ಶ್ರೀ ಮದ್ಭಗವದ್ಗೀತಾ : 58
9. ಯಜ್ಞಾರ್ಥಾತ್ ಕರ್ಮಣೋಽನ್ಯತ್ರ ಲೋಕೋಽಯಂ ಕರ್ಮಬಂಧನಃ।
ತದರ್ಥಂ ಕರ್ಮ ಕೌಂತೇಯ! ಮುಕ್ತಸಂಗ ಸ್ಸಮಾಚರ॥
ಯಜ್ಞಾರ್ಥಾತ್ = ಈಶ್ವರನಿಗೋಸ್ಕರ, ಆಚರಿಸಲ್ಪಡುವ, ಕರ್ಮಣಃ = ಕರ್ಮಕ್ಕಿಂತಲೂ, ಅನ್ಯತ್ರ = ಬೇರೆಯಾದ ಕರ್ಮದಿಂದ, ಅಯಂ = ಈ, ಲೋಕಃ = ಮಾನವನು, ಕರ್ಮಬಂಧನಃ = ಕರ್ಮದಿಂದ ಬಂಧಿಸಲ್ಪಡುವವನು ಆಗುತ್ತಿದ್ದಾನೆ.ಕೌಂತೇಯ = ಆದ್ದರಿಂದ, ಎಲೈ ಅರ್ಜುನನೆ ನೀನು, ಮುಕ್ತಸಂಗಃ = ಫಲಾಸಕ್ತಿಯನ್ನು ಬಿಟ್ಟುಬಿಟ್ಟವನಾಗಿ, ಕರ್ಮ = ಕರ್ಮವನ್ನು, ತದರ್ಥಂ = ಆ ಈಶ್ವರನಿಗೋಸ್ಕರ, ಸಮಾಚರ = ಆಚರಿಸು.
ಈಶ್ವರ ಪ್ರೀತಿಗೋಸ್ಕರವಲ್ಲದೆ ಇತರ ಪ್ರಯೋಜನಗಳಿಗೋಸ್ಕರ ಮಾಡುವ ಕರ್ಮದಿಂದ ಕರ್ಮಾರ್ಹತೆಯುಳ್ಳ ಮಾನವನು ಬಂಧಕ್ಕೆ ಒಳಗಾಗುತ್ತಿದ್ದಾನೆ. ಆದ್ದರಿಂದ ಎಲೈ ಅರ್ಜುನನೆ! ನೀನು ಮೊಟ್ಟಮೊದಲಾಗಿ ಫಲಾಸಕ್ತಿಯನ್ನು ಬಿಟ್ಟು, ಯಾವ ಕರ್ಮ ಮಾಡಿದರೂ ಪರಮೇಶ್ವರ ಪ್ರೀತಿಗೋಸ್ಕರವೇ ಮಾಡು.
ವಿವರಣೆ:
ಕರ್ಮವು ಯಾವಾಗಲೂ ಬಂಧಕರವೇ ಆಗಿರುತ್ತದೆ ಎಂದು ಲೋಕದಲ್ಲಿ ಪ್ರಸಿದ್ಧಿ ಇದೆ. ಅದಕ್ಕೋಸ್ಕರವೇ ಅರ್ಜುನನು ಕರ್ಮಪರಿತ್ಯಾಗವನ್ನು ಮಾಡುವ ಕುತೂಹಲದಲ್ಲಿದ್ದಾನೆ. ಅದಕ್ಕಾಗಿಯೇ ಭಗವಂತನು ಕರ್ಮವನ್ನು ಹೇಗೆ ಮಾಡಿದರೆ ಬಂಧವುಂಟಾಗುವುದೋ, ಹೇಗೆ ಮಾಡಿದರೆ ಬಂಧವು ತೊಲಗಿಹೋಗುವುದೋ, ಆ ರಹಸ್ಯವನ್ನು ಉಪದೇಶಿಸುತ್ತಿದ್ದಾನೆ. ಇಲ್ಲಿ ಯಜ್ಞಶಬ್ದವು ಈಶ್ವರಪರವು. ಈಶ್ವರನೆಂದರೆ ಪರಮಾತ್ಮನೇ ಆಗಿದ್ದಾನೆ.
10. ಸಹಯಜ್ಞಾಃ ಪ್ರಜಾ ಸ್ಸೃಷ್ಟ್ವಾ ಪುರೋವಾಚ ಪ್ರಜಾಪತಿಃ।
ಅನೇನ ಪ್ರಸವಿಷ್ಯಧ್ವಂ ಏಷ ವೋಽಸ್ತ್ವಿಷ್ಟಕಾಮಧುಕ್॥
ಪುರಾ = ಹಿಂದೆ ಸೃಷ್ಟಿಪ್ರಾರಂಭ ಸಮಯದಲ್ಲಿ, ಪ್ರಜಾಪತಿಃ = ಸೃಷ್ಟಿಕರ್ತನಾದ ಬ್ರಹ್ಮದೇವನು, ಸಹಯಜ್ಞಾಃ = ಯಜ್ಞಗಳ ಜೊತೆಯಲ್ಲಿ, ಪ್ರಜಾಃ = ಮಾನವರನ್ನು, ಸೃಷ್ಟ್ವಾ = ಸೃಷ್ಟಿಮಾಡಿ, ಅನೇನ = ಈ ಯಜ್ಞದಿಂದ, ಪ್ರಸವಿಷ್ಯಧ್ವಂ = ನೀವು ಬೆಳೆಯಿರಿ, ಏಷಃ = ಈ ಯಜ್ಞವು, ವಃ = ನಿಮಗೆ, ಇಷ್ಟಕಾಮಧುಕ್ = ಕೋರಿದ ಕೋರಿಕೆಯನ್ನು ತೀರಿಸುವ ಕಾಮಧೇನುವಂತಹದ್ದು, ಅಸ್ತು = ಆಗಲಿ! – ಎಂದು, ಉವಾಚ = ಹೇಳಿದನು.
ಸೃಷ್ಟಿ ಪ್ರಾರಂಭ ಸಮಯದಲ್ಲಿ ಬ್ರಹ್ಮದೇವನು ಮಾನವರನ್ನೂ, ಅವರೊಂದಿಗೆ ಯಜ್ಞಗಳನ್ನು ಕೂಡಾ, ಸೃಷ್ಟಿ ಮಾಡಿದನು. ಆ ಎರಡನ್ನೂ ಸೃಷ್ಟಿಮಾಡಿದ ಬಳಿಕ, ಆತನು ಮಾನವರನ್ನು ಕುರಿತು “”ಎಲೈ ಮಾನವರೇ! ಈ ಯಜ್ಞಗಳನ್ನು ನೀವು ಉಪಯೋಗಿಸಿಕೊಂಡು ನಿಮ್ಮ ಮಾನವಜಾತಿಯನ್ನು ವೃದ್ಧಿಪಡಿಸಿಕೊಳ್ಳಿ. ನೀವು ಕೂಡ ನಿಮ್ಮ ಜೀವನದಲ್ಲಿ ಅಭಿವೃದ್ಧಿ ಪಡೆಯಿರಿ. ಈ ವಿಧ್ಯುಕ್ತಕರ್ಮಗಳು ನೀವು ಕೋರಿಕೊಂಡ ಕೋರಿಕೆಗಳೆಲ್ಲವನ್ನೂ ಕಾಮಧೇನುವಿನಂತೆ ತೀರಿಸಲಿ” ಎಂದು ಹೇಳಿದನು. (ಇಲ್ಲಿ ಯಜ್ಞವೆಂದರೆ ವಿಧ್ಯುಕ್ತಕರ್ಮವು.)
ಅವತಾರಿಕೆ:
ಸೃಷ್ಟಿಪ್ರಕ್ರಿಯೆಯಲ್ಲಿ ದೈವೀಶಕ್ತಿಗಳ, ಮಾನವೀಯಶಕ್ತಿಗಳ, ಪರಸ್ಪರ ಸಾಪೇಕ್ಷತ್ವವನ್ನೂ, ಅವರ ಪರಸ್ಪರ ಸಹಕಾರದಿಂದ ಸೃಷ್ಟಿಚಕ್ರವು ವಿಧಾನವನ್ನು, ಭಗವಂತನು ಇನ್ನು 7 ಶ್ಲೋಕಗಳಲ್ಲಿ ಹೇಳಲಿದ್ದಾನೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ