ಶ್ರೀ ಮದ್ಭಗವದ್ಗೀತಾ – 61
16. ಏವಂ ಪ್ರವರ್ತಿತಂ ಚಕ್ರಂ ನಾನುವರ್ತಯತೀಹ ಯಃ।
ಅಘಾಯುರಿಂದ್ರಿಯಾರಾಮಃ ಮೋಘಂ ಪಾರ್ಥ! ಸ ಜೀವತಿ॥
ಪಾರ್ಥ = ಎಲೈ ಅರ್ಜುನನೆ! ಯಃ = ಯಾವ ಮಾನವನು, ಇಹ = ಈ ಪ್ರಪಂಚದಲ್ಲಿ, ಏವಂ = ಈ ವಿಧವಾಗಿ, ಪ್ರವರ್ತಿತಂ = ಪರಮಾತ್ಮನಿಂದ ತಿರುಗುವ ಹಾಗೆ ಮಾಡಲ್ಪಟ್ಟಿರುವ, ಚಕ್ರಂ = ಸೃಷ್ಟಿ ಚಕ್ರವನ್ನು, ನ-ಅನುವರ್ತಯತಿ = ಅನುಸರಿಸಿ ನಡೆಯುವುದಿಲ್ಲವೋ, ಸಃ = ಅಂತಹ ಮಾನವನು, ಇಂದ್ರಿಯಾರಾಮಃ = ಇಂದ್ರಿಯಸುಖಗಳಲ್ಲಿಯೇ ಆಸಕ್ತಿಯುಳ್ಳವನೂ, ಅಘಾಯುಃ = ಪಾಪದಿಂದ ತುಂಬಿದ ಜೀವನ ಉಳ್ಳವನೂ ಆಗಿ, ಮೋಘಂ =ನಿರರ್ಥಕವಾಗಿ, ಜೀವತಿ = ಜೀವಿಸುತ್ತಿದ್ದಾನೆ.
ಅರ್ಜುನನೆ! ನಾನು ಹೇಳಿದ ಈ ಸೃಷ್ಟಿಪ್ರಕ್ರಿಯೆಯ ಚಕ್ರವನ್ನು ಪ್ರಾರಂಭಿಸುವವನು, ನಡೆಸುವವನು ಕೂಡ, ಆ ಪರಮಾತ್ಮನೇ. ಭೂಮಿಯ ಮೇಲಿನ ಜೀವರಾಶಿಯಲ್ಲಿ ಮಾನವನು ಮಾತ್ರವೇ ಈ ವಿಷಯವನ್ನು ಗ್ರಹಿಸಬಲ್ಲನು. ಆದ್ದರಿಂದ ಪ್ರತಿ ಮಾನವನೂ ಈ ಸೃಷ್ಟಿಚಕ್ರಕ್ಕೆ ವಿಘಾತವಿಲ್ಲದ ರೀತಿಯಲ್ಲಿ ನಡೆದುಕೊಳ್ಳಬೇಕು. ಹಾಗೆ ನಡೆದುಕೊಳ್ಳಲಿಲ್ಲವೆಂದರೆ, ಅದಕ್ಕೆ ಕಾರಣವು ಆತನಿಗಿರುವ ಇಂದ್ರಿಯವ್ಯಾಮೋಹವೇ. ಅದರಿಂದ ಆತನ ಇಡೀ ಜೀವನವು ಪಾಪದಿಂದ ತುಂಬಿ ಬಿಡುತ್ತದೆ. ಆ ಪಾಪದಿಂದ ಆತನು ಮಾನವತ್ವದಿಂದ ದೇವತ್ವದೊಳಕ್ಕೆ ವಿಕಾಸಗೊಳ್ಳುವ ಪ್ರಕ್ರಿಯೆಯು ನಿಂತುಹೋಗುತ್ತದೆ. ಆದ್ದರಿಂದ ಆತನ ಜೀವನವೇ ವ್ಯರ್ಥವಾಗಿ ಬಿಡುತ್ತದೆ. ಅದಕ್ಕಾಗಿಯೇ “ನಿಯತಂ ಕುರು ಕರ್ಮತ್ವಂ’ (3-8) (ವಿಧಿವಿಹಿತವಾದ ಕರ್ಮಗಳನ್ನು ತಪ್ಪದೇ ಮಾಡು) – ಎಂದು ನಾನು ನಿನಗೆ ಹೇಳುತ್ತಿದ್ದೇನೆ.
17. ಯಸ್ತ್ವಾತ್ಮರತಿರೇವ ಸ್ಯಾತ್ ಆತ್ಮತೃಪ್ತಶ್ಚ ಮಾನವಃ।
ಆತ್ಮನ್ಯೇವ ಚ ಸಂತುಷ್ಟಃ ತಸ್ಯ ಕಾರ್ಯಂ ನ ವಿದ್ಯತೇ॥
ತು = ಈ ಕರ್ಮಯೋಗಿಗೆ ಭಿನ್ನವಾಗಿ, ಯಃ-ಮಾನವಃ = ಯಾವ ಮಾನವನಾದರೆ, ಆತ್ಮರತಿಃ-ಏವ = ತನ್ನ ಆತ್ಮದಲ್ಲಿ ಮಾತ್ರವೇ ಪ್ರೀತಿಯನ್ನು ಇಟ್ಟುಕೊಂಡು ಇರುವವನೂ, ಚ = ಮತ್ತು, ಆತ್ಮತೃಪ್ತಃ = ತನ್ನ ಆತ್ಮದಲ್ಲಿಯೇ ತೃಪ್ತಿ ಹೊಂದುವವನೂ, ಚ = ಮತ್ತು, ಆತ್ಮನಿ-ಏವ = ತನ್ನ ಆತ್ಮದಲ್ಲೇ, ಸಂತುಷ್ಟಃ = ಸಂತೋಷವುಳ್ಳವನೂ, ಸ್ಯಾತ್ = ಆಗುತ್ತಾನೆಯೋ, ತಸ್ಯ= ಅಂತಹ ಮನುಷ್ಯನಿಗೆ, ಕಾರ್ಯಂ = ವಿಧ್ಯುಕ್ತಕರ್ಮವೆಂಬುದು, ನ-ವಿದ್ಯತೇ = ಇಲ್ಲ.
ಅರ್ಜುನನೆ! ನಾನು ಇಲ್ಲಿಯವರೆಗೂ ಯಜ್ಞಕರ್ಮ ಮಾಡುವುದಕ್ಕೆ ಅರ್ಹತೆಯುಳ್ಳ ಕರ್ಮಯೋಗಿಯ ಕುರಿತು ಹೇಳಿದೆನು. ಆದರೆ ಲೋಕದಲ್ಲಿ ಕೆಲವರು ಮಾತ್ರ ಇವನಿಗಿಂತ ಪೂರ್ತಿಯಾಗಿ ಭಿನ್ನವಾದ ಪ್ರವೃತ್ತಿಯುಳ್ಳವರು ಇರುತ್ತಾರೆ. ಅವರಿಗೆ ಇಂದ್ರಿಯ ವಿಷಯಗಳ ಮೇಲೆ ಪ್ರೀತಿ ಇರದು. ತನ್ನ ಮೇಲೆ ತನಗೇ ಅವಿಚ್ಛಿನ್ನವಾದ ಪ್ರೀತಿ ಇರುತ್ತದೆ. ಅವರಿಗೆ ಬಾಹ್ಯಸುಖಭೋಗಗಳಿಂದ ತೃಪ್ತಿಯುಂಟಾಗದು. ತನ್ನೊಂದಿಗೆ ತಾನು ಅನುಸಂಧಾನವನ್ನು ಮಾಡಿಕೊಳ್ಳುವುದರಿಂದ ಮಾತ್ರವೇ ತೃಪ್ತಿ ಯುಂಟಾಗುತ್ತಾ ಇರುತ್ತದೆ. ಅವರಿಗೆ ಹೊಸ ಪದಾರ್ಥಗಳೋ, ಪದವಿಗಳೋ, ಲಭಿಸಿದರೆ ಸಂತೋಷವುಂಟಾಗದು. ತನ್ನೊಂದಿಗೆ ತನಗೇ, ತನ್ನಲ್ಲಿ ತನಗೇ, ಅಪಾರವಾದ ಸಂತೋಷ ಉಂಟಾಗುತ್ತಿರುತ್ತದೆ. ಇಂತಹ ಸ್ಥಿತಿಯು ಕೆಲವರಿಗೆ ಹುಟ್ಟಿನಿಂದಲೇ ಇರುತ್ತದೆ. ಕೆಲವರಿಗೆ ಸಾಧನೆಯಿಂದ ಬರುತ್ತದೆ. ಇಂತಹವರನ್ನೇ “ಸಾಂಖ್ಯಯೋಗಿಗಳು’ ಅನ್ನುತ್ತಾರೆ. ಅವರೇ “ಜ್ಞಾನಯೋಗಿಗಳು’. ಅವರಿಗೆ ಯಾವ ತರಹದ ಕರ್ಮಗಳಿಂದಲೂ ಕೆಲಸವು ಇಲ್ಲವೇ ಇಲ್ಲ.
ವಿವರಣೆ:
“”ಏನೂ ಮಾಡದೆ ಕುಳಿತಿದ್ದರೂ ಸರಿಯೇ, ಪಾಪವು ಬಂದು ಮೇಲೆ ಬೀಳುತ್ತದೆ” ಎಂದು ಹೇಳುತಿದ್ದೀರಿ. “”ಯಜ್ಞಕರ್ಮವನ್ನು ಮಾಡಲೇಬೇಕು” ಎನ್ನುತ್ತಿದ್ದೀರಿ. ಹಾಗಾದರೆ “”ಹಿಮಾಲಯ ಗುಹೆಗಳಂತಹ ಪ್ರದೇಶಗಳಲ್ಲಿ ಸಾವಿರಾರು ವರ್ಷಗಳಿಂದ ಎಷ್ಟೋ ಮಂದಿ ಮಹಾತ್ಮರು ಯಾವ ಕರ್ಮವನ್ನೂ ಮಾಡದೆ ನಿಶ್ಚಲ ಸಮಾಧಿಯಲ್ಲಿ ಇದ್ದುಬಿಡುತ್ತಿದ್ದಾರಲ್ಲವೆ! ಅವರೆಲ್ಲರೂ ಪಾಪಾತ್ಮರೇ?” ಎಂಬ ಪ್ರಶ್ನೆ ಒಂದು ಇದೆ. ಹಾಗೆಯೇ, “”ಭಗವಂತನು ಇದೇ ಅಧ್ಯಾಯದ 3ನೆಯ ಶ್ಲೋಕದಲ್ಲಿ ಜ್ಞಾನಯೋಗ, ಕರ್ಮಯೋಗ ಎಂಬ ಎರಡು ಮಾರ್ಗಗಳಿವೆ ಎಂದು ಹೇಳಿದ್ದಾನಲ್ಲವೆ! ಅವುಗಳಲ್ಲಿ ಜ್ಞಾನಯೋಗವು ಯಾರಿಗೋಸ್ಕರ?” ಎಂಬ ಪ್ರಶ್ನೆ ಮತ್ತೊಂದಿದೆ. ಈ ಎರಡು ಪ್ರಶ್ನೆಗಳಿಗೂ ಭಗವಂತನು ಇಲ್ಲಿ ಸಮಾಧಾನವನ್ನು ಹೇಳಲಿದ್ದಾನೆ ಎಂದು ನಾವು ಗುರುತಿಸಬೇಕು.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ