ಗೀತೆ – 62 : ವಿಧಿವಿಹಿತವಾದ ಕರ್ಮಗಳನ್ನು ಫಲಾಸಕ್ತಿ ಇಲ್ಲದೆ ಮಾಡಬೇಕು

Gita
Spread the love

ಶ್ರೀ ಮದ್ಭಗವದ್ಗೀತಾ : 62

18. ನೈವ ತಸ್ಯ ಕೃತೇನಾರ್ಥಃ ನಾಕೃತೇನೇಹ ಕಶ್ಚನ।
ನ ಚಾಸ್ಯ ಸರ್ವಭೂತೇಷು ಕಶ್ಚಿದರ್ಥ-ವ್ಯಪಾಶ್ರಯಃ॥

ತಸ್ಯ = ಆ ಆತ್ಮಜ್ಞಾನಿಗೆ, ಇಹ = ಈ ಲೋಕದಲ್ಲಿ, ಕೃತೇನ = ಅನುಷ್ಠಿಸಲ್ಪಟ್ಟ ಸತ್ಕರ್ಮದಿಂದ, ಅರ್ಥಃ = ಪಡೆಯತಕ್ಕ ಪ್ರಯೋಜನವು, ನ-ಏವ = ಯಾವುದೂ ಇಲ್ಲವೇ ಇಲ್ಲ. ಅಕೃತೇನ = ಕರ್ಮವನ್ನು ಮಾಡದೇ ಹೋಗುವುದರಿಂದ, ಕಶ್ಚನ = ಯಾವ ದೋಷವೂ, ನ = ಇಲ್ಲ. ಚ = ಮತ್ತು, ಅಸ್ಯ = ಈ ಆತ್ಮಜ್ಞಾನಿಗೆ, ಸರ್ವಭೂತೇಷು = ಎಲ್ಲ ಜೀವಿಗಳಲ್ಲಿಯೂ, ಅರ್ಥವ್ಯಪಾಶ್ರಯಃ = ಪ್ರಯೋಜನಕ್ಕಾಗಿ ಆಶ್ರಯಿಸಲ್ಪಡತಕ್ಕವನು, ಕಶ್ಚಿತ್‌ = ಒಬ್ಬನಾದರೂ, ನ = ಇಲ್ಲ.

ಲೋಕದಲ್ಲಿ ಸಾಮಾನ್ಯ ಮಾನವರೆಲ್ಲರೂ ಪುಣ್ಯಕ್ಕಾಗಿ ಸತ್ಕರ್ಮಗಳನ್ನು ಮಾಡುತ್ತಾರೆ. ಆ ಪುಣ್ಯದಿಂದ ವಿಷಯಸುಖಗಳನ್ನು ಪಡೆಯುತ್ತಿರುತ್ತಾರೆ. ಆತ್ಮಜ್ಞಾನಿಯಾದವನಿಗೆ ಯಾವ ವಿಷಯಸುಖಗಳ ಮೇಲೂ ಪ್ರೀತಿ ಇರದು. ಹಾಗೆಯೇ ಯಾವ ದುಃಖಗಳೂ ತೊಲಗಿಹೋಗಬೇಕೆಂಬ ಬಯಕೆಯೂ ಇರದು. ಆದ್ದರಿಂದ, ಆತನಿಗೆ ಪುಣ್ಯದಿಂದ ಪ್ರಯೋಜನವೇನೂ ಇಲ್ಲ. ಪಾಪವನ್ನು ಬಿಡಿಸಿಕೊಳ್ಳಬೇಕೆಂಬ ತಾಪತ್ರಯವೂ ಇಲ್ಲ. ಆದ್ದರಿಂದ ಆತನು ಸತ್ಕರ್ಮಗಳನ್ನು ಮಾಡಿ ಪುಣ್ಯವನ್ನು ಸಂಪಾದಿಸಬೇಕಾದ ಅವಶ್ಯಕತೆಯೂ ಇಲ್ಲ. ಪಾಪಗಳನ್ನು ಹೋಗಲಾಡಿಸಕೊಳ್ಳಬೇಕಾದ ಅವಶ್ಯಕತೆಯೂ ಇಲ್ಲ. ಲೋಕದಲ್ಲಿ ಮಾನವರೆಲ್ಲರೂ ತಮ್ಮ ಕೆಲಸಗಳು ನೆರವೇರುವುದಕ್ಕಾಗಿ, ತಮ್ಮ ಜೊತೆಯ ಮಾನವರನ್ನೋ, ಜಂತುಗಳನ್ನೋ, ದೇವತೆಗಳನ್ನೋ, ಯಾರನ್ನೋ ಒಬ್ಬರನ್ನು ಆಶ್ರಯಿಸುತ್ತಲೇ ಇರುತ್ತಾರೆ. ಆತ್ಮಜ್ಞಾನಿಯು ನಿತ್ಯತೃಪ್ತನು, ನಿತ್ಯ ಸಂತುಷ್ಟನೂ ಆದ್ದರಿಂದ, ಆತನಿಗೆ ಹೊಸದಾಗಿ ಪಡೆಯಬೇಕಾದ್ದು ಏನೂ ಇಲ್ಲ. ಹಾಗಾಗಿಯೇ, ಆತನು ಬ್ರಹ್ಮದೇವನಿಂದ, ಕ್ರಿಮಿಕೀಟಕಗಳವರೆಗೆ ಇರುವ ಜೀವಿಗಳಲ್ಲಿ ಯಾವೊಬ್ಬ ಜೀವಿಯನ್ನೂ ಆಶ್ರಯಿಸಬೇಕಾದ ಕೆಲಸವಿಲ್ಲ. ಅದಕ್ಕಾಗಿಯೇ, ಆತನಿಗೆ ಯಾವ ಕರ್ಮಗಳೂ ಬೇಕಿಲ್ಲ. ಯಾವ ಕರ್ತವ್ಯಗಳೂ ಇಲ್ಲ.

19. ತಸ್ಮಾದಸಕ್ತ ಸ್ಸತತಂ ಕಾರ್ಯಂ ಕರ್ಮ ಸಮಾಚರ।
ಅಸಕ್ತೋ ಹ್ಯಾಚರನ್ ಕರ್ಮ ಪರಮಾಪ್ನೋತಿ ಪೂರುಷಃ॥

ತಸ್ಮಾತ್‌ = ನಿನಗೆ ಆತ್ಮರತಿಯು, ಆತ್ಮತೃಪ್ತಿಯು, ಆತ್ಮಸಂತುಷ್ಟಿಯು ಎಂಬ ಲಕ್ಷಣಗಳು ಇಲ್ಲವಾದ್ದರಿಂದ, ಅಸಕ್ತಃ = ನೀನು ಫಲಾಸಕ್ತಿ ಇಲ್ಲದವನಾಗಿ, ಕಾರ್ಯಂ = ನಿನಗೆ ಕರ್ತವ್ಯವಾದ, ಕರ್ಮ = ಕರ್ಮವನ್ನು, ಸತತಂ = ಯಾವಾಗಲೂ, ಸಮಾಚರ = ಅನುಷ್ಠಾನ ಮಾಡುತ್ತಾ ಇರು. ಹಿ = ಏಕೆಂದರೆ, ಅಸಕ್ತಃ = ಫಲಾಸಕ್ತಿ ಇಲ್ಲದವನಾಗಿ, ಕರ್ಮ = ತನ್ನ ವಿಹಿತ ಕರ್ಮವನ್ನು, ಆಚರನ್‌ = ಆಚರಿಸುತ್ತಾ ಇರುವ, ಪೂರುಷಃ = ಮಾನವನು, ಪರಂ = ಪರಮಪದವಾದ ಮೋಕ್ಷವನ್ನು, ಆಪ್ನೋತಿ = ಪಡೆಯುತ್ತಾನೆ.

ಅರ್ಜುನನೆ! ಆತ್ಮರತಿ ಮೊದಲಾದ ಲಕ್ಷಣಗಳು ಇರುವವನು ಮಾತ್ರವೇ ಜ್ಞಾನಯೋಗಿ ಆಗಬಲ್ಲನೆಂದೂ, ಅಂತಹವನಿಗೆ ಮಾತ್ರವೇ ಕರ್ಮಗಳಿಂದ ಪ್ರಯೋಜನವಿಲ್ಲವೆಂದೂ, ನಿನಗೆ ಮೇಲಿನ ಎರಡು ಶ್ಲೋಕಗಳಲ್ಲಿಯೂ ಸ್ಪಷ್ಟಪಡಿಸಿದ್ದೇನೆ. ಅಂತಹ ಜ್ಞಾನಯೋಗಿಯ ಲಕ್ಷಣಗಳು ನಿನ್ನಲ್ಲಿ ಕಾಣಿಸುತ್ತಿಲ್ಲ. ಆದ್ದರಿಂದ ನೀನು ಅವಿಚ್ಛಿನ್ನವಾಗಿ ಕರ್ಮ ಮಾಡುತ್ತಲೇ ಇರಬೇಕು. ಆದರೆ ನೀನು ಎರಡು ಜಾಗ್ರತೆಗಳನ್ನು ತೆಗೆದುಕೊಳ್ಳಬೇಕು –
ನೀನು ವಿಧಿವಿಹಿತಗಳಾದ ಕರ್ಮಗಳನ್ನು ಮಾಡಬೇಕು.
ಅವುಗಳನ್ನು ಕೂಡ ಫಲಾಸಕ್ತಿ ಇಲ್ಲದೇ ಮಾಡಬೇಕು.
ಹಾಗೆ ಮಾಡಿದರೆ ಯಾವ ಮನುಷ್ಯನಿಗಾದರೂ ಸರಿಯೇ, ಕ್ರಮವಾಗಿ ಚಿತ್ತಶುದ್ಧಿ ಲಭಿಸಿ, ಅದರಿಂದ ಮೋಕ್ಷವು ಲಭಿಸಿಯೇ ತೀರುತ್ತದೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ