ಶ್ರೀ ಮದ್ಭಗವದ್ಗೀತಾ : 64
22. ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ।
ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ॥
ಪಾರ್ಥ = ಅರ್ಜುನನೆ! ಮೇ = ನನಗೆ, ತ್ರಿಷು = ಮೂರು, ಲೋಕೇಷು = ಲೋಕಗಳಲ್ಲಿಯೂ, ಕರ್ತವ್ಯಂ = ಮಾಡಬೇಕಾದ ಕೆಲಸವು, ಕಿಂಚನ = ಸ್ವಲ್ಪವಾದರೂ, ನ-ಅಸ್ತಿ = ಇಲ್ಲ. ಅನವಾಪ್ತಂ = ಮೂರು ಲೋಕಗಳಲ್ಲಿಯೂ ನನ್ನಿಂದ ಹೊಂದಲ್ಪಡದೆ ಇರುವುದೂ, ಅವಾಪ್ತವ್ಯಂ = ಕರ್ತವ್ಯಾಚರಣೆಯಿಂದ ಇನ್ನು ಮುಂದೆ ಹೊಂದಲ್ಪಡಬೇಕಾದ್ದೂ, ಕೂಡ, ನ = ಇಲ್ಲ, ಚ = ಆದರೂ, ಕರ್ಮಣಿ = ಕರ್ಮಾಚರಣೆಯಲ್ಲಿ, ವರ್ತೇ-ಏವ = ಇರುತ್ತಲೇ ಇದ್ದೇನೆ.
ಅರ್ಜುನನೆ! (ನಾನು ವಿಷ್ಣುಮೂರ್ತಿಯ ಅವತಾರವೆಂದೂ, ಆದ್ದರಿಂದ ಜ್ಞಾನಸಿದ್ಧನೆಂದೂ ನಿನಗೆ ಗೊತ್ತಲ್ಲವೆ! ಆದ್ದರಿಂದ) ಈ ಮೂರು ಲೋಕಗಳಲ್ಲಿಯೂ, ನನಗೆ ಕರ್ತವ್ಯವಾದ ಕರ್ಮವಾಗಲೀ, ಅದರಿಂದ ಇನ್ನು ಮುಂದೆ ಪಡೆಯಬೇಕಾದ ಕರ್ಮಫಲವಾಗಲೀ, ಸ್ವಲ್ಪವಾದರೂ ಇಲ್ಲ. ಅದಲ್ಲದೆ ನಾನು ಪಡೆಯದ ಸುಖವಂತೂ ಮೂರು ಲೋಕಗಳಲ್ಲಿಯೂ
ಇಲ್ಲವೇ ಇಲ್ಲ. ಆದರೂ ಕೂಡ, ನಾನು ಯಾವಾಗಲೂ ಕರ್ಮಯೋಗನಿಷ್ಠೆಯಲ್ಲಿ ಇರುವುದನ್ನು ನೀನು ನೋಡುತ್ತಲೇ ಇರುವೆಯಲ್ಲವೆ!
ವಿವರಣೆ:
“”ಜ್ಞಾನಯೋಗಸಿದ್ಧಿಯಾಗಿದ್ದರೂ ಸರಿಯೇ, ಸಮಾಜದಲ್ಲಿ, ಉನ್ನತ ಸ್ಥಾನದಲ್ಲಿ ಇರುವವನು ಕರ್ಮಯೋಗವನ್ನು, ಬಿಡಬಾರದು” ಎಂಬ ಸೂತ್ರಕ್ಕೆ ತನ್ನನ್ನು ತಾನೇ ಉದಾಹರಣೆಯನ್ನಾಗಿ ಕೊಟ್ಟುಕೊಳ್ಳುತ್ತಾ, ಇಲ್ಲಿಂದ ಮೂರು ಶ್ಲೋಕಗಳಲ್ಲಿ ಈ ವಿಷಯವನ್ನು ಉಪಪತ್ತಿ ಪೂರ್ವಕವಾಗಿ, ಭಗವಂತನು ಪ್ರತಿಪಾದಿಸಲಿದ್ದಾನೆ.
23. ಯದಿ ಹ್ಯಹಂ ನ ವರ್ತೇಯ ಜಾತು ಕರ್ಮಣ್ಯತಂದ್ರಿತಃ।
ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ! ಸರ್ವಶಃ॥
ಪಾರ್ಥ = ಎಲೈ ಅರ್ಜುನನೆ! ಅಯಂ-ಅಹಂ = ಈ ನಾನು, ಜಾತು = ಎಂದಿಗಾದರೂ, ಅತಂದ್ರಿತಃ = ಸೋಮಾರಿತನವಿಲ್ಲದೇ, ಕರ್ಮಣಿ = ಕರ್ಮಯೋಗದಲ್ಲಿ, ನ-ವರ್ತೇ-ಯದಿ = ಪ್ರವರ್ತಿಸದೆ ಇದ್ದರೆ, ಆಗ, ಮನುಷ್ಯಾಃ = ಮಾನವರು, ಸರ್ವಶಃ = ಎಲ್ಲಾ ವಿಧದಲ್ಲಿಯೂ, ಮಮ = ನನ್ನ, ವರ್ತ್ಮ = ಮಾರ್ಗವನ್ನು, ಅನುವರ್ತಂತೇ = ಅನುಸರಿಸುತ್ತಾರೆ, ಹಿ = ಅಲ್ಲವೇ!
ಅರ್ಜುನನೆ! ಪ್ರಸಿದ್ಧನಾಗಿ, ಸಮಾಜದಲ್ಲಿ, ಉನ್ನತಸ್ಥಾನದಲ್ಲಿ ಇದ್ದೇನಾದ್ದರಿಂದ, ನಾನು, ಜ್ಞಾನಯೋಗಸಿದ್ಧನಾದರೂ, ಎಂದಿಗೂ, ಸ್ವಲ್ಪವೂ ಸೋಮಾರಿತನವಿಲ್ಲದೆ, ಕರ್ಮಯೋಗವನ್ನು ಆಚರಿಸುತ್ತಲೇ ಇದ್ದೇನೆ. ನಾನು ಒಂದು ಕ್ಷಣವಾದರೂ ಸೋಮಾರಿತನಕ್ಕೆ ಒಳಗಾಗಿ, ಕರ್ತವ್ಯಗಳನ್ನು ಬಿಟ್ಟುಬಿಟ್ಟರೆ, ನನ್ನನ್ನು ಗಮನಿಸುವ ಮಾನವರೆಲ್ಲರೂ ನನ್ನನ್ನೇ ಆದರ್ಶವಾಗಿ ತೆಗೆದುಕೊಂಡು ಅವರು ಕೂಡ ಕರ್ತವ್ಯಗಳ ಆಚರಣೆಯನ್ನು ಬಿಟ್ಟುಬಿಡುತ್ತಾರೆ. ಅದಕ್ಕಾಗಿಯೇ ನಾನು ಕರ್ಮಫಲದೊಂದಿಗೆ ಕೆಲಸವಿಲ್ಲದಿದ್ದರೂ, ಲೋಕಸಂಗ್ರಹಕ್ಕಾಗಿ ಕರ್ಮಗಳನ್ನು ಆಚರಿಸುತ್ತಲೇ ಇದ್ದೇನೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ