ಗೀತೆ – 72 : ಕೆಲವು ಅಭಿರುಚಿಗಳು, ಅನಿಷ್ಟಗಳು ಅಕಾರಣವಾಗಿ ಏರ್ಪಡುತ್ತಿರುತ್ತವೆ

Gita
Spread the love

ಶ್ರೀ ಮದ್ಭಗವದ್ಗೀತೆ : 72

34.ಇಂದ್ರಿಯಸ್ಯೇಂದ್ರಿಯಸ್ಯಾರ್ಥೇ ರಾಗದ್ವೇಷೌ ವ್ಯವಸ್ಥಿತೌ।
ತಯೋರ್ನ ವಶಮಾಗಚ್ಛೇತ್ ತೌ ಹ್ಯಸ್ಯ ಪರಿಪಂಥಿನೌ॥

ಇಂದ್ರಿಯಸ್ಯ-ಇಂದ್ರಿಯಸ್ಯ = ಪ್ರತಿ ಇಂದ್ರಿಯದ, ಅರ್ಥೇ = ವಿಷಯದಲ್ಲೂ, ರಾಗದ್ವೇಷೌ = ಇಷ್ಟವೂ, ಅನಿಷ್ಟವೂ ಎಂಬುವುವು, ವ್ಯವಸ್ಥಿತೌ = ಪ್ರಕೃತಿಯಿಂದ ಏರ್ಪಟ್ಟಿರುತ್ತವೆ. ತಯೋಃ = ಆ ರಾಗದ್ವೇಷಗಳಿಗೆ, ವಶಂ-ನ-ಆಗಚ್ಛೇತ್‌ = ವಶವಾಗಬಾರದು. ಹಿ = ಏಕೆಂದರೆ, ತೌ = ಆ ರಾಗದ್ವೇಷಗಳು ಎರಡೂ, ಅಸ್ಯ = ಈ ಮೋಕ್ಷಕಾಮನಿಗೆ, ಪರಿಪಂಥಿನೌ = ದಾರಿಗಳ್ಳರಂತಹವು ಆಗಿವೆ. (ಶತ್ರುಗಳು).

ಅರ್ಜುನನೆ! ವಿದ್ಯಾವಂತನಾದ ಮಾನವನು ತನ್ನ ಪ್ರಕೃತಿಯನ್ನು ಜಯಿಸುವ ಉಪಾಯವನ್ನು ಹೇಳುತ್ತೇನೆ ಕೇಳು. ವಿದ್ಯಾವಂತನಾದ ಪ್ರತಿ ಮಾನವನು ಶಾಸ್ತ್ರದ ಪ್ರಕಾರ ನಡೆದುಕೊಳ್ಳಬೇಕೆಂದು ಅಂದುಕೊಳ್ಳುತ್ತಲೇ ಇರುತ್ತಾನೆ. ಇಷ್ಟರೊಳಗೆ ಪೂರ್ವಸಂಸ್ಕಾರ ಸಿದ್ಧವಾದ ಇಷ್ಟಾನಿಷ್ಟಗಳು ದಾರಿಗಳ್ಳರಂತೆ ಬಂದು, ಮೇಲೆ ಬೀಳುತ್ತಿರುತ್ತವೆ. ಅಂದರೆ, ಪ್ರತಿ ಮಾನವನಿಗೂ, ಪ್ರತಿ ಇಂದ್ರಿಯದ ವಿಷಯದಲ್ಲೂ, ಕೆಲವು ವಿಧವಾದ ಅಭಿರುಚಿಗಳು, ಕೆಲವು ವಿಧವಾದ ಅನಿಷ್ಟಗಳು, ಅಕಾರಣವಾಗಿಯೇ ಏರ್ಪಡುತ್ತಿರುತ್ತವೆ. ನಿಜಕ್ಕೆ ಅವುಗಳು ಕಾರಣವಿಲ್ಲದ್ದವಲ್ಲ. ಇವು ಪೂರ್ವಜನ್ಮ ಸಂಸ್ಕಾರಗಳು ಎಂಬ ಕಾರಣದಿಂದ ಬರುತ್ತವೆ. ಆದರೆ, ಆ ಪೂರ್ವಜನ್ಮ ಸಂಸ್ಕಾರಗಳ ಬಲವು ಎಷ್ಟರವರೆಗೆ ಇರುತ್ತದೆಯೆಂದರೆ ಅಭಿರುಚಿಗಳನ್ನೂ, ಅಯಿಷ್ಟಗಳನ್ನೂ ಹುಟ್ಟಿಸುವವರೆಗೆ ಮಾತ್ರವೇ ಇರುತ್ತದೆ. ಇಷ್ಟಾನಿಷ್ಟಗಳನ್ನು ಕಾರ್ಯರೂಪದಲ್ಲಿ ಇಡಬೇಕೆಂದರೆ, ಈ ವ್ಯಕ್ತಿಯ ಮಾನಸಿಕ ಪ್ರಯತ್ನವೂ, ಇಂದ್ರಿಯ ಪ್ರಯತ್ನವೂ, ಕೂಡ ಸಹಕರಿಸಬೇಕಾಗಿರುತ್ತದೆ.
ಈ ವಿಷಯವನ್ನು ಗುರುತಿಸಿದ ವಿದ್ಯಾವಂತನು, ಪೂರ್ವಜನ್ಮಸಂಸ್ಕಾರ ಜನ್ಯವಾದ ಇಷ್ಟಾನಿಷ್ಟಗಳ ವೇಗವನ್ನು ಅವುಗಳು ಕಾರ್ಯರೂಪವನ್ನು ಧರಿಸುವುದಕ್ಕೆ ಮುಂಚೆಯೇ ತಡೆಯಬೇಕು. ಅಷ್ಟೇ ಹೊರತು ಅವುಗಳಿಗೆ ವಶನಾಗಬಾರದು. ಇದೇ ಅವುಗಳನ್ನು ಜಯಿಸುವ ಉಪಾಯ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ