ಗೀತೆ – 56 : ಕರ್ಮಗಳನ್ನು ಪೂರ್ತಿಯಾಗಿ ತ್ಯಾಗ ಮಾಡಲಾಗದು

Gita
Spread the love

ಶ್ರೀ ಮದ್ಭಗವದ್ಗೀತಾ : 56

5. ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್‌।
ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿಜೈರ್ಗುಣೈಃ ॥

ಕಶ್ಚಿತ್‌ = ಯಾವೊಬ್ಬನೂ ಕೂಡ, ಕ್ಷಣಂ-ಅಪಿ = ಒಂದು ಕ್ಷಣವಾದರೂ ಕೂಡ, ಅಕರ್ಮಕೃತ್‌ = ಯಾವ ಕೆಲಸವೂ ಮಾಡದೇ, ಜಾತು = ಎಂದಿಗೂ ಕೂಡ, ನ-ತಿಷ್ಠತಿ-ಹಿ = ಇರಲಾರನಲ್ಲವೇ! ಹಿ = ಏಕೆಂದರೆ, ಸರ್ವಃ = ಜ್ಞಾನಸಿದ್ಧನಲ್ಲದ ಪ್ರತಿಯೊಬ್ಬ ಮಾನವನೂ, ಪ್ರಕೃತಿಜೈಃ = ಮಾಯಾಶಕ್ತಿಯಿಂದ ಉಂಟಾದ, ಗುಣೈಃ = ಸತ್ತ್ವರಜಸ್ತಮೋಗುಣಗಳಿಂದ, ಅವಶಃ = ತನ್ನ ವಶದಲ್ಲಿ ಇಲ್ಲದವನಾಗಿ, ಕರ್ಮ =
ಆಯಾ ಕೆಲಸಗಳನ್ನು, ಕಾರ್ಯತೇ = ಮಾಡಿಸಲ್ಪಡುತ್ತಲೇ ಇರುವನು.

ಅರ್ಜುನನೆ! ಯಾವ ಕೆಲಸವೂ ಮಾಡದೆ, ಯಾವನೂ ಒಂದು ಕ್ಷಣವಾದರೂ ಇರಲಾರನು. ಏಕೆಂದರೆ, ಜ್ಞಾನಸಿದ್ಧಿಯುಂಟಾಗುವವರೆಗೂ, ಮಾನವರು ಮಾಯಾಶಕ್ತಿಯ ವಶದಲ್ಲಿಯೇ ಇರುತ್ತಾರೆ. ಆದ್ದರಿಂದ, ಮಾಯಾಶಕ್ತಿಯಲ್ಲಿ ಅಂತರ್ಭಾಗವಾಗಿರುವ ಸತ್ತ್ವರಜಸ್ತಮೋಗುಣಗಳು ಅವರ ಮೇಲೆ ಕೆಲಸ ಮಾಡುತ್ತಲೇ ಇರುತ್ತವೆ. ಆ ಗುಣಗಳ ಪ್ರಭಾವದಿಂದ ತಪ್ಪಿಸಿಕೊಳ್ಳಲು ಅವರಿಂದ ಸಾಧ್ಯವಾಗದು. ಆದ್ದರಿಂದ, ಅವರು
ಯಾವಾಗಲೂ ಯಾವುದೋ ಒಂದು ಕರ್ಮವನ್ನು ಮಾಡುವ ಹಾಗೆ ಆ ಗುಣಗಳು ಅವರನ್ನು ಪ್ರಭಾವಿತಗೊಳಿಸುತ್ತಲೇ ಇರುತ್ತವೆ. ಹಾಗಾಗಿ, ಕರ್ಮಗಳನ್ನು ಪೂರ್ತಿಯಾಗಿ ಪರಿತ್ಯಾಗ ಮಾಡಲು ಸಾಧ್ಯವಾಗದು. ಆದ್ದರಿಂದ “ಕರ್ಮಪರಿತ್ಯಾಗ’ವೆಂದರೆ, “ಕರ್ಮಫಲಗಳ ಪರಿತ್ಯಾಗವೇ’ ಎಂದು ಅರ್ಥಮಾಡಿಕೊಳ್ಳಬೇಕು.

6. ಕರ್ಮೇಂದ್ರಿಯಾಣಿ ಸಂಯಮ್ಯ ಯ ಆಸ್ತೇ ಮನಸಾ ಸ್ಮರನ್‌।
ಇಂದ್ರಿಯಾರ್ಥಾನ್ ವಿಮೂಢಾತ್ಮಾ ಮಿಥ್ಯಾಚಾರ ಸ್ಸ ಉಚ್ಯತೇ॥

ಯಃ = ಯಾವನಾದರೆ, ವಿಮೂಢಾತ್ಮಾ = ಮೊಂಡುತನದಿಂದ ತುಂಬಿದ ಮನಸ್ಸುಳ್ಳವನಾಗಿ, ಕರ್ಮೇಂದ್ರಿಯಾಣಿ = ಕೆಲಸಮಾಡುವ ಹತ್ತು ಇಂದ್ರಿಯಗಳನ್ನು, ಸಂಯಮ್ಯ = ಬಲಾತ್ಕಾರವಾಗಿ ನಿಗ್ರಹಿಸಿ, ಇಂದ್ರಿಯಾರ್ಥಾನ್‌ = ಇಂದ್ರಿಯಗಳಿಗೆ ವಿಷಯಗಳಾದ ಶಬ್ದಾದಿಗಳನ್ನು, ಮನಸಾ = ಮನಸ್ಸಿನಿಂದ, ಸ್ಮರನ್‌-ಆಸ್ತೇ = ಸ್ಮರಿಸುತ್ತಾ ಇರುತ್ತಾನೆಯೋ, ಸಃ = ಅಂತಹವನು, ಮಿಥ್ಯಾಚಾರಃ = ಕಪಟವಾದ ಪ್ರವರ್ತನೆ ಇರುವವನೆಂದು, ಉಚ್ಯತೇ = ಹೇಳಲ್ಪಡುತ್ತಿದ್ದಾನೆ.

ಅರ್ಜುನನೆ! ಕೆಲವರು ಕರ್ಮತ್ಯಾಗಕ್ಕೂ, ಕರ್ಮಫಲತ್ಯಾಗಕ್ಕೂ ಇರುವ ಭೇದವನ್ನು ಮನಸ್ಸಿಗೆ ಹಿಡಿಸಿಕೊಳ್ಳದೆ, ಮೊಂಡಾಗಿ, ತಮ್ಮ
ದಶೇಂದ್ರಿಯಗಳನ್ನು ಬಲಾತ್ಕಾರವಾಗಿ ಅದುಮಿಟ್ಟು, ಎಲ್ಲದಕ್ಕಿಂತಲೂ ಮುಖ್ಯವಾದ ಮನಸ್ಸನ್ನು ಮಾತ್ರ ನಿಗ್ರಹಿಸಲಾರದೆ, ಆ ಮನಸ್ಸಿನಲ್ಲಿ ಬಗೆಬಗೆಯಾದ ವಿಷಯಗಳನ್ನು, ಸ್ಮರಿಸುತ್ತಲೇ ಇರುತ್ತಾರೆ. ಅಂತಹವರ ಬುದ್ಧಿಯು ಮೂಢಬುದ್ಧಿ. ಅವರ ಆಚಾರವು ಕಪಟವಾದದ್ದು, ಅಸತ್ಯವಾದದ್ದು, ಪಾಪಿಷ್ಠವಾದದ್ದು – ಎಂದು ಹಿರಿಯರು ನಿಶ್ಚಯಿಸಿ ಹೇಳುತ್ತಿದ್ದಾರೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ