ಗೀತೆ – 66 : ಪ್ರಕೃತಿಶಕ್ತಿಯೇ ಶರೀರಾದಿ ರೂಪದಲ್ಲಿ ಲೌಕಿಕ ವೈದಿಕ ಕರ್ಮಗಳೆಲ್ಲವನ್ನೂ ನಿರ್ವಹಿಸುತ್ತಿದೆ

Gita
Spread the love

ಶ್ರೀ ಮದ್ಭಗವದ್ಗೀತಾ : 66

26.ನ ಬುದ್ಧಿಭೇದಂ ಜನಯೇತ್ ಅಜ್ಞಾನಾಂ ಕರ್ಮಸಂಗಿನಾಮ್‌। ಜೋಷಯೇತ್ ಸರ್ವಕರ್ಮಾಣಿ ವಿದ್ವಾನ್ ಯುಕ್ತ ಸ್ಸಮಾಚರನ್‌॥

ಕರ್ಮಸಂಗಿನಾಂ = ಕಾಮ್ಯಕರ್ಮಗಳಲ್ಲಿ ಆಸಕ್ತಿಯುಳ್ಳ, ಅಜ್ಞಾನಾಂ = ಅವಿವೇಕಿಗಳಾದ ಜನರಿಗೆ, ಬುದ್ಧಿಭೇದಂ = ಮನಸ್ಸಿನಲ್ಲಿ ಗೊಂದಲವನ್ನು, ನ-ಜನಯೇತ್‌ = ಉಂಟುಮಾಡಬಾರದು. ವಿದ್ವಾನ್‌ = ಜ್ಞಾನನಿಷ್ಠನಾದವನು, ಸರ್ವಕರ್ಮಾಣಿ = ವಿಹಿತಕರ್ಮಗಳೆಲ್ಲವನ್ನೂ, ಯುಕ್ತಃ = ನಿಷ್ಕಾಮಕರ್ಮಯೋಗದೊಂದಿಗೆ ಕೂಡಿದವನಾಗಿ, ಸಮಾಚರನ್‌ = ಆಚರಿಸಿ ತೋರಿಸುತ್ತಾ, ಜೋಷಯೇತ್‌ = ಅಜ್ಞಾನಿಗಳಿಂದ ಕೂಡ ಆ ವಿಧವಾಗಿ ಕರ್ಮಗಳನ್ನು ಮಾಡಿಸಬೇಕು.

ಜ್ಞಾನಮಾರ್ಗವು ಎಲ್ಲರಿಗೂ ತಲೆಗೆ ಹತ್ತುವುದಿಲ್ಲ. ಆದರೂ, ಅವರಿಗೆ ಕೈಯ್ಯಲ್ಲಾದ ಮಾರ್ಗದಲ್ಲಿ ಆಧ್ಯಾತ್ಮಿಕ ಸಾಧನೆಗಳು ಯಾವು ಯಾವುವೋ, ಮಾಡಿಕೊಳ್ಳುತ್ತಾ ಹೋಗುತ್ತಿರುತ್ತಾರೆ, ಅವುಗಳಲ್ಲಿ ಕೆಲವು ಸಕಾಮವಾಗಿರುತ್ತವೆ. ಕೆಲವು ನಿಷ್ಕಾಮವಾಗಿರುತ್ತವೆ. ಹೀಗೆ ಯಾವುದೋ ಒಂದು ಸಾಧನಾಮಾರ್ಗದಲ್ಲಿರುವ ಮಂದಬುದ್ಧಿಗಳಾದ ಸಾಧಕರ ಹತ್ತಿರಕ್ಕೆ ಹೋಗಿ, “”ಎಲೈ ಹುಚ್ಚನೆ! ಒಳಗಿರುವ ಆತ್ಮನು ಕರ್ತನಲ್ಲವೇ ಅಲ್ಲ. ಅವನು ಕರ್ಮಫಲಭೋಕ್ತನು ಕೂಡ ಅಲ್ಲ. ಈ ವಿಷಯವನ್ನು ಉಪನಿಷತ್ತುಗಳೇ ಹೇಳುತ್ತಿವೆ” ಎಂದು ಈ ವಿಧವಾಗಿ ಉಪದೇಶಗಳನ್ನು ಮಾಡಿದರೆ, ಅವರಿಗೆ ಈ ಜ್ಞಾನಬೋಧೆಯು ಹತ್ತುವುದಿಲ್ಲ. ಅಷ್ಟುಮಾತ್ರವಲ್ಲದೆ, ತಾವು ಮಾಡುವ ಸಾಧನಾಮಾರ್ಗದ ಮೇಲೆ ಇರುವ ವಿಶ್ವಾಸವು ಕೂಡಾ ಕೆಟ್ಟುಹೋಗಿ, ಅವರ ಮನಸ್ಸೆಲ್ಲವೂ ಗೊಂದಲದಲ್ಲಿ ಬಿದ್ದುಬಿಡುತ್ತದೆ. ಆದ್ದರಿಂದ, ಜ್ಞಾನಸಿದ್ಧನಾದವನು ಇಂತಹ ಹುಚ್ಚುತನದ ಉಪದೇಶಗಳನ್ನು
ಮಾಡಬಾರದು. ಅದಕ್ಕೆ ಬದಲು, ತಾನೇ ಸ್ವಯಂ ನಿಷ್ಕಾಮ ಕರ್ಮಾಚರಣೆಯನ್ನು ಮಾಡಿ ತೋರಿಸುತ್ತಾ, ಅದರಿಂದ ತಾನು ಎಂತಹ ಸಮುನ್ನತವಾದ ಆನಂದವನ್ನು ಪಡೆುದುಕೊಳ್ಳಬಲ್ಲವನಾಗುತ್ತಿದ್ದಾನೋ, ನಿದರ್ಶನವನ್ನು ತೋರಿಸುತ್ತಾ, ತನ್ನ ಆಚರಣೆಯಿಂದ ಅಜ್ಞಾನಿಗಳಾದವರನ್ನು ನಿಷ್ಕಾಮಕರ್ಮಯೋಗಮಾರ್ಗದಲ್ಲಿ ಪ್ರವೇಶಿಸುವ ಹಾಗೆ ಪ್ರೋತ್ಸಾಹಿಸಬೇಕು.

27. ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ।
ಅಹಂಕಾರವಿಮೂಢಾತ್ಮಾ ಕರ್ತಾಽಹಮಿತಿ ಮನ್ಯತೇ॥

ಪ್ರಕೃತೇಃ = ಸತ್ತ್ವ ರಜಸ್ತಮೋ ಗುಣಗಳ ಸಮ್ಮೇಳನ ರೂಪವಾದ ಪ್ರಧಾನಕ್ಕೆ (ಅಥವಾ ಮಾಯೆಗೆ) ಸಂಬಂಧಿಸಿದ, ಗುಣೈಃ = ಸತ್ತ್ವಾದಿ ಗುಣಗಳಿಂದ, ಸರ್ವಶಃ = ಎಲ್ಲ ವಿಧದಲ್ಲೂ, ಕ್ರಿಯಮಾಣಾನಿ = ಮಾಡಲ್ಪಡುತ್ತಿರುವ, ಕರ್ಮಾಣಿ = ಕರ್ಮಗಳನ್ನು ಕುರಿತು, – “”ಕರ್ತಾ = ಮಾಡುತ್ತಿರುವವನು, ಅಹಂ = ನಾನು”, ಇತಿ = ಎಂದು, ಅಹಂಕಾರವಿಮೂಢಾತ್ಮಾ = ಅಹಂಕಾರದಿಂದ ಸಮ್ಮೋಹಿತವಾದ ಮನಸ್ಸುಳ್ಳವನು, ಮನ್ಯತೇ = ಭಾವಿಸುತ್ತಿದ್ದಾನೆ.

ಅರ್ಜುನನೆ! ನಿನಗೆ ಗೊತ್ತಲ್ಲವೆ! ಈ ಸಮಸ್ತ ಸೃಷ್ಟಿಗೂ ಸರ್ವಾಧಾರಭೂತವಾಗಿರುವುದು ಪರಮಾತ್ಮನೇ ಆದರೂ, (ಸತ್ಪದಾರ್ಥವೇ ಆದರೂ), ಆ ಪರಮಾತ್ಮನನ್ನು ಪ್ರಕೃತಿಯೆಂದು ಕರೆಯಲ್ಪಡುವ ಒಂದು ಶಕ್ತಿಯು ಆವರಿಸಿಕೊಂಡು ಇರುತ್ತದೆ. ಪ್ರಕೃತಿಯಲ್ಲಿ ಅಂತರ್ಭಾಗವಾಗಿ ಸತ್ತ್ವರಜಸ್ತಮೋಗುಣಗಳಿವೆ. ಆ ಗುಣಗಳೇ ಆಯಾ ಜೀವಿಗಳ ಶರೀರಗಳಾಗಿ, ಅವುಗಳಲ್ಲಿನ ಇಂದ್ರಿಯಗಳಾಗಿ, ಅವುಗಳನ್ನು ನಡೆಸುವ ಮನಸ್ಸಾಗಿ ಪರಿಣಾಮವನ್ನು ಪಡೆಯುತ್ತಿವೆ. ಈ ಶರೀರಾದಿಗಳಿಂದ ಬಗೆಬಗೆಯ ಕರ್ಮಗಳು ನಡೆಯುತ್ತಿರುತ್ತವೆ. ಅಂದರೆ, ಪ್ರಕೃತಿಶಕ್ತಿಯೇ ಶರೀರಾದಿ ರೂಪದಲ್ಲಿ ಲೌಕಿಕ ವೈದಿಕ ಕರ್ಮಗಳೆಲ್ಲವನ್ನೂ ನಿರ್ವಹಿಸುತ್ತಿದೆ. ಇಂತಹ ಶರೀರಾದಿಗಳಲ್ಲಿ ಜೀವನಾಗಿ ಇರುವವನು ಮಾತ್ರ ನಿಜಕ್ಕೆ, ಪರಮಾತ್ಮನೇ. ಆದರೆ, ಪ್ರಕೃತಿಯ ಬಲದಿಂದ ಜೀವನನ್ನು, ಅಹಂಕಾರವು ಆವಹಿಸುತ್ತದೆ. “ಅಹಂಕಾರ’ ಎಂದರೆ “”ಈ ಶರೀರ – ಇಂದ್ರಿಯ – ಚಿತ್ತಾದಿಗಳೆಲ್ಲವೂ ನಾನೇ” ಎಂಬ ನಿಶ್ಚಯವು. ಇದನ್ನೇ “ದೇಹಾದಿ ತಾದಾತ್ಮ್ಯ’ ಎಂದೂ ಸಹ ಹೇಳುತ್ತಾರೆ. ಈ ತಾದಾತ್ಮ್ಯವು ಜೀವಿಯ ಮನಸ್ಸನ್ನು ಒಂದು ವಿಧವಾದ ಸಮ್ಮೋಹದಲ್ಲಿ ಬೀಳಿಸಿ ಬಿಡುತ್ತದೆ. ಆ ಸಮ್ಮೋಹದಿಂದ ಜೀವನು “”ಈ ಕೆಲಸಗಳನ್ನು ಮಾಡುವುದು ಪ್ರಕೃತಿಯಲ್ಲ, ನಾನೇ. ನಾನೇ ಕರ್ತನು” ಎಂಬ ಭಾವದಲ್ಲಿ ಬಿದ್ದುಬಿಡುತ್ತಾನೆ. ಆ ಕರ್ತೃತ್ವಭಾವನೆಯಿಂದಲೇ ಆ ಜೀವನು ಕರ್ಮಗಳಲ್ಲಿ ಇನ್ನಷ್ಟು ಹೆಚ್ಚಾಗಿ ಸಿಕ್ಕಿಕೊಂಡು ಬಿಡುತ್ತಿದ್ದಾನೆ.
ವಿವರಣೆ:
26ನೆಯ ಶ್ಲೋಕದಲ್ಲಿ ಹೇಳಿದ ಅಂಶದ ತರ್ಕಬದ್ಧತೆಯನ್ನು ಭಗವಂತನು ಇಲ್ಲಿಂದ ಮೂರು ಶ್ಲೋಕಗಳಲ್ಲಿ ಹಂತ ಹಂತವಾಗಿ ಪ್ರದರ್ಶಿಸಲಿದ್ದಾನೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ