ಶ್ರೀ ಮದ್ಭಗವದ್ಗೀತಾ : 68
29. ಪ್ರಕೃತೇರ್ಗುಣಸಮ್ಮೂಢಾಃ ಸಜ್ಜಂತೇ ಗುಣಕರ್ಮಸು।
ತಾನಕೃತ್ಸ್ನವಿದೋ ಮಂದಾನ್ ಕೃತ್ಸ್ನವಿನ್ನ ವಿಚಾಲಯೇತ್॥
ಪ್ರಕೃತೇಃ = ಪ್ರಧಾನದ (ಅಥವಾ ಮಾಯೆಯ), ಗುಣಸಮ್ಮೂಢಾಃ = ಸತ್ತ್ವಾದಿ ಗುಣಗಳಿಂದ ಸಮ್ಮೋಹಿತರಾದವರು, ಗುಣಕರ್ಮಸು = ಗುಣಗಳ ವಿಕಾರಗಳಾದ ಇಂದ್ರಿಯಾದಿಗಳು ಮಾಡುವ ಕೆಲಸಗಳಲ್ಲಿ, ಸಜ್ಜಂತೇ = ಫಲಾಸಕ್ತರಾಗಿ ಸಂಗವನ್ನು ಪಡೆಯುತ್ತಿದ್ದಾರೆ. ತಾನ್ = ಅಂತಹ, ಅಕೃತ್ಸ್ನವಿದಃ = ಪರಿಪೂರ್ಣಜ್ಞಾನರಹಿತರಾದ, ಮಂದಾನ್ = ತಿಳಿವಳಿಕೆ ಕಡಿಮೆ ಇರುವವರನ್ನು, ಕೃತ್ಸ್ನವಿತ್ = ಪರಿಪೂರ್ಣ ಜ್ಞಾನವಿರುವ ವಿದ್ವಾಂಸನು, ನ-ವಿಚಾಲಯೇತ್ = ಅಲುಗಾಡಿಸಬಾರದು (ಬುದ್ಧಿಭೇದವನ್ನುಂಟುಮಾಡಬಾರದು).
ಪ್ರಕೃತಿಯ ಗುಣಗಳಾದ ಸತ್ತ್ವರಜಸ್ತಮಸ್ಸುಗಳೇ ಮಾನವರ ಇಂದ್ರಿಯಗಳಾಗಿ, ಅವುಗಳನ್ನು ಆಕರ್ಷಿಸುವ ವಿಷಯಗಳಾಗಿ, ಇವುಗಳ ಸಂಯೋಗದಿಂದ ಆಗುವ ಕರ್ಮಗಳಾಗಿ, ಪರಿಣಾಮ ಹೊಂದುತ್ತಿರುತ್ತವೆ ಎಂದು ಹೇಳಿಕೊಂಡಿದ್ದೇವೆ ಅಲ್ಲವೆ! ಈ ಎಲ್ಲ ಪರಿಣಾಮಗಳಿಗೂ ಮೂಲಭೂತಗಳಾದ ಗುಣಗಳು ಪರಸ್ಪರ ವಿರುದ್ಧವಾಗಿ ಪ್ರವರ್ತಿಸುತ್ತಾ ಇರುತ್ತವೆ. ಆದ ಕಾರಣ, ಇವುಗಳ ಅಂಶಗಳ ಸಮ್ಮೇಳನದಿಂದ ಏರ್ಪಡುವ ಕರ್ಮಗಳೆಲ್ಲವೂ ಬಣ್ಣದರಾಟ್ನದಲ್ಲಿನ ಬಣ್ಣಗಳಂತೆ ಬೆರತುಹೋಗಿ ಸಾಗುತ್ತಲಿರುತ್ತವೆ. ಲೋಕದಲ್ಲಿರುವ ಸಾಮಾನ್ಯ ಜನರು ಈ ಬಣ್ಣಗಳ ನಾಟ್ಯಗಳಿಗೆ ಸಮ್ಮೋಹಿತವಾಗಿ ಬಿಡುತ್ತಾ ಇರುತ್ತಾರೆಯೇ ಹೊರತು, ಈ ಬಣ್ಣಗಳನ್ನು ಕದಲಿಸುವ ದಾರಗಳು (ಗುಣಗಳು) ಯಾವುವು? ಆ ಗುಣಗಳನ್ನು ಕದಲಿಸುವ ಚೈತನ್ಯವು ಯಾವುದು? – ಎಂದು ಯೋಚಿಸರು. ಆದ್ದರಿಂದ ಗುಣಗಳ ಸಮ್ಮೋಹದಲ್ಲಿ ಬಿದ್ದು ಸಕಾಮಕರ್ಮಗಳನ್ನು ಮಾಡುತ್ತಾ ಇರುತ್ತಾರೆ. ಅಂತಹವರು ಹೊರಗಿನ ಬಣ್ಣಗಳನ್ನೇ ನೋಡಬಲ್ಲವರಾಗುತ್ತಾರೆಯೇ ಹೊರತು, ಅವುಗಳಿಗೆ ಮೂಲವಾದ ಚೈತನ್ಯವನ್ನು ನೋಡಲಾಗದೇ ಹೋಗುತ್ತಿದ್ದಾರೆ. ಆದ್ದರಿಂದ ಅವರನ್ನು ಅಲ್ಪಜ್ಞರು ಎಂದು ಕರೆಯಬೇಕು. ಮಂದಮತಿಗಳೆನ್ನಬೇಕು. ಯಾವನಾದರೆ ಮೂಲಚೈತನ್ಯವನ್ನು ಸ್ಪಷ್ಟವಾಗಿ ದರ್ಶಿಸಬಲ್ಲವನಾಗುತ್ತಿದ್ದಾನೆಯೋ ಅವನು ಸರ್ವವೇತ್ತನಾಗುತ್ತಾನೆ. ಆತನೇ ತತ್ತ್ವವೇತ್ತನು. ಅಂತಹ ಪ್ರಜ್ಞಾಶಾಲಿಯು ಅಲ್ಪಜ್ಞರಾಗಿ, ಗುಣಸಮ್ಮೋಹಿತರಾಗಿ, ಕಾಮ್ಯಕರ್ಮಗಳಲ್ಲಿ ಆಸಕ್ತಿಯಿಂದ ನಡೆದುಕೊಳ್ಳುವವರನ್ನು ಇದ್ದಕ್ಕಿದ್ದಂತೆ ಚೆದುರಿಹೋಗುವಂತೆ ಮಾಡಬಾರದು. ಅವರನ್ನು ತನ್ನ ಆಚರಣೆಯಿಂದ ಸಕಾಮಕರ್ಮದೊಳಗಿನಿಂದ ನಿಷ್ಕಾಮಕರ್ಮದೊಳಕ್ಕೆ, ನಿಷ್ಕಾಮಕರ್ಮದಿಂದ ಜ್ಞಾನಯೋಗದೊಳಕ್ಕೆ ಮೆಲ್ಲಗೆ ತರಬೇಕು. ಲೋಕಸಂಗ್ರಹವೆಂದರೆ ಇದೇ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ