ಗೀತೆ – 53 : ಕರ್ಮಯೋಗ, ಜ್ಞಾನಯೋಗದಲ್ಲಿ ಭಗವಂತನ ಮಾತು ತಜಿಬಿಜಿಯಾಗಿದೆ

Gitacharya
Spread the love

ಶ್ರೀ ಮದ್ಭಗವದ್ಗೀತಾ : 53

ಮೂರನೆಯ ಅಧ್ಯಾಯ

3. ಕರ್ಮಯೋಗ

ಅವತಾರಿಕೆ:
ಒಂದನೆಯ ಅಧ್ಯಾಯದ ಕೊನೆಯಲ್ಲಿ ಅರ್ಜುನನು ಶೋಕಮೋಹಗಳಿಂದ ಆಕುಲನಾಗಿ, ನೀರಸಗೊಂಡು, ರಥದಲ್ಲಿ ಕುಳಿತುಬಿಟ್ಟನೆಂದು ಹೇಳಿದರು.
ಎರಡನೆಯ ಅಧ್ಯಾಯದ ಪ್ರಾರಂಭದಲ್ಲಿ ಭಗವಂತನು ಬುದ್ಧಿಮಾತು ಹೇಳಲು, ಅರ್ಜುನನು ಸ್ವಲ್ಪ ಎಚ್ಚೆತ್ತುಕೊಂಡು “ಯಚ್ಛ್ರೇಯಃ ಸ್ಯಾನ್ನಿಶ್ಚಿತಂ ಬ್ರೂಹಿ ತನ್ಮೇ’ (2-7) (ನನಗೆ ಮೋಕ್ಷಪ್ರದವಾದ ಮಾರ್ಗ ಯಾವುದೋ ನೀನೇ ನಿಶ್ಚಯಿಸಿ ಹೇಳು) – ಎಂದು ಪ್ರಾರ್ಥಿಸಿದನು.
ಅದಕ್ಕೆ ಭಗವಂತನು ಸಮಾಧಾನ ಹೇಳುತ್ತಾ, ಮೊದಲಲ್ಲಿ ಸ್ವಲ್ಪ ಸತ್ಪದಾರ್ಥವನ್ನು ವಿವರಣೆಮಾಡಿ “ತಸ್ಮಾತ್ ಯುದ್ಧ್ಯಸ್ವ ಭಾರತ’ (2-18) (ಆದ್ದರಿಂದ ನೀನು ಯುದ್ಧ ಮಾಡಲೇಬೇಕಯ್ಯಾ) – ಎಂದು ಹೇಳಿಯೇ ಬಿಟ್ಟನು.
ಆಮೇಲೆ 39ನೆಯ ಶ್ಲೋಕದಲ್ಲಿ ಜ್ಞಾನಮಾರ್ಗ, ಕರ್ಮಮಾರ್ಗಗಳೆಂಬ ಎರಡು ಮಾರ್ಗಗಳಿವೆ ಎಂದು ವಿಭಾಗಮಾಡಿ ತೋರಿಸಿ, ಆನಂತರ 45ನೆಯ ಶ್ಲೋಕದಲ್ಲಿ “ನಿಸ್ತ್ರೈಗುಣ್ಯೋ ಭವಾರ್ಜುನ’ (2-45) (ನೀನು ಸತ್ತ್ವ-ರಜ-ಸ್ತಮೋಗುಣಗಳನ್ನು ದಾಟಿಹೋಗು) ಎಂದನು. ಇದು ಜ್ಞಾನಯೋಗದಿಂದ ಲಭಿಸುವ ಸ್ಥಿತಿ. ಇದರಿಂದ ಜ್ಞಾನಯೋಗವೇ ಸಾಕ್ಷಾತ್ ಮೋಕ್ಷವನ್ನು ದೊರಕಿಸಿಕೊಡಬಲ್ಲದು – ಎಂಬೀ ಅರ್ಥವು ಬರುತ್ತಿದೆ.
ಆದರೆ ಈ ಮಧ್ಯದಲ್ಲಿ 38ನೆಯ ಶ್ಲೋಕದಲ್ಲಿ ನಿಷ್ಕಾಮಕರ್ಮಯೋಗ ಮಾರ್ಗವನ್ನು ವಿವರಿಸಿ, ತದನಂತರ 47ನೆಯ ಶ್ಲೋಕದಲ್ಲಿ “ಕರ್ಮಣ್ಯೇವಾಧಿಕಾರಸ್ತೇ’ (ಅರ್ಜುನನೆ! ನಿನಗೆ ಮಾತ್ರ ಜ್ಞಾನಯೋಗಮಾರ್ಗದಲ್ಲಿ ಪ್ರವೇಶಿಸಲು ಅರ್ಹತೆ ಇಲ್ಲ. ಕರ್ಮಯೋಗದಲ್ಲಿ ಮಾತ್ರವೇ ಇರುವುದು) ಎಂದು ಕಡ್ಡಿಮುರಿದಂತೆ ಹೇಳಿದನು.
49ನೆಯ ಶ್ಲೋಕದಲ್ಲಿ ಕರ್ಮಯೋಗದ ಮೂಲಕ ಜ್ಞಾನಯೋಗವನ್ನುಪ್ರವೇಶಿಸಬಹುದಾದ್ದರಿಂದ “ಬುದ್ಧೌ ಶರಣಮನ್ವಿಚ್ಛ’ (2-49) (ಕರ್ಮಯೋಗ ಪರಿಪಾಕದಿಂದ ಜನಿಸುವ ಜ್ಞಾನಯೋಗಮಾರ್ಗವನ್ನೇ ಶರಣಾಗು) – ಎಂದು ಹೇಳಿದನು.
ಹಾಗಾಗಿ, ಕರ್ಮಯೋಗದಿಂದ ಸಾಕ್ಷಾತ್ತಾಗಿ ಮೋಕ್ಷವು ಸಿದ್ಧಿಸುವುದೆಂದು ಭಗವಂತನು ಹೇಳುತ್ತಿಲ್ಲ. ಅದು ಕ್ರಮವಾಗಿ ಜ್ಞಾನಯೋಗದಲ್ಲಿ ಪರಿಣಾಮ ಹೊಂದಿ ಆಗ ಮೋಕ್ಷವನ್ನು ಕೊಡುವುದು – ಎಂದು ಹೇಳುತ್ತಿದ್ದಾನೆ.
ಅಲ್ಲಿಗೇ ನಿಲ್ಲದೆ, 55ನೆಯ ಶ್ಲೋಕದಿಂದ 71ನೆಯ ಶ್ಲೋಕದವರೆಗೂ ಜ್ಞಾನಯೋಗನಿಷ್ಠೆಯ ಹಿರಿಮೆಯನ್ನು ವರ್ಣಿಸಿದ್ದಾನೆ. ಅಷ್ಟೇ ಅಲ್ಲದೆ, 72ನೆಯ ಶ್ಲೋಕದಲ್ಲಿ ಈ ಜ್ಞಾನಯೋಗದಿಂದಲೇ ಸುಸ್ಥಿರವಾದ ಬ್ರಾಹ್ಮೀಸ್ಥಿತಿಯು ಲಭಿಸುವುದೆಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾನೆ.
ಭಗವಂತನು ಹೇಳಿದ್ದಾನೆಂದು ಥಟ್ಟನೆ ಕರ್ಮಯೋಗಮಾರ್ಗದಲ್ಲಿ ಧುಮುಕೋಣವೆಂದರೆ, ಅದು ಅಷ್ಟೊಂದು ಸುರಕ್ಷಿತವಾದ ಮಾರ್ಗವಾಗಿ ಕಾಣಿಸುತ್ತಿಲ್ಲ. ಏಕೆಂದರೆ, ಅದು ನೇರವಾಗಿ ಮೋಕ್ಷಪ್ರದವಲ್ಲವೇ ಅಲ್ಲ. ಅದು ಮೊದಲು ಜ್ಞಾನಯೋಗವಾಗಿ ಪರಿಣಮಿಸಬೇಕು. ಆ ಜ್ಞಾನಯೋಗವು ಕೂಡಾ ಸಂಪೂರ್ಣ ಇಂದ್ರಿಯಜಯಾದಿಗಳಿಂದ ಸುಸ್ಥಿರವಾಗಬೇಕು. ಅದೂ ಅಲ್ಲದೆ, ಕರ್ಮಯೋಗವು ಜ್ಞಾನಯೋಗವಾಗಿ ಪರಿಣಮಿಸಬೇಕಾದರೆ, ಲಾಭನಷ್ಟಗಳಂತಹ ದ್ವಂದ್ವಗಳೆಲ್ಲವನ್ನೂ ಜಯಿಸಬೇಕು. ಅದು ಅಷ್ಟು ಸುಲಭವಾದ ವಿಷಯವಲ್ಲ.
ಮೇಲಾಗಿ ಭಗವಂತನು ತನಗೆ ವಿಧಿಸುತ್ತಿರುವ ಕರ್ಮವು ಯುದ್ಧವೆಂಬ ಘೋರಕರ್ಮವಾಗಿದೆ. ಇದರಲ್ಲಿ ರಾಗದ್ವೇಷಗಳು, ಸುಖದುಃಖಗಳು ಎಂಬಂತಹವು ಇರಬಾರದೆಂದರೆ, ಬಹಳ ಕಷ್ಟ.
ಹಾಗಾಗಿ, ಕರ್ಮಯೋಗದಿಂದ ಜ್ಞಾನಯೋಗವನ್ನು ತಲುಪುವುದು, ಅದರಿಂದ ಮೋಕ್ಷವನ್ನು ಹೊಂದುವುದು, ಎಂಬುವು ಬಹಳ ಪ್ರಮಾದದಿಂದ ಕೂಡಿದ ಸೋಪಾನಗಳಾಗಿ ಕಾಣಿಸುತ್ತಿವೆ.
ತಾನೇನೋ, ನೇರವಾಗಿ ಮೋಕ್ಷಮಾರ್ಗವನ್ನು ಹೇಳೆಂದು ಕೇಳುತ್ತಿದ್ದರೆ, ಭಗವಂತನು ನೇರವಾಗಿ ಮೋಕ್ಷವನ್ನು ಕೊಡುವ ಜ್ಞಾನಮಾರ್ಗವನ್ನು ಪ್ರಶಂಸಿಸುತ್ತಲೇ, ತನ್ನನ್ನು ಮಾತ್ರ ಸಂಕಟಗಳಿಂದ ತುಂಬಿದ ಕರ್ಮಮಾರ್ಗದೊಳಗೇ ಹೋಗೆಂದು ಏಕೆ ಬಲವಂತಪಡಿಸುತ್ತಿರುವನೋ ಸರಿಯಾಗಿ ಅರ್ಥವಾಗದೆ, ಕರ್ಮಯೋಗ ಜ್ಞಾನಯೋಗಗಳ ವಿಷಯದಲ್ಲಿ ಭಗವಂತನ ಮಾತುಗಳು ಗಜಿಬಿಜಿಯಾಗಿ ಇವೆಯೆಂದು ಭಾವಿಸಿದ ಅರ್ಜುನನು, ತನ್ನ ಸಂದೇಹಗಳನ್ನು ನೇರವಾಗಿ, ಭಗವಂತನ ಮುಂದೆಯೇ ಇಡುತ್ತಿರುವನು. ಅದು ಕೂಡಾ ತಾನು ಸಖ್ಯಭಕ್ತಿಮಾರ್ಗದಲ್ಲಿ ಇರುವವನಾದ್ದರಿಂದ ಅಂದರೆ ಭಗವಂತನ ಜೊತೆಯಲ್ಲಿ ಚೆನ್ನಾಗಿ ಸಲಿಗೆ ಇರುವವನಾದ್ದರಿಂದ, ವಿನಯವನ್ನು ಬಿಡದೆಯೇ ಎರಡು ಶ್ಲೋಕಗಳಲ್ಲಿ ಸ್ವಲ್ಪ ಎತ್ತಿ ತೋರಿಸುತ್ತಾ, ತನ್ನ ಸಂದೇಹಗಳನ್ನು ವ್ಯಕ್ತಪಡಿಸುತ್ತಿದ್ದಾನೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ