ಗೀತೆ – 74 : ಮಾನವರಿಂದ ಬಲಾತ್ಕಾರವಾಗಿ ಪಾಪ ಮಾಡಿಸುವುದು ಕಾಮ

Gita
Spread the love

ಶ್ರೀ ಮದ್ಭಗವದ್ಗೀತಾ : 74

ಅರ್ಜುನ ಉವಾಚ:
36.ಅಥ ಕೇನ ಪ್ರಯುಕ್ತೋಽಯಂ ಪಾಪಂ ಚರತಿ ಪೂರುಷಃ।
ಅನಿಚ್ಛನ್ನಪಿ ವಾರ್‌ಷ್ಣೇಯ! ಬಲಾದಿವ ನಿಯೋಜಿತಃ॥

ಅರ್ಜುನಃ ಉವಾಚ = ಅರ್ಜುನನು ಹೇಳಿದನು. ವಾರ್‌ಷ್ಣೇಯ = ಓ ಶ್ರೀಕೃಷ್ಣನೇ!, ಅಥ = ಆದರೆ, ಅಯಂ = ಈ ಸಾಧಕನಾದ , ಪೂರುಷಃ = ಮಾನವನು, ಕೇನ = ಯಾವ ಶಕ್ತಿಯಿಂದ, ಪ್ರಯುಕ್ತಃ = ಪ್ರೇರೇಪಿಸಲ್ಪಟ್ಟವನಾಗಿ, ಅನಿಚ್ಛನ್‌ ಅಪಿ = ತನಗೆ ಇಷ್ಟವಿಲ್ಲದಿದ್ದರೂ, ಬಲಾತ್‌ = ಬಲಾತ್ಕಾರವಾಗಿ, ನಿಯೋಜಿತಃ ಇವ = ನಿರ್ಬಂಧಿಸಲ್ಪಟ್ಟಿದ್ದಾನೆಯೋ ಎಂಬಂತೆ, ಪಾಪಂ = ಪಾಪವನ್ನು, ಚರತಿ = ಆಚರಿಸುತ್ತಿದ್ದಾನೆ?

ಅರ್ಜುನನು ಹೇಳಿದನು :-
ಶ್ರೀಕೃಷ್ಣನೇ! ಮಾನವನು ಬೇಡ ಬೇಡ ಎಂದುಕೊಳ್ಳುತ್ತಲೇ ತಪ್ಪುಗಳನ್ನೂ, ಪಾಪಗಳನ್ನೂ ಮಾಡುತ್ತಾ ಇರುವುದು ಕಾಣಿಸುತ್ತಿರುತ್ತದೆ. ಅವನಲ್ಲಿ ಯಾವುದೋ ಒಂದು ಶಕ್ತಿಯು ಹೊಕ್ಕಿ, ಅವನನ್ನು ನಿರ್ಬಂಧಿಸಿ, ಬಲಾತ್ಕಾರವಾಗಿ, ಆ ತಪ್ಪುಗಳನ್ನು ಮಾಡಿಸುತ್ತಿದೆಯೇನೋ ಎಂಬಂತೆ ಅವನ ಪರಿಸ್ಥಿತಿ ಇದೆ. ಹಾಗೆ ನಿರ್ಬಂಧಿಸುವ ಆ ಶಕ್ತಿ ಯಾವುದು?

ಶ್ರೀ ಭಗವಾನುವಾಚ:
37.ಕಾಮ ಏಷ ಕ್ರೋಧ ಏಷಃ ರಜೋಗುಣ ಸಮುದ್ಭವಃ।
ಮಹಾಶನೋ ಮಹಾಪಾಪ್ಮಾ ವಿದ್ಧ್ಯೇನಮಿಹ ವೈರಿಣಮ್‌॥

ಶ್ರೀಭಗವಾನ್‌ ಉವಾಚ = ಶ್ರೀಭಗವಂತನು ಹೇಳಿದನು. ಏಷಃ = ಈ ಶಕ್ತಿಯು, ಕಾಮಃ = ಕೋರಿಕೆಯೇ. ಏಷಃ = ಇದೇ, ಕ್ರೋಧಃ = ಕೋಪವಾಗಿ ಪರಿಣಾಮವಾಗುತ್ತದೆ. ಏಷಃ = ಈ ಕಾಮವು, ರಜೋಗುಣಸಮುದ್ಭವಃ = ರಜೋಗುಣದಿಂದ ಹುಟ್ಟಿ, ರಜೋಗುಣವನ್ನೇ ಹೆಚ್ಚಿಸುತ್ತದೆ. ಮಹಾಶನಃ = ಕೊನೆಯಿಲ್ಲದ ತಿಂಡಿಪೋತನೂ, ಮಹಾಪಾಪ್ಮಾ = ಪರಮಪಾಪಿಷ್ಠಿಯೂ ಆದ, ಏನಂ = ಈ ಕಾಮವನ್ನೇ, ಇಹ = ಈ ಸಂಸಾರಚಕ್ರದಲ್ಲಿ, ವೈರಿಣಂ = ಶತ್ರುವನ್ನಾಗಿ, ವಿದ್ಧಿ = ತಿಳಿದುಕೋ.

ಶ್ರೀಭಗವಂತನು ಹೇಳಿದನು :-
ಅರ್ಜುನನೆ! ಮಾನವರಿಂದ ಬಲಾತ್ಕಾರವಾಗಿ ಪಾಪಗಳನ್ನು ಮಾಡಿಸುವ ಶಕ್ತಿಯು ಕಾಮವೇ. ಇದು ರಜೋಗುಣದಿಂದ ಹುಟ್ಟುತ್ತದೆ. ರಜೋಗುಣವನ್ನು ಇನ್ನೂ ವೃದ್ಧಿಮಾಡುತ್ತದೆ. ರಜೋಗುಣ ಪ್ರಾಬಲ್ಯದಿಂದಲೇ ಕಾಮಕ್ಕೆ ವಿಘಾತವು ಉಂಟಾದಾಗ, ಅದು ಕ್ರೋಧವಾಗಿ ಪರಿಣಮಿಸುತ್ತದೆ. ಈ ಕಾಮವು ಕೊನೆಯಿಲ್ಲದ ತಿಂಡಿಪೋತನಂತಹುದು. ಎಷ್ಟು ಕೋರಿಕೆಗಳನ್ನು ತೀರಿಸಿದರೂ, ಇನ್ನೂ ಕೋರಿಕೆಗಳು ಹುಟ್ಟಿಕೊಂಡು ಬರುತ್ತಲೇ ಇರುತ್ತವೆ. ಇದರಿಂದಲೇ ತಮ್ಮ ವಿವೇಕಜ್ಞಾನವು ಮರೆಯಾಗಿ ಮಾನವರು ಎಷ್ಟೆಷ್ಟೋ ಪಾಪಗಳನ್ನು ಮಾಡುತ್ತಾ ಇರುತ್ತಾರೆ. ಆ ಕಾರಣದಿಂದಲೇ ಇದು ಮಹಾಪಾಪಿಷ್ಠಿಯಾಗಿದೆ. ಇದೇ ನಿನ್ನ ಪ್ರಧಾನವಾದ ಶತ್ರುವೆಂದು ಗುರುತಿಸು.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ