ಶ್ರೀ ಮದ್ಭಗವದ್ಗೀತಾ : 53
ಅರ್ಜುನ ಉವಾಚ:
1.ಜ್ಯಾಯಸೀ ಚೇತ್ ಕರ್ಮಣಸ್ತೇ ಮತಾ ಬುದ್ಧಿರ್ಜನಾರ್ದನ!।
ತತ್ಕಿಂ ಕರ್ಮಣಿ ಘೋರೇ ಮಾಂ ನಿಯೋಜಯಸಿ ಕೇಶವ!॥
ಅರ್ಜುನ ಉವಾಚ = ಅರ್ಜುನನು ಹೇಳಿದನು. ಜನಾರ್ದನ = ಜ್ಞಾನಪ್ರದನಾದ, ಕೇಶವ = ಕೃಷ್ಣನೇ! ಕರ್ಮಣಃ = ಕರ್ಮಕ್ಕಿಂತಲೂ, ಬುದ್ಧಿಃ = ಜ್ಞಾನವೇ, ಜ್ಯಾಯಸೀ = ಶ್ರೇಷ್ಠವಾದುದೆಂದು, ತೇ = ನಿನ್ನ, ಮತಾ-ಚೇತ್ = ಅಂಗೀಕಾರವು ಆಗಿದ್ದರೆ, ತತ್ = ಹಾಗಿರುವಾಗ, ಮಾಂ = ನನ್ನನ್ನು, ಘೋರೇ = ಭಯಂಕರವಾದ (ಹಿಂಸಾತ್ಮಕವಾದ), ಕರ್ಮಣಿ = ಕರ್ಮದಲ್ಲಿ, ಕಿಂ = ಏಕೆ, ನಿಯೋಜಯಸಿ = ಪ್ರವರ್ತಿಸುವ ಹಾಗೆ ಮಾಡುತ್ತಿರುವೆ?
ಅರ್ಜುನನು ಹೇಳಿದನು :-
ಜನಾರ್ದನನೆ! ಕೇಶವನೆ! ಶ್ರೀಕೃಷ್ಣನೆ! ಕರ್ಮಮಾರ್ಗಕ್ಕಿಂತಲೂ, ಜ್ಞಾನಮಾರ್ಗವೇ ಶ್ರೇಷ್ಠವೆಂಬುದು ನಿನ್ನ ಅಭಿಪ್ರಾಯವು ಆಗಿದ್ದಲ್ಲಿ, ನನ್ನನ್ನು ಈ ಕರ್ಮಮಾರ್ಗದಲ್ಲಿ ಏತಕ್ಕೆ ಸೇರಿಸುತ್ತಿರುವೆ? ಅದರಲ್ಲೂ ನನಗಿರುವ ಕರ್ಮಮಾರ್ಗವು ಬಹಳ ಘೋರವಾದುದೂ, ಹಿಂಸಾತ್ಮಕವಾದುದೂ ಅಲ್ಲವೇ!
2.ವ್ಯಾಮಿಶ್ರೇಣೇವ ವಾಕ್ಯೇನ ಬುದ್ಧಿಂ ಮೋಹಯಸೀವ ಮೇ।
ತದೇಕಂ ವದ ನಿಶ್ಚಿತ್ಯ ಯೇನ ಶ್ರೇಯೋಽಹಮಾಪ್ನುಯಾಮ್॥
ವ್ಯಾಮಿಶ್ರೇಣ-ಇವ = ಕಲಸಿಹೋದಂತೆ ಇರುವುದೋ ಎಂಬಂತಿರುವ, ವಾಕ್ಯೇನ = ಮಾತಿನಿಂದ, ಮೇ = ನನ್ನ, ಬುದ್ಧಿಂ = ಮನಸ್ಸನ್ನು, ಮೋಹಯಸಿ-ಇವ = ಮೋಹಗೊಳಿಸುತ್ತಿರುವೆಯೋ ಎಂಬಂತಿರುವೆ, ತತ್ = ಆದ್ದರಿಂದ, ಅಹಂ = ನಾನು, ಯೇನ = ಯಾವ ಮಾರ್ಗದಿಂದ, ಶ್ರೇಯಃ = ಮೋಕ್ಷವನ್ನು, ಆಪ್ನುಯಾಮ್ = ಪಡೆಯುವೆನೋ, ಅಂತಹ, ಏಕಂ = ಒಂದೇ ಒಂದು ಮಾರ್ಗವನ್ನು, ನಿಶ್ಚಿತ್ಯ = ನಿಶ್ಚಯಿಸಿ, ವದ = ಹೇಳು.
ಓ ಶ್ರೀಕೃಷ್ಣನೇ! ನೀನು ಸ್ಪಷ್ಟವಾಗಿಯೇ ಹೇಳಿರುತ್ತೀಯೆ. ಆದರೆ ನಾನು ಮಂದಬುದ್ಧಿ ಆದ್ದರಿಂದ, ನಿನ್ನ ಮಾತುಗಳು ಕಲಬೆರಕೆಯಾದಂತೆ ಇರುವುವೇನೋ ಎಂಬಂತೆ ನನಗೆ ಅನಿಸುತ್ತಿದೆ. ಅದರಿಂದ ನನ್ನ ಮನಸ್ಸು ಒಂದು ನಿಶ್ಚಯಕ್ಕೆ ಬರಲಾರದೆ ಗೊಂದಲದಲ್ಲಿ ಇರುವಂತಿದೆ. ಆದ್ದರಿಂದ ನೀನು ನನ್ನ ಅರ್ಹತೆಯನ್ನು ಪರಿಶೀಲಿಸಿ, ನನಗೆ ಮೋಕ್ಷವನ್ನು ಕೊಡುವ ಮಾರ್ಗವಾವುದೋ ಅದೊಂದನ್ನೇ ನಿಶ್ಚಯಿಸಿ ಹೇಳು.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ