ಶ್ರೀ ಮದ್ಭಗವದ್ಗೀತಾ : 69
30. ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯಾಧ್ಯಾತ್ಮಚೇತಸಾ।
ನಿರಾಶೀರ್ನಿರ್ಮಮೋ ಭೂತ್ವಾ ಯುಧ್ಯಸ್ವ ವಿಗತಜ್ವರಃ॥
ಸರ್ವಾಣಿ = ಎಲ್ಲ, ಕರ್ಮಾಣಿ = ಕರ್ಮಫಲಗಳನ್ನು, ಮಯಿ = ನನ್ನಲ್ಲಿ, ಸಂನ್ಯಸ್ಯ= ಸಮರ್ಪಿಸಿ, ಅಧ್ಯಾತ್ಮಚೇತಸಾ = “ನಾನು ಕರ್ತನಲ್ಲ’ ಎಂಬ ವಿವೇಕಬುದ್ಧಿಯಿಂದ, ನಿರಾಶೀಃ = ಕೋರಿಕೆಗಳು ಇಲ್ಲದವನಾಗಿಯೂ, ನಿರ್ಮಮಃ = ಮಮಕಾರವು ಇಲ್ಲದವನಾಗಿಯೂ, ವಿಗತಜ್ವರಃ = ಸಂತಾಪವು ಇಲ್ಲದವನಾಗಿಯೂ, ಭೂತ್ವಾ = ಆಗಿ, ಯುದ್ಧ್ಯಸ್ವ = ಯುದ್ಧವನ್ನು ಮಾಡು (ಕರ್ತವ್ಯನಿರ್ವಹಣೆಯನ್ನು ಮಾಡು).
ಅರ್ಜುನನೆ! ಸರ್ವಜ್ಞರಾದ ತತ್ತ್ವವೇತ್ತರು ಕೂಡ ಸಮಾಜದಲ್ಲಿ ಇದ್ದರೆ, ಕರ್ಮ ಮಾಡಲೇಬೇಕು ಎಂದು ನಿರೂಪಿಸಿದ್ದೇನೆ ಅಲ್ಲವೇ! ನೀನು ಮೋಕ್ಷಕಾಮಿಯೇ ಹೊರತು, ಇನ್ನೂ ತತ್ತ್ವವೇತ್ತನಾಗಿಲ್ಲ. ಆದ್ದರಿಂದ, ನಿನಗೆ ವಿಧ್ಯುಕ್ತವಾದ ಯುದ್ಧಕರ್ಮವನ್ನು ನೀನು ಮಾಡಿ ತೀರಲೇಬೇಕು. ಆದರೆ, ಹಾಗೆ ಮಾಡುವಾಗ ನಾಲ್ಕು ಅಂಶಗಳನ್ನು ಮನಸ್ಸಿನಲ್ಲಿ ದೃಢವಾಗಿ ನಿಲ್ಲಿಸಿಕೋ.
ಕರ್ಮಫಲಗಳೆಲ್ಲವನ್ನೂ ಪರಮಾತ್ಮನಾದ ನನಗೆ ಸಮರ್ಪಿಸು.
“”ಕರ್ತನು ಪ್ರಕೃತಿಯೇ ಹೊರತು, ನಾನು ಅಲ್ಲ” ಎಂಬ ವಿವೇಕಬುದ್ಧಿಯನ್ನು ಬೆಳೆಸಿಕೋ.
ಆಸೆಗಳೆಲ್ಲವನ್ನೂ ಬಿಟ್ಟುಬಿಡು.
ಮಮಕಾರಗಳನ್ನು ತೊಲಗಿಸಿಕೋ.
ಈ ನಾಲ್ಕನ್ನೂ ಸಾಧಿಸಿದರೆ, ನಿನ್ನ ಮನಸ್ಸಿನ ಕಲ್ಲೋಲಗಳು ತೊಲಗಿಹೋಗುತ್ತವೆ. ಹಾಗೆ ಕಲ್ಲೋಲರಹಿತನಾಗಿ ಸೇವಕನು ಪ್ರಭುಗಳ ಕಾರ್ಯಗಳನ್ನು ಮಾಡುವ ಹಾಗೆ, ನೀನು ಯುದ್ಧಕರ್ಮವನ್ನು ಮಾಡು.
ವಿವರಣೆ:
ಈ ಅಧ್ಯಾಯದ ಪ್ರಾರಂಭದಲ್ಲಿ ಅರ್ಜುನನು “”ಕರ್ಮಮಾರ್ಗವೋ? ಜ್ಞಾನಮಾರ್ಗವೋ? ಯಾವುದೋ ಒಂದನ್ನು ನಿಶ್ಚಯಿಸಿ ಹೇಳು” ಎಂದು ಭಗವಂತನನ್ನು ನೇರವಾಗಿ ಪ್ರಶ್ನಿಸಿದನು. ಅದಾದ ಮೇಲೆ 8ನೆಯ ಶ್ಲೋಕದಲ್ಲಿ ಭಗವಂತನು “”ನೀನು ವಿಧ್ಯುಕ್ತಕರ್ಮವನ್ನು ಮಾಡಲೇಬೇಕು” ಎಂದು ನಿಶ್ಚಯಿಸಿ ಹೇಳಿಬಿಟ್ಟನು. ಅದಾದ ಮೇಲೆ ತನ್ನ ನಿರ್ಣಯದ ಹಿಂದೆ ಇರುವ ಹೇತುಬದ್ಧತೆಯನ್ನು ವಿವರಿಸಿ ಮತ್ತೆ 19ನೆಯ ಶ್ಲೋಕದಲ್ಲಿ ತನ್ನ ನಿರ್ಣಯವನ್ನು ಪುನರುಕ್ತಿ ಮಾಡಿದನು. ಆದರೆ ಈ ಶ್ಲೋಕದಲ್ಲಿ “”ಮಾಡುವ ಕರ್ಮವನ್ನು ಕರ್ಮಫಲಾಸಕ್ತಿ ಇಲ್ಲದೇ ಮಾಡು” ಎಂದು ಒತ್ತಿ ಹೇಳಿದನು. ಆಮೇಲೆ ಹೀಗೆ ಹೇಳುವುದಕ್ಕೆ ಇರುವ ಕಾರಣಪರಂಪರೆಯನ್ನು 29ನೆಯ ಶ್ಲೋಕದವರೆಗೂ ವಿವರಿಸಿದನು. ಹೀಗೆ ವಿಷಯಪ್ರತಿಪಾದನೆಯನ್ನು ತರ್ಕಬದ್ಧವಾಗಿ ಮಾಡಿಕೊಂಡು ಬಂದ ಭಗವಂತನು ಅರ್ಜುನನ ಕರ್ತವ್ಯವನ್ನು ಮತ್ತೊಂದುಸಾರಿ ಪುನರುಕ್ತಿ ಮಾಡುತ್ತಿದ್ದಾನೆ ಎಂದು ನಾವು ಗುರುತಿಸಬೇಕು.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ