ಗೀತೆ – 57 : ಸಕಾಮ ಕರ್ಮಕ್ಕಿಂತ ನಿಷ್ಕಾಮ ಕರ್ಮ ಶ್ರೇಷ್ಠವಾದುದು

Gita
Spread the love

ಶ್ರೀ ಮದ್ಭಗವದ್ಗೀತಾ : 57

7. ಯಸ್ತ್ವಿಂದ್ರಿಯಾಣಿ ಮನಸಾ ನಿಯಮ್ಯಾರಭತೇಽರ್ಜುನ!।
ಕರ್ಮೇಂದ್ರಿಯೈಃ ಕರ್ಮಯೋಗಂ ಅಸಕ್ತ ಸ್ಸ ವಿಶಿಷ್ಯತೇ॥

ಅರ್ಜುನ = ಎಲೈ ಅರ್ಜುನನೆ!, ತು = ಮೇಲೆ ಹೇಳಿದ್ದಕ್ಕೆ ಭಿನ್ನವಾಗಿ, ಯಃ = ಯಾವನಾದರೆ, ಇಂದ್ರಿಯಾಣಿ = ತನ್ನ ಹತ್ತು ಇಂದ್ರಿಯಗಳನ್ನೂ, ಮನಸಾ = ವಿವೇಕದಿಂದ ಕೂಡಿದ ತನ್ನ ಮನಸ್ಸಿನಿಂದ, ನಿಯಮ್ಯ = ನಿಗ್ರಹಿಸಿ, ಅಸಕ್ತಃ = ಫಲಾಸಕ್ತಿ ಇಲ್ಲದವನಾಗಿ, ಕರ್ಮೇಂದ್ರಿಯೈಃ = ತನ್ನ ಹತ್ತು ಇಂದ್ರಿಯಗಳಿಂದಲೂ, ಕರ್ಮಯೋಗಂ = ಕರ್ಮಯೋಗವನ್ನು, ಆರಭತೇ = ಆಚರಿಸುತ್ತಾನೆಯೋ, ಸಃ = ಅಂತಹ ಕರ್ಮಯೋಗಿಯು, ವಿಶಿಷ್ಯತೇ = ಇಷ್ಟಕ್ಕೂ ಮುಂಚೆ ಹೇಳಿದ ಮಿಥ್ಯಾಚಾರನಿಗಿಂತಲೂ ಶ್ರೇಷ್ಠನಾಗುತ್ತಿದ್ದಾನೆ.

ಅರ್ಜುನನೆ! ಜ್ಞಾನಯೋಗಸ್ಥಿತಿಯು ಸಿಗದವನಿಗೆ ವಿಧ್ಯುಕ್ತವಾದ ಕರ್ಮಗಳನ್ನು ಮಾಡುವ ಅವಶ್ಯಕತೆ ಇದೆ. ಆತನು ಅಂತಹ ಕರ್ಮಗಳನ್ನು ಆಚರಿಸುವಾಗ ಮೊದಲು ತನ್ನ ಮನಸ್ಸನ್ನು ವಿವೇಕವಂತವಾಗಿ ಮಾಡಿಕೊಳ್ಳಬೇಕು. ಅಂತಹ ಮನಸ್ಸಿನಲ್ಲಿರುವ ವಿವೇಕಬಲದಿಂದ ತನ್ನ ಇಂದ್ರಿಯಗಳೆಲ್ಲವನ್ನೂ ನಿಗ್ರಹಿಸಿಕೊಳ್ಳುತ್ತಾ, ತಾನು ಮಾಡಬೇಕಾದ ಕರ್ಮಗಳನ್ನು ಕರ್ಮಯೋಗರೂಪವಾಗಿ ಮಾಡಬೇಕು. ಅಂದರೆ, ಫಲಾಸಕ್ತಿ ಇಲ್ಲದೆಯೇ ಮಾಡಬೇಕು. ಹಾಗೆ ಮಾಡಿದರೆ ಆತನು ಜ್ಞಾನಯೋಗಕ್ಕಾಗಿ ಮೊಂಡುತನದಿಂದ ಮನಸ್ಸಿನಲ್ಲಿ ಕುಸ್ತಿಮಾಡುವವನಿಗಿಂತಲೂ ಉತ್ತಮನಾಗುತ್ತಾನೆ.

8. ನಿಯತಂ ಕುರು ಕರ್ಮ ತ್ವಂ ಕರ್ಮ ಜ್ಯಾಯೋ ಹ್ಯಕರ್ಮಣಃ।
ಶರೀರ ಯಾತ್ರಾಽಪಿ ಚ ತೇ ನ ಪ್ರಸಿದ್ಧ್ಯೇದಕರ್ಮಣಃ॥

ತ್ವಂ = (ಎಲೈ ಅರ್ಜುನನೆ!) ನೀನು, ನಿಯತಂ = ನಿನಗೆ ವಿಧ್ಯುಕ್ತವಾದಂತಹ, ಕರ್ಮ = ಕೆಲಸವನ್ನು, ಕುರು = (ತಪ್ಪದೆ) ಮಾಡು. ಹಿ = ಏಕೆಂದರೆ, ಅಕರ್ಮಣಃ = ಯಾವ ಕೆಲಸವೂ ಮಾಡದೇ ಇರುವುದಕ್ಕಿಂತ, ಕರ್ಮ = ವಿಧ್ಯುಕ್ತವಾದ ಕರ್ಮವನ್ನು ಮಾಡುವುದು, ಜ್ಯಾಯಃ = ಶ್ರೇಷ್ಠತರವಾದದ್ದು. ಚ = ಮತ್ತು, ಅಕರ್ಮಣಃ = ಯಾವ ಕರ್ಮವೂ ಮಾಡದೇ ಇರುವುದರಿಂದ, ತೇ = ನಿನಗೆ, ಶರೀರಯಾತ್ರಾ-ಅಪಿ = ದಿನವಹಿ ಜೀವನವು ಕೂಡ, ನ-ಪ್ರಸಿದ್ಧ್ಯೇತ್‌ = ನಡೆಯುವುದಿಲ್ಲ.

ಅರ್ಜುನನೆ! ಯಾವುದೋ ಒಂದನ್ನು ನಿಶ್ಚಯಿಸಿ ಹೇಳೆಂದು ಕೇಳುತ್ತಿರುವೆಯಲ್ಲವೆ! ಹೇಳುತ್ತಿದ್ದೇನೆ ಕೇಳು. ಸಂಪೂರ್ಣ ಜ್ಞಾನಸಿದ್ಧಿಯಿಲ್ಲದವನು ಯಾವ ಕೆಲಸವನ್ನೂ ಮಾಡದೇ ಇರುವುದಕ್ಕಿಂತ, ಕನಿಷ್ಠ ಸಕಾಮಕರ್ಮವನ್ನಾದರೂ ಮಾಡುವುದು ಒಳ್ಳೆಯದು. ಏಕೆಂದರೆ, ಯಾವ ಕೆಲಸವನ್ನೂ ಮಾಡದೇ ಇದ್ದರೆ ಕನಿಷ್ಠ ಪ್ರಾಣಗಳು ಕೂಡಾ ಉಳಿಯುವುದಿಲ್ಲ. ಆದ್ದರಿಂದ ಪ್ರತಿಯೊಬ್ಬನೂ ಯಾವುದೋ ಒಂದು ಕೆಲಸವನ್ನು ಮಾಡದೇ ಇರಲಾರನು. ಆದರೆ, ಸಕಾಮಕರ್ಮಕ್ಕಿಂತ, ನಿಷ್ಕಾಮ- ಕರ್ಮವು ಅಧಿಕ ಶ್ರೇಷ್ಠವಾದದ್ದು. ಆದ್ದರಿಂದ ನೀನು ನಿನ್ನ ವಿಧ್ಯುಕ್ತವಾದ ಕರ್ಮವನ್ನು ನಿಷ್ಕಾಮವಾಗಿ ಆಚರಿಸು. ಇದೇ ನಿನ್ನ ಕರ್ತವ್ಯವಾಗಿದೆ.
ವಿವರಣೆ:
ಇಲ್ಲಿಯತನಕ ಜ್ಞಾನಯೋಗ, ಕರ್ಮಯೋಗ, ಮಿಥ್ಯಾಚಾರಗಳನ್ನು ಕುರಿತು ತಾರತಮ್ಯಗಳ ಪರಿಶೀಲನೆ ಮಾಡಿದ ಭಗವಂತನು, ಇನ್ನು ಅರ್ಜುನನ ಕರ್ತವ್ಯವನ್ನು ನಿಶ್ಚಯಿಸಿ ಹೇಳಿಬಿಡುತ್ತಿದ್ದಾನೆ. ಇದರಿಂದ ಇತರ ಸಾಧಕರು ಕೂಡಾ ತಮ್ಮ ಕರ್ತವ್ಯವನ್ನು ನಿಶ್ಚಯಿಸಿಕೊಳ್ಳಬೇಕೆಂಬುದು ಭಗವಂತನ ಆಶಯವು.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ