ಶ್ರೀ ಮದ್ಭಗವದ್ಗೀತಾ – 75
38.ಧೂಮೇನಾವ್ರಿಯತೇ ವಹ್ನಿಃ ಯಥಾಽಽದರ್ಶೋ ಮಲೇನ ಚ।
ಯಥೋಲ್ಬೇನಾವೃತೋ ಗರ್ಭಃ ತಥಾ ತೇನೇದಮಾವೃತಮ್॥
ಯಥಾ = ಯಾವ ವಿಧವಾಗಿ, ವಹ್ನಿಃ = ಅಗ್ನಿಜ್ವಾಲೆಯು, ಧೂಮೇನ = ಹೊಗೆಯಿಂದ, ಆವ್ರಿಯತೇ = ಆವರಿಸಲ್ಪಡುತ್ತದೋ, ಚ = ಮತ್ತು, ಆದರ್ಶಃ = ಕನ್ನಡಿಯು, ಮಲೇನ = ಕೊಳೆಯಿಂದ, ಯಥಾ = ಯಾವ ವಿಧವಾಗಿ, ಆವ್ರಿಯತೇ = ಆವರಿಸಲ್ಪಡುತ್ತದೋ, ಗರ್ಭಃ = ತಾಯಿಯ ಗರ್ಭದಲ್ಲಿರುವ ಶಿಶುವು, ಯಥಾ = ಯಾವ ವಿಧವಾಗಿ, ಉಲ್ಬೇನ = ಮೇಲುಪೊರೆಯಿಂದ, ಆವೃತಃ = ಕವಿದಿದೆಯೋ, ತಥಾ = ಅದೇ ವಿಧವಾಗಿ, ತೇನ = ಆ ಕಾಮದಿಂದ, ಇದಂ = ಈ ವಿವೇಕಜ್ಞಾನವು, ಆವೃತಂ = ಆವರಿಸಲ್ಪಟ್ಟಿದೆ.
ಅರ್ಜುನನೆ! ಕಾಮವು ಮಾನವನ ವಿವೇಕಜ್ಞಾನವನ್ನು ಆವರಿಸಲ್ಪಡುವುದರಿಂದ ಆತನಿಗೆ ಶತ್ರುವಾಗುತ್ತಿದೆ. ಆದರೆ ಸಾಧಕರಲ್ಲಿ ಕೆಲವರು ಸತ್ತ್ವಗುಣಪ್ರಧಾನರೂ ಇರುತ್ತಾರೆ. ಅವರ ವಿವೇಕಜ್ಞಾನವನ್ನು ಈ ಕಾಮವು ಅಗ್ನಿಜ್ವಾಲೆಯನ್ನು ಹೊಗೆಯು ಆವರಿಸಿದ ಹಾಗೆ ಆವರಿಸುತ್ತದೆ. ಇದು ಊದಿದರೆ ಹೋಗಿಬಿಡುತ್ತದೆ. ಕೆಲವರು ರಜೋಗುಣಪ್ರಧಾನರು ಇರುತ್ತಾರೆ. ಅವರ ವಿವೇಕವನ್ನು ಈ ಕಾಮವು ಕನ್ನಡಿಯನ್ನು ಧೂಳು ಆವರಿಸಿದ ಹಾಗೆ ಆವರಿಸುತ್ತದೆ. ಇದು ಗಟ್ಟಿಯಾಗಿ ಒರೆಸಿದ ಹೊರತೂ ಹೋಗದು. ಕೆಲವರು ತಮೋಗುಣಪ್ರಧಾನರು ಇರುತ್ತಾರೆ. ಅವರ ವಿವೇಕವನ್ನು ಈ ಕಾಮವು ಗರ್ಭದಲ್ಲಿರುವ ಶಿಶುವನ್ನು ಮೇಲುಪೊರೆಯು ಆವರಿಸಿದ ಹಾಗೆ ಆವರಿಸುತ್ತದೆ. ಇದನ್ನು ಬಿಡಿಸಿಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸ.
39.ಆವೃತಂ ಜ್ಞಾನಮೇತೇನ ಜ್ಞಾನಿನೋ ನಿತ್ಯವೈರಿಣಾ।
ಕಾಮರೂಪೇಣ ಕೌಂತೇಯ! ದುಷ್ಪೂರೇಣಾನಲೇನ ಚ॥
ಕೌಂತೇಯ = ಎಲೈ ಅರ್ಜುನನೆ!, ಜ್ಞಾನಿನಃ = ವಿವೇಕಜ್ಞಾನವಂತನಿಗೆ, ನಿತ್ಯವೈರಿಣಾ = ಎಲ್ಲ ಸಮಯದಲ್ಲೂ ಶತ್ರುವಾದಂತಹುದೂ, ದುಷ್ಪೂರೇಣ = ತುಂಬಿಸಲು ಶಕ್ಯವಾಗದ್ದೂ, ಅನಲೇನ = “ಇನ್ನು ಸಾಕು’ ಎಂಬ ಮಾತೇ ಇಲ್ಲದ ಅಗ್ನಿಯಂತಹುದೂ, ಕಾಮರೂಪೇಣ = ಕೋರಿಕೆಯೆಂಬ ಆಕಾರವುಳ್ಳದ್ದೂ, ಆದ, ಏತೇನ = ಈ ಶತ್ರುವಿನಿಂದ, ಜ್ಞಾನಂ = ಮಾನವರ ವಿವೇಕಜ್ಞಾನವು, ಆವೃತಂ = ಆವರಿಸಲ್ಪಟ್ಟಿದೆ.
ಅರ್ಜುನನೆ! ನಿನ್ನ ಶತ್ರುವಾದ ಕಾಮವನ್ನು ಕುರಿತು ಮತ್ತಷ್ಟು ವಿವರಿಸುವೆನು ಕೇಳು. ಇದು ಅವಿವೇಕಿಗಳಿಗೆ ಪ್ರಾರಂಭದಲ್ಲಿ ಮಿತ್ರನು. ಪರಿಣಾಮದಲ್ಲಿ ಶತ್ರುವು. ವಿವೇಕವಂತರಿಗೆ ಮಾತ್ರ ಎಲ್ಲಾ ಕಾಲದಲ್ಲೂ ಶತ್ರುವೇ ಆಗಿದೆ. ಇದು ಒಂದು ಸಮುದ್ರದಂತಹುದು. ಇದನ್ನು ತುಂಬಿಸುವುದು ಯಾರಿಂದಲೂ ಆಗದು. ಇದು ಒಂದು ಅಗ್ನಿಜ್ವಾಲೆಯಂತಹುದು. ಇದಕ್ಕೆ “”ಇನ್ನು ಸಾಕು” ಎಂಬ ಮಾತಿಲ್ಲ. ಇದನ್ನು ಗುರುತಿಸುವುದು ಹೇಗೆಂದರೆ, ಇದು ಆಗಿಂದಾಗ್ಗೆ ಹೊಸ ಕೋರಿಕೆ ಎಂಬ ಸ್ವರೂಪದಿಂದ ನಿನ್ನ ಮುಂದೆ ನಿಲ್ಲುತ್ತಿರುತ್ತದೆ. ಈ ಕಾಮವೇ ಸಾಮಾನ್ಯ ಮಾನವನ ವಿವೇಕಜ್ಞಾನವನ್ನು ಆಗಿಂದಾಗ್ಗೆ ಮುಚ್ಚಿಬಿಡುತ್ತಿರುತ್ತದೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ