ಗೀತೆ – 70 : ವಿದ್ಯುಕ್ತಕರ್ಮಗಳನ್ನು ಆಚರಿಸಿಯೇ ತೀರಬೇಕು

Gita
Spread the love

ಶ್ರೀ ಮದ್ಭಗವದ್ಗೀತಾ : 70

31. ಯೇ ಮೇ ಮತಮಿದಂ ನಿತ್ಯಂ ಅನುತಿಷ್ಠಂತಿ ಮಾನವಾಃ।
ಶ್ರದ್ಧಾವಂತೋಽನಸೂಯಂತಃ ಮುಚ್ಯಂತೇ ತೇಽಪಿ ಕರ್ಮಭಿಃ॥

ಯೇ = ಯಾವ, ಮಾನವಾಃ = ಮಾನವರು, ಶ್ರದ್ಧಾವಂತಃ = ವಿಶ್ವಾಸ ಉಳ್ಳವರಾಗಿಯೂ, ಅನಸೂಯಂತಃ = ಅಸೂಯೆ ಇಲ್ಲದವರಾಗಿಯೂ ಆಗಿ, ಮೇ = ನನ್ನ, ಇದಂ = ಈ, ಮತಂ = ಸಿದ್ಧಾಂತವನ್ನು, ನಿತ್ಯಂ = ಎಲ್ಲ ಕಾಲದಲ್ಲಿಯೂ, ಅನುತಿಷ್ಠಂತಿ = ಆಚರಿಸುತ್ತಾರೆಯೋ, ತೇ-ಅಪಿ = ಅವರು ಕೂಡ, ಕರ್ಮಭಿಃ = ಎಲ್ಲಾ ವಿಧವಾದ ಕರ್ಮಗಳಿಂದ, ಮುಚ್ಯಂತೇ= ಬಿಡುಗಡೆಯನ್ನು ಹೊಂದುತ್ತಾರೆ.

ಅರ್ಜುನನೆ! ನಾನು ಇಲ್ಲಿಯವರೆಗೂ ನಿನಗೆ ವಿಧ್ಯುಕ್ತಕರ್ಮಗಳನ್ನು ಆಚರಿಸಿಯೇ ತೀರಬೇಕೆಂದು, ಆದರೆ, ಅವುಗಳನ್ನು ಫಲಾಸಕ್ತಿರಹಿತವಾಗಿಯೂ, ಕರ್ತೃತ್ವಬುದ್ಧಿರಹಿತವಾಗಿಯೂ, ಆಚರಿಸಬೇಕೆಂದೂ, ಹಾಗೆ ಮಾಡಿದರೆ, ಅವರು ಕರ್ಮಬಂಧವಿಮೋಚನೆಯನ್ನು ಹೊಂದುತ್ತಾರೆಂದೂ, ಅನೇಕ ವಿಧವಾದ ಯುಕ್ತಿಗಳಿಂದಲೂ, ಪ್ರಮಾಣಗಳಿಂದಲೂ, ವಿವರವಾಗಿ ಬೋಧಿಸಿದ್ದೇನೆ. ಈ ನನ್ನ ಸಿದ್ಧಾಂತವು ನಿನ್ನೊಬ್ಬನಿಗೋಸ್ಕರವೇ ಅಲ್ಲ. ಮಾನವರಲ್ಲಿ ಯಾರು ಈ ಸಿದ್ಧಾಂತವನ್ನು ಆಚರಿಸಿದರೂ ಅವರೆಲ್ಲರಿಗೂ ಕರ್ಮಬಂಧವಿಮೋಚನೆಯು ಉಂಟಾಗುತ್ತದೆ. ಆದರೆ ಅವರು ಈ ಸಿದ್ಧಾಂತವನ್ನು ಆಗಾಗ ಮಾತ್ರವಲ್ಲದೆ, ಯಾವಾಗಲೂ ಆಚರಿಸಬೇಕು. ಸತ್ಯವೋ, ಅಲ್ಲವೋ, ಎಂಬ ಸಂದೇಹವಿಲ್ಲದೆ, ದೃಢವಾದ ವಿಶ್ವಾಸದಿಂದ ಆಚರಿಸಬೇಕು. “”ಇದು ಬಹಳ ಕಷ್ಟವಾದ ಕೆಲಸ ಕಂಡ್ರೀ” ಎಂದೆನ್ನುತ್ತಾ ಈ ಸಿದ್ಧಾಂತದ ಮೇಲೆ ಅಸತ್ಯವಾದ ದೋಷಾರೋಪಣೆಗಳನ್ನು ಮಾಡದೆ, (ಅಂದರೆ, ಅಸೂಯಾರಹಿತವಾಗಿ) ಆಚರಿಸಬೇಕು.3

2. ಯೇ ತ್ವೇತದಭ್ಯಸೂಯಂತಃ ನಾನುತಿಷ್ಠಂತಿ ಮೇ ಮತಮ್‌। ಸರ್ವಜ್ಞಾನವಿಮೂಢಾಂಸ್ತಾನ್ ವಿದ್ಧಿ ನಷ್ಟಾನಚೇತಸಃ॥

ತು = ಇದಕ್ಕೆ ಭಿನ್ನವಾಗಿ, ಯೇ = ಯಾರಾದರೆ, ಮೇ = ನಾನು ಹೇಳಿದ, ಏತತ್‌ = ಈ, ಮತಂ = ಸಿದ್ಧಾಂತವನ್ನು, ಅಭ್ಯಸೂಯಂತಃ = ಕೆಲಸಕ್ಕೆ ಬಾರದ ನಿಂದಾರೋಪಣೆಗಳನ್ನು ಮಾಡುತ್ತಾ, ನ-ಅನುತಿಷ್ಠಂತಿ = ಅನುಸರಿಸದೇ ಇರುವರೋ, ತಾನ್‌ = ಅಂತಹವರನ್ನು, ಸರ್ವಜ್ಞಾನವಿಮೂಢಾನ್‌ = ಯಾವ ವಿಧವಾದ ಜ್ಞಾನವೂ ಇಲ್ಲದವರೆಂದೂ, ಅಚೇತಸಃ = ಅವಿವೇಕಿಗಳೆಂದೂ, ನಷ್ಟಾನ್‌ = ಪರಮಾರ್ಥದಿಂದ ಭ್ರಷ್ಟರೆಂದೂ, ವಿದ್ಧಿ = ತಿಳಿದುಕೋ.

ಅರ್ಜನನೆ! ಕೆಲವರು ಮಾತ್ರ ನಾನು ಹೇಳುವ ಈ ಕರ್ಮಯೋಗ ಸಿದ್ಧಾಂತದಮೇಲೆ ಪ್ರಯೋಜನವಿಲ್ಲದ ನಿಂದಾರೋಪಣೆಗಳನ್ನು ಮಾಡುತ್ತಾ ನಾನು ಹೇಳಿದ್ದನ್ನು ಹೇಳಿದಂತೆ ಮಾಡುವುದಿಲ್ಲ. ಅಂತಹವರಿಗೆ ಇತ್ತ ಕರ್ಮಯೋಗವಾಗಲೀ, ಅತ್ತ ಜ್ಞಾನಮಾರ್ಗವಾಗಲೀ, ಅರ್ಥವಾಗಲಿಲ್ಲವೆಂದು ತಿಳಿದುಕೋ. ಅದಕ್ಕಾಗಿಯೇ, ಅವರು ಅವಿವೇಕಿಗಳಾಗಿ, ಉಭಯಮಾರ್ಗಭ್ರಷ್ಟರಾಗಿ ಪರಮಾರ್ಥಪದವಿಯಿಂದ ಜಾರಿಹೋಗಿ ಪತಿತರಾಗಿ ಬಿಡುತ್ತಾರೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ