ಶ್ರೀ ಮದ್ಭಗವದ್ಗೀತಾ : 71
33. ಸದೃಶಂ ಚೇಷ್ಟತೇ ಸ್ವಸ್ಯಾಃ ಪ್ರಕೃತೇರ್ ಜ್ಞಾನವಾನಪಿ।
ಪ್ರಕೃತಿಂ ಯಾಂತಿ ಭೂತಾನಿ ನಿಗ್ರಹಃ ಕಿಂ ಕರಿಷ್ಯತಿ॥
ಜ್ಞಾನವಾನ್ = ಶಾಸ್ತ್ರಜ್ಞಾನವುಳ್ಳವನು, ಅಪಿ = ಕೂಡ, ಸ್ವಸ್ಯಾಃ = ತನ್ನ, ಪ್ರಕೃತೇಃ = ಪೂರ್ವಜನ್ಮ ಸಂಸ್ಕಾರಕ್ಕೆ, ಸದೃಶಂ = ತಕ್ಕಂತೆ, ಚೇಷ್ಟತೇ = ಪ್ರವರ್ತಿಸುತ್ತಾನೆ. ಭೂತಾನಿ = ಮಾನವರು, ಪ್ರಕೃತಿಂ = ತಮ್ಮ ಪೂರ್ವಜನ್ಮದಿಂದ ಪ್ರಾಪ್ತವಾದ ಸ್ವಭಾವವನ್ನು, ಯಾಂತಿ = ಅನುಸರಿಸುತ್ತಾ ಇರುತ್ತಾರೆ. ನಿಗ್ರಹಃ = ತನ್ನ ಮೇಲೆ ತಾನು ಮಾಡಿಕೊಳ್ಳುವ ಶಾಸನವಾಗಲೀ, ರಾಜರು ಮೊದಲಾದವರ ಶಾಸನವಾಗಲೀ, ಕಿಂ = ಏನು, ಕರಿಷ್ಯತಿ = ಮಾಡಬಲ್ಲದು?
ಅರ್ಜುನನೆ! ಪ್ರತಿ ಮಾನವಜನ್ಮಕ್ಕೂ ಹಿಂದೆ ಪೂರ್ವಜನ್ಮದಲ್ಲಿ ಮಾಡಿಕೊಂಡ ಪಾಪಪುಣ್ಯಗಳಿರುತ್ತವೆ. ಅವುಗಳ ಫಲಿತಗಳು ಸಂಸ್ಕಾರ ರೂಪವಾಗಿ ಹಿಮ್ಮೆಟ್ಟಿ ಈ ಮಾನವನು ಹುಟ್ಟಿದಾಗಲೇ ಅವನನ್ನು ಆವಹಿಸುತ್ತವೆ. ಈ ಪೂರ್ವಜನ್ಮ ಸಂಸ್ಕಾರಗಳನ್ನೇ (ವಾಸನೆಗಳನ್ನೇ) ಪ್ರಕೃತಿಯೆಂದೂ, ಸ್ವಭಾವವೆಂದೂ ಕರೆಯುತ್ತಿರುತ್ತಾರೆ. ಹಾಗಾಗಿ ಪ್ರತಿ ಮಾನವನಿಗೂ, ಜನ್ಮಸಿದ್ಧವಾದ ಪ್ರಕೃತಿಯೊಂದು ಇರುತ್ತದೆ. ಆತನು ಅದಕ್ಕೆ ಒಳಗಾಗಿ ಪ್ರವರ್ತಿಸುತ್ತಾ ಇರುತ್ತಾನೆ. ಎಷ್ಟು ಗ್ರಂಥಗಳು ಓದಿದರೂ ಸರಿಯೇ, ಈ ಪ್ರಕೃತಿಯು ಬದಲಾಗುವುದು ಕಷ್ಟ. ಅದಕ್ಕಾಗಿಯೇ ಮಾನವನು ತನ್ನನ್ನು ತಾನೇ ನಿಗ್ರಹಮಾಡಿಕೊಳ್ಳಬೇಕೆಂದು ಪ್ರಯತ್ನ ಮಾಡಿದರೂ, ರಾಜರೂ, ತಂದೆತಾಯಿಂದಿರೂ, ಮೊದಲಾದವರು, ತಮ್ಮ ಶಾಸನಗಳ ಮೂಲಕ ನಿಗ್ರಹಿಸಬೇಕೆಂದು ಪ್ರಯತ್ನಪಟ್ಟರೂ, ಅವುಗಳಿಗೇನೂ ಅಂತಹ ಪ್ರಯೋಜನವು ಇರದು. ಮಾನವನ ಪ್ರಕೃತಿಯೇ ಸಾಮಾನ್ಯವಾಗಿ ಜಯಿಸುತ್ತಾ ಇರುತ್ತದೆ. ಅದಕ್ಕಾಗಿಯೇ ಮಾನವರು ಗೊತ್ತಿದ್ದರೂ ತಪ್ಪುಗಳನ್ನು ಮಾಡುತ್ತಾ ಇರುತ್ತಾರೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ