ಗೀತೆ – 67 : ತತ್ತ್ವವೇತ್ತನು ಲೋಕಸಂಗ್ರಹಕ್ಕಾಗಿ ಕರ್ಮಾಚರಣೆ ಮಾಡಿದರೂ, ಕರ್ಮಬಂಧದಲ್ಲಿ ಸಿಲುಕನು

Gita
Spread the love

ಶ್ರೀ ಮದ್ಭಗವದ್ಗೀತಾ : 67

28. ತತ್ತ್ವವಿತ್ತು ಮಹಾಬಾಹೋ! ಗುಣಕರ್ಮವಿಭಾಗಯೋಃ।
ಗುಣಾ ಗುಣೇಷು ವರ್ತಂತೇ ಇತಿ ಮತ್ವಾ ನ ಸಜ್ಜತೇ॥

ಮಹಾಬಾಹೋ = ಎಲೈ ಅರ್ಜುನನೆ!, ತು = ಇದಕ್ಕೆ ಭಿನ್ನವಾಗಿ, ಗುಣಕರ್ಮವಿಭಾಗಯೋಃ = ಗುಣವಿಭಾಗ, ಕರ್ಮವಿಭಾಗಗಳ, ತತ್ತ್ವವಿತ್‌ = ತತ್ತ್ವವನ್ನು ತಿಳಿದವನು, ಗುಣಾಃ = ಸತ್ತ್ವರಜೋಗುಣಗಳ ಪರಿಣಾಮಗಳಾದ ಇಂದ್ರಿಯಗಳು, ಗುಣೇಷು = ತಮೋಗುಣ ಪರಿಣಾಮಗಳಾದ ಇಂದ್ರಿಯವಿಷಯಗಳಲ್ಲಿ, ವರ್ತಂತೇ = ಪ್ರವರ್ತಿಸುತ್ತಿವೆ, ಇತಿ = ಎಂದು, ಮತ್ವಾ = ತಿಳಿದುಕೊಂಡು, ನ-ಸಜ್ಜತೇ = ಕರ್ತೃತ್ವಾಭಿಮಾನದಲ್ಲಿ, ಸಿಕ್ಕಿಹಾಕಿಕೊಳ್ಳುವುದಿಲ್ಲ.

ಅರ್ಜುನನೆ! ಪ್ರಕೃತಿಶಕ್ತಿಯೇ ಇಂದ್ರಿಯಗಳಾಗಿಯೂ, ಇಂದ್ರಿಯಗಳನ್ನು ಆಕರ್ಷಿಸುವ ವಿಷಯಗಳಾಗಿಯೂ ಕೂಡ ಪರಿಣಾಮಹೊಂದುತ್ತದೆ ಎಂದು ಹಿಂದಿನ ಶ್ಲೋಕದಲ್ಲಿಯೇ ತಿಳಿಸಿದ್ದೇನೆ. ಇನ್ನೂ ಸ್ವಲ್ಪ ವಿವರವಾಗಿ ಹೇಳಬೇಕಾದರೆ, ಪ್ರಕೃತಿಶಕ್ತಿಯ ಸತ್ತ್ವಗುಣಾಂಶಗಳ ಸಮ್ಮೇಳನದಿಂದ “ಅಂತಃಕರಣ’ (ಮನಸ್ಸು) ಎಂಬ ಇಂದ್ರಿಯವು ಉಂಟಾಗುತ್ತಿದೆ. ರಜೋಗುಣಾಂಶಗಳಿಂದ ಇತರ ಜ್ಞಾನೇಂದ್ರಿಯಗಳು ಉಂಟಾಗುತ್ತಿವೆ. ತಮೋಗುಣಾಂಶಗಳಿಂದ ಜ್ಞಾನೇಂದ್ರಿಯಗಳನ್ನು ಆಕರ್ಷಿಸುವ ವಿವಿಧ ವಿಷಯಗಳು ಉಂಟಾಗುತ್ತಿವೆ. ಮಾನವರು ಮಾಡುವ ಕರ್ಮಗಳು ಕೂಡ ಈ ಸತ್ತ್ವರಜಸ್ತಮೋಗುಣಗಳನ್ನು ಅನುಸರಿಸಿಯೇ ವಿವಿಧ ರೀತಿಗಳಾಗಿ ವಿಭಾಗವನ್ನು ಹೊಂದುತ್ತಿರುತ್ತವೆ. ಈ ವಿಧವಾಗಿ ಸತ್ತ್ವರಜಸ್ತಮೋಗುಣಗಳ ಸನ್ನಿವೇಶದ ವೈವಿಧ್ಯವನ್ನು ಅನುಸರಿಸಿ ಏರ್ಪಡುವ ಇಂದ್ರಿಯ ವಿಭಾಗಗಳನ್ನೂ, ಅವುಗಳನ್ನು ಆಕರ್ಷಿಸುವ ವಿಷಯ ವಿಭಾಗಗಳನ್ನು, ವಿಷಯೇಂದ್ರಿಯ ಸಂಯೋಗದಿಂದ ಆಗುವ ಕರ್ಮಗಳಲ್ಲಿನ ವಿಭಾಗಗಳನ್ನು ಸ್ಪಷ್ಟವಾಗಿ ಗುರುತಿಸಿದವನೇ ತತ್ತ್ವವೇತ್ತನು. ಅಂತಹ ತತ್ತ್ವವೇತ್ತನು ಎಲ್ಲಿ ಯಾವ ಜೀವಿಯು, ಯಾವ ಇಂದ್ರಿಯದಿಂದ ಕದಲಿ, ಯಾವ ವಿಧವಾದ ಕೆಲಸವನ್ನು ಮಾಡಿದರೂ, ಆ ಇಂದ್ರಿಯಗಳಿಗೂ, ವಿಷಯಗಳಿಗೂ, ಕರ್ಮಗಳಿಗೂ, ಹಿಂದೆ ಇರುವ ಗುಣಗಳನ್ನು ಗುರುತಿಸಬಲ್ಲನು. ಹಾಗೆ ಗುರುತಿಸದವನು “”ಇಂದ್ರಿಯಗಳು ವಿಷಯಗಳ ಹಿಂದೆ ಬೀಳುತ್ತಿವೆ” ಎಂದು ಭಾವಿಸನು. “”ಇಂದ್ರಿಯರೂಪದಲ್ಲಿರುವ ಸತ್ತ್ವರಜೋಗುಣಾಂಶಗಳು, ವಿಷಯರೂಪದಲ್ಲಿರುವ ತಮೋಗುಣಾಂಶಗಳೊಂದಿಗೆ ಸಂಪರ್ಕವನ್ನು ಹೊಂದುತ್ತಿವೆ” ಎಂದು ಸ್ಪಷ್ಟವಾಗಿ ಗ್ರಹಿಸಬಲ್ಲನು. ಅದಕ್ಕಾಗಿಯೇ, ಅಂತಹ ತತ್ತ್ವವೇತ್ತನು ಇಂದ್ರಿಯಗಳಿಂದ ತನಗೆ ಸಂಕ್ರಮಿಸುವ ಕರ್ತೃತ್ವದಿಂದಾಗಲೀ, ಜ್ಞಾನೇಂದ್ರಿಯಗಳಿಗೆ ರಾಜನಾದ ಮನಸ್ಸಿನಿಂದ ಸಂಕ್ರಮಿಸುವ ಫಲಾನುಭವದಿಂದಾಗಲೀ, ಕಟ್ಟಿಹಾಕಲ್ಪಡನು. ಹಾಗಾಗಿಯೇ, ತತ್ತ್ವವೇತ್ತನು ಲೋಕಸಂಗ್ರಹಕ್ಕಾಗಿ ಕರ್ಮಾಚರಣೆ ಮಾಡಿದರೂ, ಕರ್ಮಬಂಧದಲ್ಲಿ ಸಿಲುಕನು.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ