ಗೀತೆ : 63 – ಉನ್ನತ ಸ್ಥಾನಗಳಿಗೆ ತಲುಪಿದ ಜನರು ಬಹಳ ಜಾಗ್ರತೆಯಾಗಿ ಇರಬೇಕು

Gita
Spread the love

ಶ್ರೀ ಮದ್ಭಗವದ್ಗೀತಾ : 63

20. ಕರ್ಮಣೈವ ಹಿ ಸಂಸಿದ್ಧಿಂ ಆಸ್ಥಿತಾ ಜನಕಾದಯಃ।
ಲೋಕಸಂಗ್ರಹ-ಮೇವಾಪಿ ಸಂಪಶ್ಯನ್ ಕರ್ತುಮರ್ಹಸಿ॥

ಜನಕಾದಯಃ = ಜನಕನು ಮೊದಲಾದ ಮಹಾರಾಜರು, ಕರ್ಮಣಾ-ಏವ = ನಿಷ್ಕಾಮ ಕರ್ಮದಿಂದಲೇ, ಸಂಸಿದ್ಧಿಂ = ಮೋಕ್ಷಸಿದ್ಧಿಯನ್ನು, ಆಸ್ಥಿತಾಃ = ಹೊಂದಿದರು, ಹಿ = ಅಲ್ಲವೇ! ಲೋಕಸಂಗ್ರಹಂ-ಏವ = ಲೋಕೋಪಕಾರವನ್ನು ಮಾತ್ರವೇ, ಸಂಪಶ್ಯನ್-ಅಪಿ = ನೋಡುತ್ತಾ ಆದರೂ, ಕರ್ತುಂ = ನೀನು ಕರ್ಮಮಾಡಲು, ಅರ್ಹಸಿ = ಅರ್ಹನಾಗಿದ್ದೀಯೆ.

ಅರ್ಜುನನೆ! “”ನಾನು ರಾಜ್ಯವ್ಯವಹಾರಗಳಲ್ಲಿಯೂ, ಯುದ್ಧ ವ್ಯವಹಾರಗಳಲ್ಲಿಯೂ, ತೊಡಗಿಸಿಕೊಂಡಿದ್ದೇನಲ್ಲವೇ! ನನ್ನಂತಹವನಿಗೆ ಕರ್ಮಯೋಗಮಾರ್ಗವು ಸಾಧ್ಯವೇ?” ಎಂದು ಸಂದೇಹಿಸಬೇಡ. ಹಿಂದೆ ಜನಕಮಹಾರಾಜನು, ಅಶ್ವಪತಿ ಮಹಾರಾಜನು, ಭಗೀರಥ ಮಹಾರಾಜನು, ಮೊದಲಾದ ರಾಜರ್ಷಿಗಳೆಲ್ಲರೂ, ಕರ್ಮಯೋಗಮಾರ್ಗದಿಂದಲೇ ಪ್ರಯಾಣಮಾಡಿ ಮೊದಲು ಚಿತ್ತಶುದ್ಧಿಯನ್ನು, ಆಮೇಲೆ ಜ್ಞಾನಸಿದ್ಧಿಯನ್ನು, ಅದಾದಮೇಲೆ ಜೀವನ್ಮುಕ್ತಿಯನ್ನು, ಹೊಂದಿ ಕೂಡ ವಿಹಿತಕರ್ಮಾಚರಣೆಯನ್ನು ಮಾಡುತ್ತಲೇ ಇರುತ್ತಿದ್ದರು. ಆ ಚರಿತೆಗಳು ನಿನಗೆ ಗೊತ್ತಿವೆ. ಅವರು ಲೋಕೋಪಕಾರಕ್ಕೋಸ್ಕರವೇ ಹಾಗೆ ಮಾಡಿದರು. ಕನಿಷ್ಠ ಅದನ್ನು ಗಮನಿಸಿಯಾದರೂ, ಕರ್ಮಯೋಗಮಾರ್ಗದಲ್ಲಿ ಇರುವುದು ನಿನಗೆ ತಕ್ಕ ಕೆಲಸವಾಗಿದೆ.

21. ಯದ್ಯದಾಚರತಿ ಶ್ರೇಷ್ಠಃ ತತ್ತದೇವೇತರೋ ಜನಃ।
ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ॥

ಶ್ರೇಷ್ಠಃ = ಆಯಾ ರಂಗದಲ್ಲಿ ಉನ್ನತ ಸ್ಥಾನದಲ್ಲಿ ಇರುವವನು, ಯತ್‌-ಯತ್‌ = ಏನೇನು ಆಚರತಿ = ಆಚರಿಸುತ್ತಾನೋ, ತತ್‌-ತತ್‌-ಏವ = ಆಯಾ ಕೆಲಸಗಳನ್ನೇ, ಇತರಃ ಜನಃ =ಸಾಮಾನ್ಯ ಮಾನವನು ಆಚರಿಸುತ್ತಾನೆ. ಸಃ = ಆ ಶ್ರೇಷ್ಠನು, ಯತ್‌ = ಯಾವ ನಿಯಮವನ್ನು, ಪ್ರಮಾಣಂ = ಪ್ರಮಾಣವಾಗಿ, ಕುರುತೇ = ಸ್ವೀಕರಿಸುತ್ತಾನೋ, ತತ್‌ = ಅದನ್ನೇ, ಲೋಕಃ = ಸಾಮಾನ್ಯ ಮಾನವನು, ಅನುವರ್ತತೇ = ಅನುಸರಿಸಿ ನಡೆದುಕೊಳ್ಳುತ್ತಾನೆ.

ಅರ್ಜುನನೆ! ಸಮಾಜದಲ್ಲಿ ಆಯಾ ರಂಗಗಳಲ್ಲಿ ಉನ್ನತ ಸ್ಥಾನಗಳಿಗೆ ತಲುಪಿದ ಜನರು ಬಹಳ ಜಾಗ್ರತೆಯಾಗಿ ಇರಬೇಕು. ಏಕೆಂದರೆ, ಸಾಮಾನ್ಯ ಜನರು ಅವರ ಕೆಲಸಗಳನ್ನು ನಿಶಿತವಾಗಿ ಗಮನಿಸುತ್ತಿರುತ್ತಾರೆ. ಮೇಲಿನವರು ಏನು ಮಾಡಿದರೆ ಕೆಳಗಿನವರು ಅದೇ ಒಳ್ಳೆಯದೆಂದು ಭಾವಿಸಿ, ಅದನ್ನೇ ಮಾಡುತ್ತಿರುತ್ತಾರೆ. ಮೇಲಿನವರು ಯಾವ ಶಾಸ್ತ್ರವನ್ನು, ಯಾವ ನಿಯಮವನ್ನು, ಪ್ರಮಾಣವಾಗಿ ಇಟ್ಟುಕೊಳ್ಳುವರೋ, ಕೆಳಗಿನವರು ಕೂಡ ಅದನ್ನೇ ಅನುಸರಿಸುತ್ತಾ ಇರುತ್ತಾರೆ. ಲೋಕದಲ್ಲಿ ಸಾಮಾನ್ಯ ಜನರ ಸ್ವಭಾವವು ಹೀಗೆ ಇರುತ್ತದೆಯಾದ್ದರಿಂದ, ನಿನ್ನಂತಹ ಶ್ರೇಷ್ಠನು ತನ್ನ ಕರ್ತವ್ಯನಿರ್ವಹಣೆಯ ವಿಷಯದಲ್ಲಿ ಇನ್ನಷ್ಟು ಜಾಗರೂಕನಾಗಿರಬೇಕು.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ