ಗೀತೆ – 60 : ಪರಬ್ರಹ್ಮನಿಂದ ಸೃಷ್ಟಿರಹಸ್ಯ ಭೋದಿಸುವ ವೇದವು ಹುಟ್ಟಿರುವುದು

Gita
Spread the love

ಶ್ರೀ ಮದ್ಭಗವದ್ಗೀತಾ : 60

13.ಯಜ್ಞಶಿಷ್ಟಾಶಿನ ಸ್ಸಂತಃ ಮುಚ್ಯಂತೇ ಸರ್ವಕಿಲ್ಬಿಷೈಃ।
ಭುಂಜತೇ ತೇ ತ್ವಘಂ ಪಾಪಾಃ ಯೇ ಪಚಂತ್ಯಾತ್ಮಕಾರಣಾತ್‌॥

ಯಜ್ಞಶಿಷ್ಟಾಶಿನಃ = ಯಜ್ಞಮಾಡಿದ ಮೇಲೆ ಉಳಿದದ್ದನ್ನು ತಿನ್ನುವ ಸ್ವಭಾವವುಳ್ಳ, ಸಂತಃ = ಸತ್ಪುರುಷರು, ಸರ್ವಕಿಲ್ಬಿಷೈಃ = ಎಲ್ಲಾ ವಿಧವಾದ ಪಾಪಗಳಿಂದ, ಮುಚ್ಯಂತೇ = ಬಿಡಲ್ಪಡುತ್ತಿದ್ದಾರೆ. ತು =ಇದಕ್ಕೆ ಭಿನ್ನವಾಗಿ, ಯೇ = ಯಾರಾದರೆ, ಆತ್ಮಕಾರಣಾತ್‌ = ತಮ ಗೋಸ್ಕರ ಮಾತ್ರವೇ, ಪಚಂತಿ = ಆಹಾರವನ್ನು ಬೇಯಿಸಿಕೊಳ್ಳುತ್ತಾರೋ, ತೇ = ಅಂತಹ, ಪಾಪಾಃ = ಪಾಪಾತ್ಮರು, ಅಘಂ = ಪಾಪವನ್ನು, ಭುಂಜತೇ = ತಿನ್ನುತ್ತಿದ್ದಾರೆ.

ಬ್ರಹ್ಮದೇವನು ಇನ್ನೂ ಹೀಗೆ ಹೇಳುತ್ತಿದ್ದಾನೆ – “”ಎಲೈ ಮಾನವರೇ! ಶಾಸ್ತ್ರವಿಹಿತಗಳಾದ ಯಜ್ಞಗಳನ್ನು ಆಚರಿಸಿದ ಮೇಲೆ ಉಳಿದಿರುವ ಆಹಾರವಾವುದಾದರೆ ಉಂಟೋ, ಅದನ್ನು “ಅಮೃತವು’ ಎಂದು, “ಸತ್ಯವು’ ಎಂದು, ಹಿರಿಯರು ಕರೆಯುತ್ತಿರುತ್ತಾರೆ. ಅಂತಹ ಅಮೃತಾಹಾರವನ್ನು ಮಾನವರು ತಿನ್ನಬೇಕು. ಹಾಗೆ ತಿನ್ನುವವರೇ ಸತ್ಪುರುಷರು. ಅವರಿಗೆ ಪಾಪಗಳೆಲ್ಲವೂ ತೊಲಗಿಹೋಗಿಬಿಡುತ್ತವೆ. ಇದಕ್ಕೆ ಭಿನ್ನವಾಗಿ ಯಜ್ಞವೆಂಬ ಮಾತನ್ನು ಕೂಡ ಮರೆತುಹೋಗಿ, ತಮಗೋಸ್ಕರ ಮಾತ್ರವೇ ಯಾರು ಅಡುಗೆಮಾಡಿಕೊಂಡು ತಿನ್ನುತ್ತಾರೋ, ಅವರು ಪಾಪಾತ್ಮರು. ಅವರು ತಮ್ಮ ಪಾಪವನ್ನು ತಾವೇ ತಿನ್ನುತ್ತಿದ್ದಾರೆ” ಎಂದು. ಇದರೊಂದಿಗೆ ಬ್ರಹ್ಮದೇವನ ಬೋಧೆಯು ಪೂರ್ತಿಯಾಯಿತು.

14.ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವಃ।
ಯಜ್ಞಾದ್ಭವತಿ ಪರ್ಜನ್ಯಃ ಯಜ್ಞಃ ಕರ್ಮಸಮುದ್ಭವಃ॥

15.ಕರ್ಮ ಬ್ರಹ್ಮೋದ್ಭವಂ ವಿದ್ಧಿ ಬ್ರಹ್ಮಾಕ್ಷರಸಮುದ್ಭವಮ್‌।
ತಸ್ಮಾತ್ ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರತಿಷ್ಠಿತಮ್‌॥

ಅನ್ನಾತ್‌ = ಆಹಾರದಿಂದ, ಭೂತಾನಿ = ಪ್ರಾಣಿಗಳ ಶರೀರಗಳು, ಭವಂತಿ = ಉತ್ಪನ್ನವಾಗುತ್ತಿವೆ. ಪರ್ಜನ್ಯಾತ್‌ = ಮಳೆಯಿಂದ, ಅನ್ನಸಂಭವಃ = ಆಹಾರದ ಸೃಷ್ಟಿಯಾಗುತ್ತಿದೆ. ಯಜ್ಞಾತ್‌ = ಯಜ್ಞದ ಫಲವಾದ ಪುಣ್ಯದಿಂದ, ಪರ್ಜನ್ಯಃ = ಮಳೆಯು, ಭವತಿ = ಉತ್ಪನ್ನವಾಗುತ್ತಿದೆ. ಯಜ್ಞಃ = ಯಜ್ಞಫಲವಾದ ಪುಣ್ಯವು, ಕರ್ಮಸಮುದ್ಭವಃ = ಮಾನವನು ಮಾಡುವ ಸತ್ಕರ್ಮಗಳಿಂದ ಉತ್ಪನ್ನವಾಗುತ್ತಿದೆ.
ಕರ್ಮ = ಯಜ್ಞರೂಪವಾದ ಸತ್ಕರ್ಮವು, ಬ್ರಹ್ಮೋದ್ಭವಂ = ವೇದದಿಂದ ಹುಟ್ಟಿರುವುದೆಂದೂ, ಬ್ರಹ್ಮ = ಆ ವೇದವು, ಅಕ್ಷರಸಮುದ್ಭವಂ = ಪರಮಾತ್ಮನಿಂದ ಹುಟ್ಟಿರುವುದೆಂದೂ, ವಿದ್ಧಿ = ತಿಳಿದುಕೋ. ತಸ್ಮಾತ್‌ = ಆದ್ದರಿಂದ, ಸರ್ವಗತಂ = ಎಲ್ಲ ವಿಷಯಗಳನ್ನೂ ತಿಳಿಸಿಕೊಡುವುದೂ, ನಿತ್ಯಂ = ಸೃಷ್ಟಿ ಇರುವವರೆಗೂ, ನಿಂತಿರುವುದೂ, ಆದ, ಬ್ರಹ್ಮ = ವೇದವು, ಯಜ್ಞೇ = ನಿಷ್ಕಾಮಕರ್ಮದಲ್ಲಿ, ಪ್ರತಿಷ್ಠಿತಂ = ಅಧಿಕವಾಗಿ ಸ್ಥಾಪಿಸಲ್ಪಟ್ಟಿರುವುದು.

ಅರ್ಜುನನೆ! ಸತ್ಪದಾರ್ಥ ಸ್ವರೂಪವಾದ ಪರಬ್ರಹ್ಮನಿಂದ ಸೃಷ್ಟಿರಹಸ್ಯಗಳೆಲ್ಲವನ್ನೂ ಬೋಧಿಸುವ ವೇದವು ಉದ್ಭವಿಸಿರುವುದು. ಆ ವೇದದಿಂದ ಬಗೆಬಗೆಯ ಸತ್ಕರ್ಮಗಳು ಹುಟ್ಟಿರುವುವು. ಮಾನವನು ಮಾಡುವ ಸತ್ಕರ್ಮಗಳಿಂದ ಯಜ್ಞವೆನ್ನಲ್ಪಡುವ ಪುಣ್ಯವು ಹುಟ್ಟುತ್ತಿದೆ. ಆ ಪುಣ್ಯದಿಂದ ಸಕಾಲದಲ್ಲಿ ಮಳೆಯು ಆಗುತ್ತಿದೆ. ಆ ಮಳೆಯಿಂದ ವಿವಿಧ ಸಸ್ಯಜಾತಿಗಳ ರೂಪದಲ್ಲಿ ಜೀವಿಗಳಿಗೆ ಆಹಾರವು ಉತ್ಪನ್ನವಾಗುತ್ತಿದೆ. ಜೀವಿಗಳು ಆ ಆಹಾರವನ್ನು ತಿಂದರೆ, ಅದರಿಂದ ಅವರಂತಹ ಜೀವಿಗಳೇ ಹುಟ್ಟುತ್ತಿದ್ದಾರೆ. ಯಜ್ಞಗಳು ಸಫಲವಾಗಿ ಸೃಷ್ಟಿಚಕ್ರವು ವಿಚ್ಛಿನ್ನವಾಗದೆ ಮುಂದುವರೆಯುವ ವಿಧಾನವು ಇದೇ ಆಗಿದೆ.
ಹಾಗಾಗಿ, ಎಲೈ ಅರ್ಜುನನೆ! ಎಲ್ಲ ವಿಷಯಗಳನ್ನೂ ಬೋಧಿಸುವುದೂ, ಸೃಷ್ಟಿಯಿರುವಷ್ಟು ಕಾಲವೂ ನಿಂತಿರುವುದೂ ಆದ ವೇದವು, ಮಾನವರು ಆಚರಿಸುವ ಯಜ್ಞಕ್ರಿಯೆಯಲ್ಲಿ ಸುಸ್ಥಿರವಾಗಿ ನೆಲೆಸಿರುವುದು.
ವಿವರಣೆ:
ಇಲ್ಲಿ ಅಕ್ಷರಶಬ್ದವು ಪರಮಾತ್ಮಪರವು. ಬ್ರಹ್ಮಶಬ್ದವು ವೇದಪರವು.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ