ಗೀತೆ – 55 : ನಿಷ್ಕಾಮಕರ್ಮಾಚರಣೆ ಬಿಟ್ಟ ಮಾತ್ರಕ್ಕೆ ಜ್ಞಾನ ಮಾರ್ಗವು ಬಂದು ಬೀಳದು

Gita
Spread the love

ಶ್ರೀ ಮದ್ಭಗವದ್ಗೀತಾ : 55

ಶ್ರೀಭಗವಾನುವಾಚ:
3. ಲೋಕೇಽಸ್ಮಿನ್ ದ್ವಿವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾಽನಘ। ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಮ್‌॥

ಶ್ರೀಭಗವಾನುವಾಚ = ಶ್ರೀಭಗವಂತನು ಹೇಳಿದನು. ಅನಘ = ಎಲೈ ದೋಷರಹಿತನೇ!, ಪುರಾ = ಹಿಂದೆ ಸೃಷ್ಟಿ ಪ್ರಾರಂಭ ಸಮಯದಲ್ಲಿ, ಸಾಂಖ್ಯಾನಾಂ = ಜ್ಞಾನಾರ್ಹತೆಯುಳ್ಳವರಿಗೆ, ಜ್ಞಾನಯೋಗೇನ = ಜ್ಞಾನವೆಂಬ ಉಪಾಯದಿಂದಲೂ, ಯೋಗಿನಾಂ = ನಿಷ್ಕಾಮಕರ್ಮ ಮಾಡುವ ಅರ್ಹತೆಯುಳ್ಳವರಿಗೆ, ಕರ್ಮಯೋಗೇನ = ಕರ್ಮವೆಂಬ ಉಪಾಯದಿಂದಲೂ, ದ್ವಿವಿಧಾ = ಎರಡು ವಿಧವಾದ, ನಿಷ್ಠಾ = ಅನುಷ್ಠಾನ ಪದ್ಧತಿಯು, ಮಯಾ = ನನ್ನಿಂದ, ಅಸ್ಮಿನ್‌-ಲೋಕೇ = ಈ ಮಾನವಲೋಕದಲ್ಲಿ, ಪ್ರೋಕ್ತಾ = ಹೇಳಲ್ಪಟ್ಟಿರುವುದು.

ಶ್ರೀಭಗವಂತನು ಹೇಳಿದನು :-
ಯಾವ ಮಾನಸಿಕ ದೋಷವೂ ಇಲ್ಲದಿರುವ ಅರ್ಜುನನೆ! ಹಿಂದೆ ನಾನು ಈ ಸೃಷ್ಟಿಯನ್ನು ಪ್ರಾರಂಭಿಸಿದ ಸಮಯದಲ್ಲಿ, ಮಾನವಲೋಕದ ಸೃಷ್ಟಿಯನ್ನು ಮಾಡುತ್ತಿರುವಾಗ, ಸೃಷ್ಟಿಯಾಗಲಿರುವ ಮಾನವರ ಉತ್ತಮಗತಿಗೋಸ್ಕರ ಎರಡು ವಿಧವಾದ ಅನುಷ್ಠಾನ ವಿಧಾನಗಳನ್ನು ಏರ್ಪಾಟುಮಾಡಿದ್ದೇನೆ. ಮಾನವರಲ್ಲಿ ಕೆಲವರು ಬಾಲ್ಯಾವಸ್ಥೆಯಿಂದಲೇ ಆತ್ಮತತ್ತ್ವಜ್ಞಾನದಮೇಲೆ ಆಸಕ್ತಿಯಿಂದಿರುತ್ತಾರೆ. ಅವರನ್ನೇ ಸಾಂಖ್ಯರು ಎನ್ನುತ್ತಾರೆ. ಅಂತಹವರಿಗೋಸ್ಕರ ಜ್ಞಾನಯೋಗವೆಂಬ ಮಾರ್ಗವನ್ನು ಏರ್ಪಡಿಸಿದ್ದೇನೆ. ಮಾನವರಲ್ಲಿಯೇ ಕೆಲವರು ನಿತ್ಯಕರ್ಮಾಚರಣಶೀಲಿಗಳಾಗಿ ಇರುತ್ತಾರೆ. ಅವರನ್ನೇ ಯೋಗಿಗಳು ಎನ್ನುತ್ತಾರೆ. ಅಂತಹವರಿಗೋಸ್ಕರ ಕರ್ಮಯೋಗವೆಂಬ ಮಾರ್ಗವನ್ನೂ ಏರ್ಪಡಿಸಿದ್ದೇನೆ. ಈ ಎರಡು ಮಾರ್ಗಗಳೂ ನಾನು ಏರ್ಪಾಟು ಮಾಡಿರುವುವೇ ಆಗಿವೆ. ಈ ಎರಡೂ ಮಾನವರ ಉತ್ತಮಗತಿಗೋಸ್ಕರವೇ ಏರ್ಪಟ್ಟಿವೆ ಎಂಬೀ ವಿಷಯವನ್ನು ಗಮನಿಸು.
ಅವತಾರಿಕೆ:
ಭಗವಂತನು ಹೇಳುತ್ತಿರುವ ಸಮಾಧಾನದ ಪದ್ಧತಿಯನ್ನು ನೋಡಿದರೆ, ಆತನು ಜ್ಞಾನಮಾರ್ಗದ ಹಿರಿಮೆಯನ್ನು ತಿರಸ್ಕರಿಸುತ್ತಿಲ್ಲ. ಆದರೆ ಅರ್ಜುನನನ್ನು ಮಾತ್ರ ಅದರೊಳಗೆ ಪ್ರವೇಶಿಸಲು ಅನುಮತಿಸುತ್ತಿಲ್ಲ. ಈ ವಿಷಯವನ್ನು ಅರ್ಥಮಾಡಿಕೊಂಡ ಅರ್ಜುನನು “”ಇದೇನಿದು?” ಎಂದು ದುಃಖಿಸುವುದು ಸಹಜ. ಆ ವಿಷಯವನ್ನು ಗ್ರಹಿಸಿದ ಭಗವಂತನು, ಕರ್ಮ- ಕರ್ಮಸಂನ್ಯಾಸಗಳಿಗೆ; ಕರ್ಮಯೋಗ – ಜ್ಞಾನಯೋಗಗಳಿಗೆ; ಇರುವ ತಾರತಮ್ಯವನ್ನು, ನಾಲ್ಕು ಶ್ಲೋಕಗಳಲ್ಲಿ, ಇನ್ನಷ್ಟು ಸ್ಪಷ್ಟವಾಗಿ ಉಪದೇಶಿಸಲು ಉಪಕ್ರಮಿಸುತ್ತಿದ್ದಾನೆ.

4. ನ ಕರ್ಮಣಾ ಮನಾರಂಭಾತ್ ನೈಷ್ಕರ್ಮ್ಯಂ ಪುರುಷೋಽಶ್ನುತೇ।
ನ ಚ ಸಂನ್ಯಸನಾದೇವ ಸಿದ್ಧಿಂ ಸಮಧಿಗಚ್ಛತಿ॥

ಕರ್ಮಣಾಂ = ಫಲಾಕಾಂಕ್ಷೆಯಿಲ್ಲದ ಸತ್ಕರ್ಮಗಳನ್ನು, ಅನಾರಂಭಾತ್‌ = ಅನುಷ್ಠಿಸದೇ ಇದ್ದಷ್ಟು ಮಾತ್ರಕ್ಕೆ, ಪುರುಷಃ = ಮಾನವನು, ನೈಷ್ಕರ್ಮ್ಯಂ = ಜ್ಞಾನಯೋಗನಿಷ್ಠೆಯನ್ನು, ನ-ಅಶ್ನುತೇ = ಪಡೆಯುವುದಿಲ್ಲ. ಚ = ಮತ್ತು, ಸಂನ್ಯಸನಾತ್‌- ಏವ = ಜ್ಞಾನನಿಷ್ಠೆಯಿಲ್ಲದೆ ಕರ್ಮಗಳನ್ನು ಬಿಟ್ಟುಬಿಟ್ಟ ಮಾತ್ರಕ್ಕೆ, ಸಿದ್ಧಿಂ = ಆತ್ಮಜ್ಞಾನಸಿದ್ಧಿಯನ್ನು, ನ-ಸಮಧಿಗಚ್ಛತಿ = ಹೊಂದುವುದಿಲ್ಲ.

ಅರ್ಜುನನೆ! ನೀನು ಜ್ಞಾನಮಾರ್ಗಕ್ಕೋಸ್ಕರ ಆತುರಪಡುತ್ತಿರುವೆ ಎಂದು ನನಗೆ ಗೊತ್ತು. ಆದರೆ ನಿಷ್ಕಾಮಕರ್ಮಾಚರಣೆಯನ್ನು ಬಿಟ್ಟುಬಿಟ್ಟ ಮಾತ್ರಕ್ಕೆ, ಜ್ಞಾನಮಾರ್ಗವು ನಿನ್ನ ಕೈಯಲ್ಲಿ ಬಂದುಬೀಳದು. ಅಷ್ಟೇ ಅಲ್ಲ, ಜ್ಞಾನನಿಷ್ಠೆಯನ್ನು ಸಾಧಿಸದೆ, ವಿಹಿತವಾದ ಕರ್ಮವನ್ನು ಪರಿತ್ಯಾಗಮಾಡಿದರೂ ಸಹ ಆತ್ಮಜ್ಞಾನಸಿದ್ಧಿಯು ಲಭಿಸದು.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ