ಗೀತೆ – 65 : ಜ್ಞಾನಿ, ಅಜ್ಞಾನಿ ಮಾಡುವ ಕರ್ಮದ ತಾರತಮ್ಯ

Gita
Spread the love

ಶ್ರೀ ಮದ್ಭಗವದ್ಗೀತಾ : 65

24. ಉತ್ಸೀದೇಯುರಿಮೇ ಲೋಕಾಃ ನ ಕುರ್ಯಾಂ ಕರ್ಮ ಚೇದಹಮ್‌।
ಸಂಕರಸ್ಯ ಚ ಕರ್ತಾ ಸ್ಯಾಂ ಉಪಹನ್ಯಾ ಮಿಮಾಃ ಪ್ರಜಾಃ॥

ಅಹಂ = ನಾನು, ಕರ್ಮ = ವಿಧಿವಿಹಿತವಾದ ಕರ್ಮವನ್ನು, ನ-ಕುರ್ಯಾಂ-ಚೇತ್‌ = ಮಾಡದೇ ಇದ್ದರೆ, ಇಮೇ = ಈ, ಲೋಕಾಃ = ಪ್ರಜೆಗಳು, ಉತ್ಸೀದೇಯುಃ = ನಶಿಸಿಹೋಗುವರು. ಚ = ಮತ್ತು, ಸಂಕರಸ್ಯ = ಅವರ ವೃತ್ತಿಗಳ ಸಾಂಕರ್ಯಕ್ಕೆ, ಕರ್ತಾ = ಕಾರಣನಾದವನು, ಸ್ಯಾಂ = ಆಗುತ್ತೇನೆ. ಇಮಾಃ = ಈ, ಪ್ರಜಾಃ = ಮಾನವರನ್ನು, ಉಪಹನ್ಯಾಂ = ಹಾಳುಮಾಡಿದವನಾಗುತ್ತೇನೆ.

ನಾನು ಹಾಗೆ ಕರ್ಮಯೋಗಮಾರ್ಗದಲ್ಲಿ ಇಲ್ಲದಿದ್ದರೆ, ನನ್ನನ್ನು ನೋಡಿ, ಇತರ ಪ್ರಜೆಗಳು ಕೂಡ ಅವರಿಗೆ ವಿಧಿವಿಹಿತವಾದ ಕರ್ಮಗಳನ್ನು ಬಿಟ್ಟುಬಿಡುತ್ತಾರೆ. ಅದರಿಂದ ಸೃಷ್ಟಿಚಕ್ರವು ಹೊಡೆತಕ್ಕೆ ಒಳಗಾಗುತ್ತದೆ. ಅದರಿಂದ ಮಾನವಜಾತಿಗೇ ನಾಶವುಂಟಾಗುತ್ತದೆ. ಅಷ್ಟುಮಾತ್ರವಲ್ಲದೆ ಮಾನವ ಸಮಾಜವ್ಯವಸ್ಥೆ ಎಲ್ಲವೂ ಅವರವರ ವೃತ್ತಿಗಳ ನಿರ್ವಹಣೆ ಮೇಲೆ ಆಧಾರಪಟ್ಟಿರುತ್ತದೆ. ಸೃಷ್ಟಿಚಕ್ರಕ್ಕೆ ಹೊಡೆತಬಿದ್ದರೆ, ಆ ವೃತ್ತಿಗಳ ವ್ಯವಸ್ಥೆಯೂ ಹಾಳಾಗಿಬಿಡುತ್ತದೆ. ಅದರಿಂದ ಒಬ್ಬರು ಮಾಡಬೇಕಾದ ವೃತ್ತಿಯನ್ನು ಮತ್ತೊಬ್ಬರು ಮಾಡಬೇಕಾಗಿ ಬರುತ್ತದೆ. ಅದರಿಂದ ವಿವಿಧ ವೃತ್ತಿಗಳ ಮಧ್ಯದಲ್ಲಿ ಅನಾರೋಗ್ಯಕರವಾದ ಸ್ಪರ್ಧೆ ಉಂಟಾಗುತ್ತದೆ. ಇಂತಹ ಸ್ಪರ್ಧೆಯನ್ನೇ ವೃತ್ತಿಸಾಂಕರ್ಯವೆನ್ನುತ್ತಾರೆ. ಅದು ಕೂಡಾ ಬಂದು ಬೀಳುತ್ತದೆ. ಅಂದರೆ, ಅದಕ್ಕೂ ಸಹ ನಾನೇ ಕಾರಣವಾಗುತ್ತೇನೆ. ಹಾಗೆ, ಈ ಪ್ರಜಾವ್ಯವಸ್ಥೆಯನ್ನು ನಾನು ಹಾಳುಮಾಡಿದವನಾಗುತ್ತೇನೆ. ನಾನು ಪ್ರಜಾವ್ಯವಸ್ಥೆಯನ್ನು ಸರಿಪಡಿಸಲು ಅವತರಿಸಿದವನಾಗಿದ್ದು, ಹೀಗೆ ಪ್ರಜಾವಿನಾಶಕರವಾದ ಕರ್ಮಯೋಗದ ಪರಿತ್ಯಾಗಕ್ಕೆ ಮುಂದಾಗಬಾರದಲ್ಲವೇ? ಅದಕ್ಕಾಗಿಯೇ, ನಾನು ಕರ್ಮಗಳನ್ನು ಬಿಡುತ್ತಿಲ್ಲ.

25. ಸಕ್ತಾಃ ಕರ್ಮಣ್ಯವಿದ್ವಾಂಸಃ ಯಥಾ ಕುರ್ವಂತಿ ಭಾರತ!।
ಕುರ್ಯಾದ್ವಿದ್ವಾಂಸ್ತಥಾಽಸಕ್ತಃ ಚಿಕೀರ್ಷುರ್ಲೋಕ ಸಂಗ್ರಹಮ್‌॥

ಭಾರತ = ಜ್ಞಾನಾಸಕ್ತಿಯುಳ್ಳ ಎಲೈ ಅರ್ಜುನನೆ!, ಅವಿದ್ವಾಂಸಃ = ಅಜ್ಞಾನಿಗಳಾದವರು, ಕರ್ಮಣಿ = ಕರ್ಮಫಲದಲ್ಲಿ, ಸಕ್ತಾಃ = ಆಸಕ್ತಿಯುಳ್ಳವರಾಗಿ, ಯಥಾ = ಯಾವ ಪ್ರಕಾರದಲ್ಲಾದರೆ (ಎಷ್ಟು ಶ್ರದ್ಧೆಯಿಂದ), ಕುರ್ವಂತಿ = ಕರ್ಮಗಳನ್ನು ಮಾಡುತ್ತಾರೆಯೋ, ತಥಾ = ಅದೇ ಪ್ರಕಾರವಾಗಿ, ವಿದ್ವಾನ್‌ = ಜ್ಞಾನನಿಷ್ಠನಾದವನು, ಅಸಕ್ತಃ = ಕರ್ಮಫಲಾಸಕ್ತಿ ಇಲ್ಲದವನಾಗಿ, ಲೋಕಸಂಗ್ರಹಂ = ಲೋಕಹಿತವನ್ನು, ಚಿಕೀರ್ಷುಃ = ಮಾಡಲು ಬಯಸಿದವನಾಗಿ, ಕುರ್ಯಾತ್‌ = ಆಚರಿಸಬೇಕು.

ಜ್ಞಾನಾಸಕ್ತಿಯುಳ್ಳ ಎಲೈ ಅರ್ಜುನನೆ! ಒಂದು ವೇಳೆ ನಿನಗೆ ಜ್ಞಾನಸಿದ್ಧಿಯುಂಟಾಗಿದ್ದರೂ ಸರಿಯೇ!, ನೀನು ಕರ್ಮಗಳನ್ನು ಮಾಡುತ್ತಲೇ ಇರಬೇಕು. ಆ ಮಾಡುವುದು ಕೂಡಾ ಅಜ್ಞಾನಿಗಳಾದವರು ಎಷ್ಟು ಶ್ರದ್ಧೆಯಾಗಿ ಮಾಡುತ್ತಾರೆಯೋ ಅಷ್ಟು ಶ್ರದ್ಧೆಯಾಗಿ ಮಾಡಬೇಕು. ಆದರೆ, ಅಜ್ಞಾನಿಯು ಕರ್ಮಫಲಾಸಕ್ತಿಯಿಂದ ಮಾಡುತ್ತಾನೆ. ನೀನು ಕರ್ಮಫಲಾಸಕ್ತಿ ಇಲ್ಲದೆಯೇ ಮಾಡಬೇಕು. ಅಜ್ಞಾನಿಯು ಸ್ವಾರ್ಥಕ್ಕೋಸ್ಕರ ಮಾಡುತ್ತಾನೆ. ನೀನು ಲೋಕಹಿತಕ್ಕೋಸ್ಕರ ಮಾಡಬೇಕು. ನೀನೇ ಅಲ್ಲ, ಸಮಾಜದಲ್ಲಿರುವ ಜ್ಞಾನಸಿದ್ಧನು ಯಾವನಾದರೂ ಸರಿಯೇ ಹೀಗೆಯೇ ಮಾಡಬೇಕು.
ವಿವರಣೆ:
ಭಗವಂತನು ಇಲ್ಲಿ ಜ್ಞಾನನಿಷ್ಠನು ಮಾಡುವ ಕರ್ಮಕ್ಕೂ, ಅಜ್ಞಾನಿಯಾದವನು ಮಾಡುವ ಕರ್ಮಕ್ಕೂ, ಇರುವ ತಾರತಮ್ಯವನ್ನು ವಿವರಿಸುತ್ತಾ, ಅದರೊಂದಿಗೆ ಜ್ಞಾನನಿಷ್ಠರಾದವರ ಕರ್ತವ್ಯವನ್ನು ಕೂಡ ಉದ್ಬೋಧಿಸುತ್ತಿದ್ದಾನೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ