಂದ ಮನಸ್ಸಿನಲ್ಲಿ ಸ್ವಲ್ಪ ಭಾಗವು ಪವಿತ್ರವಾಗಿ, ವಿವೇಕವಂತವಾಗುತ್ತದೆ. ಅಂತಹ ಪವಿತ್ರವಾದ
ಮನೋಭಾಗದಿಂದ ಸಹಜವಾಗಿಯೇ ಮಲಿನವಾಗಿ, ಚಂಚಲವಾಗಿರುವ ಮನೋಭಾಗವನ್ನು ನಿಗ್ರಹಿಸಿ ನಿಶ್ಚಲಮಾಡಿಕೊಳ್ಳಬೇಕು. ಹಾಗೆ ಮಾಡಿದ ಹೊರತು ಕಾಮವೆಂದು ಕರೆಯಲ್ಪಡುವ ಶತ್ರುವನ್ನು ಸಂಹರಿಸಲು ಸಾಧ್ಯವಾಗದು. ಏಕೆಂದರೆ ಈ ಶತ್ರುವಿಗೆ ಇರುವ ಲಕ್ಷಣಗಳು ಅನೇಕ. ಅವು ಗೊಂದಲಮಯವಾಗಿ ಇರುವುದರಿಂದ ಈ ಶತ್ರುವನ್ನು ಗುರುತಿಸುವುದೇ ಕಷ್ಟ. ಹಾಗಾಗಿಯೇ, ಆತ್ಮತತ್ತ್ವವನ್ನು ಆಧಾರವನ್ನಾಗಿಸಿಕೊಂಡು ಅದರ ಮೇಲೆ ಸುಸ್ಥಿರವಾಗಿ ನಿಂತು ಈ ಶತ್ರುವನ್ನು ಸಂಹರಿಸು.
ಓಂ ತತ್ಸದಿತಿ, ಶ್ರೀಮದ್ಭಗವದ್ಗೀತಾಸು, ಉಪನಿಷತ್ಸು,
ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನ ಸಂವಾದೇ
ಕರ್ಮಯೋಗೋನಾಮ ತೃತೀಯೋಽಧ್ಯಾಯಃ
ಇಲ್ಲಿಗೆ ಕರ್ಮಯೋಗವೆಂಬ ಹೆಸರುಳ್ಳ
ಮೂರನೆಯ ಅಧ್ಯಾಯವು ಸಮಾಪ್ತವು.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ