ಗೀತೆ – 59 : ದೇವತಾದಿ ಮಾನವರಿಗೆ ಬ್ರಹ್ಮನು ಹೀಗೆ ಭೋದಿಸಿದನು

Gita
Spread the love

ಶ್ರೀ ಮದ್ಭಗವದ್ಗೀತಾ : 59

11. ದೇವಾನ್ ಭಾವಯತಾನೇನ ತೇ ದೇವಾ ಭಾವಯಂತು ವಃ।
ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ॥

ಅನೇನ = (ಎಲೈ ಮಾನವರೇ!) ವಿಹಿತಕರ್ಮರೂಪವಾದ ಈ ಯಜ್ಞದಿಂದ, ದೇವಾನ್‌= ನೀವು ದೇವತೆಗಳನ್ನು, ಭಾವಯತ = ವೃದ್ಧಿಪಡಿಸಿರಿ. ತೇ-ದೇವಾಃ = ಆ ದೇವತೆಗಳು, ವಃ = ನಿಮ್ಮನ್ನು, ಭಾವಯಂತು = ಸಂತೋಷಪಡಿಸುವಂತಾಗಲಿ! ಪರಸ್ಪರಂ = ಹೀಗೆ ನೀವಿಬ್ಬರೂ ಒಬ್ಬರನ್ನೊಬ್ಬರು, ಭಾವಯಂತಃ = ವೃದ್ಧಿ ಪಡಿಸಿಕೊಳ್ಳುತ್ತಾ, ಪರಂ = ಉತ್ತಮವಾದ, ಶ್ರೇಯಃ = ಶುಭವನ್ನು, ಅವಾಪ್ಸ್ಯಥ = ಹೊಂದಿರಿ.

ಅರ್ಜುನನೆ! ಸೃಷ್ಟಿ ಪ್ರಾರಂಭಕಾಲದಲ್ಲಿ ಬ್ರಹ್ಮದೇವನು ಮಾನವರಿಗೂ, ದೇವತೆಗಳಿಗೂ, ಸೇರಿಸಿ, ಹೀಗೆ ಬೋಧಿಸಿದನು – “”ಎಲೈ ಮಾನವರೇ! ನೀವು ವಿಹಿತಕರ್ಮಾಚರಣೆಯನ್ನು ಚೆನ್ನಾಗಿ ಮಾಡಿ. ಅದರಿಂದ ದೇವತೆಗಳಿಗೆ ಪುಷ್ಟಿಯುಂಟಾಗುವುದು. ಅದರಿಂದ ಆ ದೇವತೆಗಳು ನಿಮ್ಮ ವಿಷಯದಲ್ಲಿ ಪ್ರಸನ್ನರಾಗುವರು. ಅವರು ಪ್ರಸನ್ನರಾದರೆ, ನಿಮಗೆ ಸಕಾಲದಲ್ಲಿ ಸುರಿಯುವ ಮಳೆ ಮೊದಲಾದವುಗಳಿಂದ ಮತ್ತಷ್ಟು ಅಭಿವೃದ್ಧಿಯಾಗುತ್ತದೆ. ಎಲೈ ದೇವತೆಗಳೇ! ಎಲೈ ಮಾನವರೇ! ನೀವಿಬ್ಬರೂ ಈ ಪ್ರಕಾರ ಪರಸ್ಪರ ಉಪಕಾರಮಾಡಿಕೊಳ್ಳುತ್ತಾ, ಇನ್ನಷ್ಟು ಉತ್ತಮವಾದ ಶುಭಗಳನ್ನು ಪಡೆಯಿರಿ” ಎಂದು.

12. ಇಷ್ಟಾನ್ ಭೋಗಾನ್ ಹಿ ವೋ ದೇವಾಃ ದಾಸ್ಯಂತೇ ಯಜ್ಞಭಾವಿತಾಃ।
ತೈರ್ದತ್ತಾನ-ಪ್ರದಾಯೈಭ್ಯಃ ಯೋ ಭುಂಕ್ತೇ ಸ್ತೇನ ಏವ ಸಃ॥

ಯಜ್ಞಭಾವಿತಾಃ = ನಿಮ್ಮ ಯಜ್ಞಗಳಿಂದ ತೃಪ್ತಿ ಹೊಂದಲ್ಪಟ್ಟ, ದೇವಾಃ = ದೇವತೆಗಳು, ವಃ = ನಿಮಗೋಸ್ಕರ, ಇಷ್ಟಾನ್‌ = ನೀವು ಕೋರಿಕೊಂಡ, ಭೋಗಾನ್‌ = ಭೋಗ್ಯವಸ್ತುಗಳನ್ನು, ದಾಸ್ಯನ್ತೇ = ಕೊಡುವರು. ತೈಃ = ಆ ದೇವತೆಗಳಿಂದ, ದತ್ತಾನ್‌ = ಪ್ರಸಾದಿಸಲ್ಪಟ್ಟ ಪದಾರ್ಥಗಳನ್ನು, ಏಭ್ಯಃ = ದೇವತೆಗಳಿಗೆ, ಅಪ್ರದಾಯ = ನಿವೇದಿಸದೆ, ಯಃ = ಯಾವನಾದರೆ, ಭುಂಕ್ತೇ = ಅನುಭವಿಸುವನೋ, ಸಃ = ಅವನು, ಸ್ತೇನಃ-ಏವ = ಕಳ್ಳನೇ, ಹಿ = ಅಲ್ಲವೇ!

ಬ್ರಹ್ಮದೇವನು ತನ್ನ ಬೋಧೆಯನ್ನು ಇನ್ನೂ ಮುಂದುವರೆಸುತ್ತಿದ್ದಾನೆ- “”ಎಲೈ ಮಾನವರೇ! ನೀವು ಯಜ್ಞಗಳಿಂದ ದೇವತೆಗಳನ್ನು ತೃಪ್ತಿಪಡಿಸಿದರೆ, ಹಾಗೆ ತೃಪ್ತಿಪಡೆದ ದೇವತೆಗಳು ನೀವು ಕೋರಿಕೊಂಡ ಸುಖಭೋಗಗಳಿಗೆ ಬೇಕಾದ ಪದಾರ್ಥಗಳೆಲ್ಲವನ್ನೂ ನಿಮಗೆ ಪ್ರಸಾದಿಸುವರು. ಈ ಜನ್ಮದಲ್ಲಿ ನಿಮಗೆ ಸುಖಭೋಗಗಳು ಲಭಿಸುತ್ತಿವೆ ಎಂದರೆ, ಇವೆಲ್ಲವೂ ಹಿಂದಿನ ಜನ್ಮದಲ್ಲಿ ನೀವು ಮಾಡಿದ ಯಜ್ಞಗಳಿಗೆ ಫಲಿತವಾಗಿ ದೇವತೆಗಳು ಕೊಡುತ್ತಿರುವ ಪ್ರಸಾದಗಳೇ ಆಗಿವೆ. ಅದಕ್ಕಾಗಿಯೇ, ನಿಮಗೆ ಲಭಿಸಿದ ಭೋಗ್ಯಪದಾರ್ಥಗಳನ್ನು ನೀವು ಮತ್ತೆ ದೇವತೆಗಳಿಗೆ ನಿವೇದಿಸಿ, ಅವರ ಬಗ್ಗೆ ಕೃತಜ್ಞತೆಯುಳ್ಳವರಾಗಿ, ನಿಮ್ಮ ಸುಖಭೋಗಗಳನ್ನು ನೀವು ಅನುಭವಿಸ ಬೇಕು. ಇವು ದೇವತಾಪ್ರಸಾದಗಳೆಂಬ ವಿಷಯವನ್ನು ಮರೆತುಹೋಗಿ, ಅವುಗಳನ್ನು ಆ ದೇವತೆಗಳಿಗೆ ನಿವೇದಿಸದೆ ಥಟ್ಟನೆ ಅನುಭವಿಸಿಬಿಟ್ಟರೆ, ಅಂತಹವನು ಕೃತಘ್ನನುಮಾತ್ರನಲ್ಲದೆ, ಕಳ್ಳನು ಕೂಡಾ ಆಗುವನು” ಎಂದು.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ