ಶ್ರೀ ಮದ್ಭಗವದ್ಗೀತಾ : 51
70. ಆಪೂರ್ಯಮಾಣ ಮಚಲ ಪ್ರತಿಷ್ಠಂ
ಸಮುದ್ರಮಾಪಃ ಪ್ರವಿಶಂತಿ ಯದ್ವತ್।
ತದ್ವತ್ ಕಾಮಾ ಯಂ ಪ್ರವಿಶಂತಿ ಸರ್ವೇ
ಸ ಶಾಂತಿಮಾಪ್ನೋತಿ ನ ಕಾಮಕಾಮೀ॥
ಆಪೂರ್ಯಮಾಣಂ = ನದಿ ಪ್ರವಾಹಾದಿಗಳಿಂದ ತುಂಬಿಸಲ್ಪಡುತ್ತಿರುವುದು ಆಗಿದ್ದಾಗ್ಯೂ, ಅಚಲಪ್ರತಿಷ್ಠಂ = ಏರಿಳಿತಗಳು ಇಲ್ಲದೆ ಇರುವ ಸ್ವಭಾವವುಳ್ಳ, ಸಮುದ್ರಂ = ಸಮುದ್ರವನ್ನು, ಆಪಃ = ನದಿ ಜಲಗಳು, ಯದ್ವತ್ = ಯಾವ ವಿಧವಾಗಿ, ಪ್ರವಿಶಂತಿ = ಪ್ರವೇಶಿಸುತ್ತಿವೆಯೋ (ಅದರಲ್ಲಿ ಸೇರಿಬಿಡುತ್ತಿವೆಯೋ), ತದ್ವತ್ = ಹಾಗೆಯೇ, ಕಾಮಾಃ = ಕೋರಲ್ಪಡುವ ವಿಷಯಗಳು, ಸರ್ವೇ = ಎಲ್ಲವೂ, ಯಂ = ಯಾವ ಮಾನವನಲ್ಲಿ, ಪ್ರವಿಶಂತಿ = ಪ್ರವೇಶಿಸಿ ಲೀನವಾಗುತ್ತಿವೆಯೋ, ಸಃ = ಅಂತಹ ವ್ಯಕ್ತಿಯು, ಶಾಂತಿಂ = ಮೋಕ್ಷವನ್ನು, ಆಪ್ನೋತಿ = ಪಡೆಯುವನು. ಕಾಮಕಾಮೀ = ಆಯಾ ವಿಷಯಗಳನ್ನು ಕೋರುವವನು, ನ = ಪಡೆಯನು.
ಬಾವಿಗಳು, ಕೆರೆಗಳು ಮೊದಲಾದವು ಮಳೆಗಾಲದಲ್ಲಿ ತುಂಬಿರುತ್ತವೆ. ಬೇಸಿಗೆಯಲ್ಲಿ ಬತ್ತಿಹೋದಂತಾಗುತ್ತವೆ. ಈ ವಿಧವಾಗಿ ಅವುಗಳಲ್ಲಿ ಮಾರ್ಪಾಡು ಕಾಣಿಸುತ್ತಿರುತ್ತದೆ. ಮಹಾಸಮುದ್ರವು ಹಾಗಲ್ಲ. ಮಳೆಗಾಲದಲ್ಲಿ ನದಿಗಳು ಎಷ್ಟು ತುಂಬಿತುಳುಕಾಡಿದರೂ, ವರ್ಷಪಾತವು ಎಷ್ಟು ಹೆಚ್ಚಾದರೂ, ಆ ಸಮುದ್ರದ ಮಟ್ಟವು ಮೇಲೇರದು. ಬೇಸಿಗೆಯಲ್ಲಿ ನದಿಗಳು ಬತ್ತಿಹೋದರೂ, ಬಿಸಿಲಿಗೆ ನೀರು ಆವಿಯಾದರೂ ಆ ಸಮುದ್ರವು ಇಳಿಯುವುದಿಲ್ಲ. ಅಂದರೆ, ಅದರಲ್ಲಿ ಯಾವುದೇ ತರಹದ ಮಾರ್ಪಾಡೂ ಆಗದು. ಅಷ್ಟುಮಾತ್ರವಲ್ಲದೆ, ಸಮುದ್ರಕ್ಕೆ ಬಂದು ಸೇರುವ ನದಿಗಳೆಲ್ಲವೂ ಸಮುದ್ರದಲ್ಲಿ ಸೇರಿ ಸಮುದ್ರವೇ ಆಗಿಬಿಡುತ್ತವೆಯೇ ಹೊರತು, ಅವುಗಳಿಗೆ ಬೇರೆ ಅಸ್ತಿತ್ವವು ಇರದು. ಹಾಗೆಯೇ ಸ್ಥಿತಪ್ರಜ್ಞತ್ವವನ್ನು ಸಾಧಿಸಿದ ಮುನಿಯ ಸುತ್ತ ಎಷ್ಟೇ ಆಕರ್ಷಣೀಯವಾದ ವಿಷಯಗಳು ಬಂದು ಸೇರಿದರೂ, ಅವೆಲ್ಲವೂ ಆತನಲ್ಲಿ ಬೆರೆತುಹೋಗುತ್ತವೆಯೇ ಹೊರತು ಆತನಲ್ಲಿ ಸಂತೋಷ, ದುಃಖ ಮೊದಲಾದ ವಿಕಾರವನ್ನು ಉಂಟುಮಾಡಲಾರವು. ಅಂತಹ ಮುನಿಯು ಮಾತ್ರವೇ ಮೋಕ್ಷವನ್ನು ಪಡೆದುಕೊಳ್ಳಬಲ್ಲನು. ತನ್ನ ಹತ್ತಿರಕ್ಕೆ ಬಂದು ಸೇರಿದ ಆಕರ್ಷಣೀಯ ಪದಾರ್ಥಗಳನ್ನು ನೋಡಿ ಅವುಗಳನ್ನು ಕೋರಿಕೊಳ್ಳುವ ಸಾಧಕನು, ಎಷ್ಟು ಬಗೆಯ ಯೋಗಗಳನ್ನು ಮಾಡಿದರೂ, ಮೋಕ್ಷವನ್ನು ಪಡೆಯಲಾರನು.
71. ವಿಹಾಯ ಕಾಮಾನ್ ಯಸ್ಸರ್ವಾನ್ ಪುಮಾಂಶ್ಚರತಿ ನಿಸ್ಸ್ಪೃಹಃ।
ನಿರ್ಮಮೋ ನಿರಹಂಕಾರಃ ಸ ಶಾಂತಿ ಮಧಿಗಚ್ಛತಿ॥
ಯಃ-ಪುಮಾನ್ = ಯಾವ ಮಾನವನು, ಸರ್ವಾನ್ =ಎಲ್ಲ ವಿಧವಾದ, ಕಾಮಾನ್ = ಬಯಕೆಗಳನ್ನು, ವಿಹಾಯ = ಬಿಟ್ಟುಬಿಟ್ಟು, ನಿಸ್ಸ್ಪೃಹಃ = ಆಹಾರ ಸಂಪಾದನೆಗೋಸ್ಕರ ಪ್ರಯತ್ನವನ್ನು ಕೂಡ ತ್ಯಾಗಮಾಡಿ, ನಿರ್ಮಮಃ = ಯಾವ ಪದಾರ್ಥದ ಮೇಲೂ “ನಾನು ನನ್ನದು’ ಎಂಬ ಪಟ್ಟು ಇಲ್ಲದವನಾಗಿ, ನಿರಹಂಕಾರಃ = “ನಾನು ಜ್ಞಾನವಂತನು’ ಎಂಬ ಸ್ವಾಭಿಮಾನವು ಕೂಡ ಇಲ್ಲದವನಾಗಿ, ಚರತಿ = ಸಂಚರಿಸುತ್ತಾ ಇರುತ್ತಾನೋ, ಸಃ = ಅಂತಹ ಮಾನವನು, ಶಾಂತಿಂ = ಮೋಕ್ಷವನ್ನು, ಅಧಿಗಚ್ಛತಿ = ಪಡೆಯುತ್ತಾನೆ.
ಎಲೈ ಅರ್ಜುನನೆ! ಎಲ್ಲ ದುಃಖಗಳೂ ಅಡಗಿಹೋಗಿರುವ ದಶೆಯ ಹೆಸರೇ ಶಾಂತಿ. ಅದರ ಮತ್ತೊಂದು ಹೆಸರೇ “ಮೋಕ್ಷ’ ಅಥವಾ “ನಿರ್ವಾಣ’ ಅಥವಾ “ಬ್ರಹ್ಮಮಯತ್ವ’. ಇದು ಲಭಿಸಬೇಕಾದರೆ, ಸಾಧಕನು ಈ ಕೆಳಗಿನ ಅಂಶಗಳನ್ನು ಸಾಧಿಸಿಕೊಳ್ಳಬೇಕು.
ಆತನು ಮೊಟ್ಟಮೊದಲನೆಯದಾಗಿ, ತನ್ನ ಅಂತಶ್ಚೇತನದಲ್ಲಿ ಅಡಗಿರುವ ರಹಸ್ಯವಾದ ಕೋರಿಕೆಗಳನ್ನು ಕೂಡ ತೊಲಗಿಸಿಕೊಳ್ಳಬೇಕು.
ತನ್ನ ಆಹಾರ ಸಂಪಾದನೆಗೋಸ್ಕರ ಕೂಡ ಪ್ರತ್ಯೇಕವಾದ ಪ್ರಯತ್ನ ಮಾಡುವುದನ್ನು ತ್ಯಜಿಸಬೇಕು.
ಆತನು ತನ್ನ ದೇಹದ ಮೇಲೆ ಕೂಡ “ಇದು ನನ್ನದು’ ಎಂಬ ಪ್ರತ್ಯೇಕವಾದ ಅಭಿಮಾನವನ್ನು ಇಟ್ಟುಕೊಳ್ಳಬಾರದು. “ಈ ದೇಹವೇ ನಾನು’ ಎಂಬ ಭಾವನೆಯಂತು ಇರಲೇಬಾರದು. ಅಂದರೆ ಪ್ರಪಂಚದಲ್ಲಿನ ಯಾವ ಪದಾರ್ಥದ ಮೇಲೂ ಮಮತ್ವಬುದ್ಧಿಯನ್ನು ಇಟ್ಟುಕೊಳ್ಳಬಾರದು.
ಎಲ್ಲವನ್ನು ಬಿಟ್ಟಿದ್ದರೂ, ಉಳಿದವರೆಲ್ಲರೂ ಅಜ್ಞಾನದಲ್ಲಿ ಇರುವರೆಂದೂ, ತಾನು ಮಾತ್ರವೆ ಜ್ಞಾನದಲ್ಲಿ ಇದ್ದೇನೆಂದೂ, ಇಂತಹ ಬಗೆಬಗೆಯ ಅಹಂಕಾರಗಳು ಸಾಧಕನನ್ನು ಬೆನ್ನಟ್ಟುತ್ತಿರುತ್ತವೆ. ಆತನು ಅವುಗಳನ್ನು ಕೂಡಾ ಬಿಡಿಸಿಕೊಳ್ಳ ಬಲ್ಲವನಾಗಬೇಕು.
ಈ ಎಲ್ಲ ಅಂಶಗಳನ್ನು ಸಾಧಿಸಿಕೊಂಡವನಾದರೆ, ಆತನು ನೇರವಾಗಿ ಪರಬ್ರಹ್ಮನಲ್ಲಿ ಅಂದರೆ ಸತ್ಪದಾರ್ಥದೊಂದಿಗೆ ಏಕತ್ವವನ್ನು ಪಡೆದುಕೊಳ್ಳುವನು. ಈ ಏಕೀಭಾವಸ್ಥಿತಿಯ ಹೆಸರೇ ಮೋಕ್ಷ.
ಅವತಾರಿಕೆ:
ಇನ್ನು ಈ ಸ್ಥಿತಪ್ರಜ್ಞ ಸ್ಥಿತಿಯ ಹಿರಿಮೆಯನ್ನು ಮೆಚ್ಚಿಕೊಳ್ಳುತ್ತಾ, ಅದರ ಫಲಿತವನ್ನು ಕೂಡ ನಿರ್ದೇಶಿಸುತ್ತಾ ಭಗವಂತನು ತನ್ನ ಸೂತ್ರಪ್ರಾಯವಾದ ಉಪದೇಶವನ್ನು ಮುಗಿಸಲಿದ್ದಾನೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ