6ರಂದು ಜಿಲ್ಲಾ ಮಟ್ಟದ ಸಿರಿಧಾನ್ಯ, ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ
ರಾಮನಗರ, ಡಿ. 03- ಇಲ್ಲಿನ ಕೃಷಿ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳ 2025ರ ಅಂಗವಾಗಿ ರಾಜ್ಯ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯ ಪಾಕ ಸ್ಪರ್ಧೆಯ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದಲ್ಲಿ ಇದೇ ಡಿಸೆಂಬರ್ 6ರ ಶುಕ್ರವಾರ ನಗರದ ಕಂದಾಯ ಭವನದಲ್ಲಿರುವ ಕೊಠಡಿ ಸಂಖ್ಯೆ 101ರಲ್ಲಿ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಸ್ಪರ್ಧೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು/ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶವಿರುತ್ತದೆ.
ಸ್ಪರ್ಧಿಗಳಿಗೆ ಸೂಚನೆಗಳು: ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಜಂಟಿ ಕೃಷಿ ನಿರ್ದೇಶಕರ ಕಚೇರಿ, ನಂ.302, 3ನೇ ಮಹಡಿ, ಜಿಲ್ಲಾ ಪಂಚಾಯತ್ ಭವನ, ರಾಮನಗರ ಇಲ್ಲಿ ತಮ್ಮ ಹೆಸರು, ವಿಳಾಸ, ಆಧಾರ್ ಗುರುತಿನ ಚೀಟಿಯ ಪ್ರತಿ ಮತ್ತು ತಯಾರಿಸುವ ಖಾದ್ಯದ ಬಗ್ಗೆ ಮಾಹಿತಿಯನ್ನು ನೀಡಿ, ಡಿಸೆಂಬರ್ 5ರ ಸಂಜೆ 5.30ರೊಳಗಾಗಿ ತಪ್ಪದೇ ನೋಂದಣಿ ಮಾಡಿಕೊಳ್ಳಲು ಸೂಚಿಸಿದೆ. ನಂತರದಲ್ಲಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಪ್ರತಿ ಸ್ಪರ್ಧಿಗೆ ಒಂದೇ ಸಸ್ಯಹಾರಿ ತಿನಿಸು (ಸಿಹಿ ಅಥವಾ ಖಾರ ಅಥವಾ ಮರೆತುಹೋದ ಖಾದ್ಯ-ಲ್ಯಾಂಡ್ ರೇಸಸ್ ಪ್ರಾಡಕ್ಟ್) ತಯಾರಿಸಲು ಅವಕಾಶವಿರುತ್ತದೆ. ನೋಂದಣಿಯಲ್ಲಿ ನಮೂದಿಸಿದ ತಿನಿಸನ್ನು ಮನೆಯಲ್ಲಿಯೇ ತಯಾರಿಸಿ ರಾಮನಗರ ಜಿಲ್ಲಾ ಪಂಚಾಯಿತಿ ಭವನ ಆವರಣದ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರದಲ್ಲಿ ಡಿಸೆಂಬರ್ 6ರಂದು ಬೆಳಿಗ್ಗೆ 10 ಗಂಟೆಗೆ ಪ್ರದರ್ಶಿಸಬೇಕು.
ಜಿಲ್ಲಾ ಮಟ್ಟದಲ್ಲಿ ಸಿಹಿ ತಿನಿಸು, ಖಾರ ತಿನಿಸು (ಸಿರಿಧಾನ್ಯ ಖಾದ್ಯಗಳಿಗೆ ಮಾತ್ರ) ಮತ್ತು ಮರೆತುಹೋದ ಖಾದ್ಯಗಳ ತಿನಿಸಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ತಲಾ 5,000 ರೂ.ಗಳು, 3,000 ರೂ.ಗಳು ಹಾಗೂ 2,000 ರೂ.ಗಳನ್ನು ನೀಡಲಾಗುತ್ತದೆ.
ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರು, ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಖಾದ್ಯವನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳೊಂದಿಗೆ ಕಡ್ಡಾಯವಾಗಿ ಭಾಗವಹಿಸಬೇಕಾಗುತ್ತದೆ.
ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿ, ದೂ.ಸಂಖ್ಯೆ: 080-27273779, 9113058988, 8867448527, 8277932413 ಅನ್ನು ಸಂಪರ್ಕಿಸುವಂತೆ ರಾಮನಗರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.