ಶ್ರೀ ಮದ್ಭಗವದ್ಗೀತಾ : 52
72. ಏಷಾ ಬ್ರಾಹ್ಮೀಸ್ಥಿತಿಃ ಪಾರ್ಥ! ನೈನಾಂ ಪ್ರಾಪ್ಯ ವಿಮುಹ್ಯತಿ।
ಸ್ಥಿತ್ವಾಽಸ್ಯಾಮಂತಕಾಲೇಽಪಿ ಬ್ರಹ್ಮನಿರ್ವಾಣ ಮೃಚ್ಛತಿ॥
ಪಾರ್ಥ =ಎಲೈ ಅರ್ಜುನನೆ! ಏಷಾ = ಈಗ ನಾನು ನಿನಗೆ ಉಪದೇಶಿಸಿರುವುದೇ, ಬ್ರಾಹ್ಮೀ-ಸ್ಥಿತಿಃ = ಬ್ರಹ್ಮಮಯವಾದ ಅಸ್ತಿತ್ವವು. ಏನಾಂ = ಈ ಬ್ರಾಹ್ಮೀಸ್ಥಿತಿಯನ್ನು, ಪ್ರಾಪ್ಯ = ಹೊಂದಿದವನು, ನ-ವಿಮುಹ್ಯತಿ = ಅಜ್ಞಾನದಲ್ಲಿ ಬೀಳನು, ಅಂತಕಾಲೇ-ಅಪಿ = (ಕನಿಷ್ಠ) ಮರಣ ಸಮಯವು ಸಮೀಪಿಸಿದ ಸಮಯದಲ್ಲಾದರೂ, ಅಸ್ಯಾಂ = ಈ ಬ್ರಾಹ್ಮೀಸ್ಥಿತಿಯಲ್ಲಿ, ಸ್ಥಿತ್ವಾ = ಇದ್ದುಕೊಂಡು, ಬ್ರಹ್ಮನಿರ್ವಾಣಂ = ಬ್ರಹ್ಮಾನಂದವನ್ನು, ಋಚ್ಛತಿ = ಪಡೆಯುತ್ತಾನೆ.
ಅರ್ಜುನನೆ! ನಾನು ಈಗ ನಿನಗೆ ಉಪದೇಶಿಸಿದ ಸ್ಥಿತಪ್ರಜ್ಞಸ್ಥಿತಿಯೇ ಬ್ರಹ್ಮಮಯಸ್ಥಿತಿಯು. ಅಂದರೆ ಪರಬ್ರಹ್ಮಸ್ವರೂಪದಲ್ಲಿಯೇ ಇದ್ದುಬಿಡುವುದು. ಇಂತಹ ಸ್ಥಿತಿ ಒಂದು ಸಾರಿ ಎಟುಕಿದರೆ, ಇನ್ನು ಮತ್ತೆ ಅವನು ಹಿಂದಕ್ಕೆ ಹೋಗಿ ಅಜ್ಞಾನದಲ್ಲಿ ಬೀಳುವುದು ಇರುವುದಿಲ್ಲ. ಇಂತಹ ಸ್ಥಿತಿಯನ್ನು ವೃದ್ಧಾಪ್ಯದಲ್ಲಿ ಪಡೆದುಕೊಂಡರೂ ಸಾಕು. ಅಥವಾ ಮರಣಕ್ಕೆ ಸ್ವಲ್ಪ ಮುಂಚಿನ ಸಮಯದಲ್ಲಿ ಪಡೆದುಕೊಂಡರೂ ಸಾಕು. ಅವನಿಗೆ ಬ್ರಹ್ಮಾನಂದವು ಲಭಿಸಿಯೇ ತೀರುತ್ತದೆ. ಇನ್ನು ಬಾಲ್ಯದಿಂದಲೇ ಇಂತಹ ಸ್ಥಿತಿಯನ್ನು ಪಡೆದುಕೊಂಡವನ ಆನಂದಸ್ಥಿತಿಯ ಬಗ್ಗೆ ಬೇರೆ ಹೇಳಬೇಕೆ?
ಓಂ ತತ್ಸದಿತಿ, ಶ್ರೀಮದ್ಭಗವದ್ಗೀತಾಸು, ಉಪನಿಷತ್ಸು,
ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನ ಸಂವಾದೇ
ಸಾಂಖ್ಯಯೋಗೋನಾಮ ದ್ವಿತೀಯೋಽಧ್ಯಾಯಃ
ಸಾಂಖ್ಯಯೋಗವೆಂಬ ಹೆಸರಿನ
ಎರಡನೆಯ ಅಧ್ಯಾಯವು ಇಲ್ಲಿಗೆ ಮುಗಿಯಿತು.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ