ಗೀತೆ – 50 : ಪರಮಾತ್ಮನ ದರ್ಶನ ಪಡೆದವನಿಗೆ ಕರ್ಮದಿಂದಲೂ ಏನೂ ಆಗಬೇಕಾಗಿಲ್ಲ

Gita
Spread the love

ಶ್ರೀ ಮದ್ಭಗವದ್ಗೀತಾ : 50

68.ತಸ್ಮಾದ್ಯಸ್ಯ ಮಹಾಬಾಹೋ! ನಿಗೃಹೀತಾನಿ ಸರ್ವಶಃ।
ಇಂದ್ರಿಯಾಣೀಂದ್ರಿಯಾರ್ಥೇಭ್ಯಃ ತಸ್ಯ ಪ್ರಜ್ಞಾ ಪ್ರತಿಷ್ಠಿತಾ॥

ಮಹಾಬಾಹೋ = ಎಲೈ ಮಹಾವೀರನೆ!, ತಸ್ಮಾತ್‌ = ಇಂದ್ರಿಯಗಳ ಯಥೇಚ್ಛ ಸಂಚಾರದಲ್ಲಿ ದೋಷವಿರುವುದರಿಂದ, ಯಸ್ಯ = ಯಾವ ಮುನಿಯ, ಇಂದ್ರಿಯಾಣಿ = ಸರ್ವೇಂದ್ರಿಯಗಳು, ಸರ್ವಶಃ = ಎಲ್ಲಾ ವಿಧದಲ್ಲಿಯೂ, ಇಂದ್ರಿಯಾರ್ಥೇಭ್ಯಃ = ತಮ್ಮ ತಮ್ಮ ಇಂದ್ರಿಯವಿಷಯಗಳಿಂದ, ನಿಗೃಹೀತಾನಿ = ಹಿಂದಕ್ಕೆ ಮರಳಿಸಲ್ಪಡುತ್ತವೆಯೋ, ತಸ್ಯ = ಅಂತಹ ಮುನಿಯ, ಪ್ರಜ್ಞಾ = ವಿವೇಕಜ್ಞಾನವು, ಪ್ರತಿಷ್ಠಿತಾ = ಸುಸ್ಥಿರವಾದದ್ದು ಆಗುತ್ತದೆ.

ಎಲ್ಲರನ್ನೂ ಜಯಿಸಬಲ್ಲ ಎಲೈ ಮಹಾವೀರನೆ! ಇಂದ್ರಿಯಗಳು ಇಷ್ಟಬಂದಂತೆ ಸಂಚರಿಸಿದರೆ, ಮಾನವನಿಗೆ ಎಂತಹ ಪ್ರಮಾದವು ಉಂಟಾಗುವುದೆಂದು ಹಿಂದೆಯೇ ವಿವರಿಸಿ ಹೇಳಿದ್ದೇನೆ. ಆದ್ದರಿಂದ ತತ್ತ್ವಮನನಶೀಲಿಯಾದ ಸಾಧಕನು ತನ್ನ ಇಂದ್ರಿಯಗಳಲ್ಲಿ ಪ್ರತಿಯೊಂದು ಇಂದ್ರಿಯವನ್ನೂ ಎಲ್ಲಾ ವಿಧದಲ್ಲೂ ನಿಗ್ರಹಿಸಿ, ಆಯಾ ಇಂದ್ರಿಯಗಳು ಆಯಾ ವಿಷಯಗಳ ಕಡೆಗೆ ಓಡದಂತೆ ಜಾಗರೂಕನಾಗಿ ಇರುವನಾದರೆ, ಆ ಸಾಧಕನು ಸ್ಥಿತಪ್ರಜ್ಞನಾಗುತ್ತಾನೆ.

69. ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ। ಯಸ್ಯಾಂ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತೋ ಮುನೇಃ॥

ಸರ್ವಭೂತಾನಾಂ = ಸಾಮಾನ್ಯ ಜೀವಿಗಳೆಲ್ಲರಿಗೂ, ಯಾ = ಯಾವ ಪರಮಾರ್ಥತತ್ತ್ವವು, ನಿಶಾ = ರಾತ್ರಿ ಸಮಯದಂತೆ ಏನೂ ಕಾಣಿಸದೇ ಇರುವುದೋ, ತಸ್ಯಾಂ = ಆ ಪರಮಾರ್ಥತತ್ತ್ವದ ವಿಷಯದಲ್ಲಿ, ಸಂಯಮೀ = ಇಂದ್ರಿಯನಿಗ್ರಹವುಳ್ಳ ಮುನಿಯು, ಜಾಗರ್ತಿ = ಜಾಗೃತನಾಗಿ ಇರುತ್ತಾನೆ. ಯಸ್ಯಾಂ = ಯಾವ ಲೌಕಿಕ ವ್ಯವಹಾರ ವಿಷಯದಲ್ಲಿ, ಭೂತಾನಿ = ಸಾಮಾನ್ಯ ಜೀವಿಗಳು, ಜಾಗ್ರತಿ = ಜಾಗ್ರತರಾಗಿ ಇರುವರೋ, ಸಾ = ಆ ಅಜ್ಞಾನಮಯವಾದ ಲೌಕಿಕ ವ್ಯವಹಾರದ ಅವಸ್ಥೆಯು, ಪಶ್ಯತಃ = ಪರಮಾರ್ಥತತ್ತ್ವವನ್ನು ಪ್ರತ್ಯಕ್ಷವಾಗಿ ದರ್ಶನಮಾಡುತ್ತಿರುವ, ಮುನೇಃ = ಮುನಿಗೆ, ನಿಶಾ = ರಾತ್ರಿ ಸಮಯದಂತೆ ಅಂಧಕಾರಮಯವಾಗಿ ಇರುತ್ತದೆ.

ಅರ್ಜುನನೆ! ಸ್ಥಿತಪ್ರಜ್ಞನ ಲಕ್ಷಣಗಳನ್ನು ಬಗೆಬಗೆಯಾಗಿ ಬಣ್ಣಿಸಿ ನಿನಗೆ ಹೇಳಿದ್ದೇನೆ. ಇದರಿಂದ ನೀನು ತಿಳಿದುಕೊಳ್ಳಬೇಕಾದ್ದು ಏನೆಂದರೆ, ಯಾವ ಪರಮಾರ್ಥತತ್ತ್ವವು ಜ್ಞಾನಯೋಗಸಿದ್ಧನಿಗೆ ಹಾಡುಹಗಲು ತುಂಬಿದ ಬೆಳಕಿನಲ್ಲಿರುವ ವಸ್ತುವಿನಂತೆ ಸ್ಪಷ್ಟವಾಗಿ, ಪ್ರತ್ಯಕ್ಷವಾಗಿ, ದರ್ಶನ ನೀಡುತ್ತಾ ಇರುತ್ತದೆಯೋ, ಅದೇ ತತ್ತ್ವವು ಸಾಮಾನ್ಯ ಜೀವಿಗಳಿಗೆ ಕಗ್ಗತ್ತಲಿನಲ್ಲಿರುವ ವಸ್ತುವಿನಂತೆ ಏನೂ ಕಾಣದೆ, ಅರ್ಥವಾಗದೆ ಇರುತ್ತದೆ. ಸಾಮಾನ್ಯ ಜೀವಿಗಳೆಲ್ಲರಿಗೂ ಪ್ರತ್ಯಕ್ಷವಾಗಿ, ಬಹಳ ಸ್ಪಷ್ಟವಾಗಿ, ಕಾಣಿಸುವ ರಾಗದ್ವೇಷಾದಿಗಳಿಂದ ತುಂಬಿದ ಅಜ್ಞಾನ ವ್ಯವಹಾರವು ಯಾವುದಾದರೆ ಇದೆಯೋ, ಅದು ಜ್ಞಾನಸಿದ್ಧನಾದ ಮುನಿಗೆ ಇರುವಿಕೆಯೇ ಇಲ್ಲದ ವಸ್ತುವಿನಂತೆ ಕಗ್ಗತ್ತಲಿನಲ್ಲಿನ ವಸ್ತುವಿನಂತೆ, ಸ್ವಲ್ಪವಾದರೂ ಕಾಣಿಸದೇ ಇರುತ್ತದೆ. ಜ್ಞಾನಯೋಗಸಿದ್ಧನಾದವನಿಗೂ, ಆಗದವನಿಗೂ ಮಧ್ಯೆ ಇಂತಹ ಭೇದವು ಇರುತ್ತದೆ. ಇದರಿಂದ ಜ್ಞಾನಯೋಗಸಿದ್ಧಿ ಇಲ್ಲದವನು ಮಾತ್ರವೇ ಅಜ್ಞಾನಮಯವಾದ ರಾಗದ್ವೇಷಾದಿ ವ್ಯವಹಾರಗಳ ಲಂಪಟದಲ್ಲಿ ಸಿಲುಕಿಕೊಳ್ಳುವನೆಂದೂ, ನಿಜವಾದ ಪರಮಾತ್ಮ ದರ್ಶನವನ್ನು ಪಡೆದವನಿಗೆ ಯಾವ ವ್ಯವಹಾರಗಳಿಂದಲೂ, ಕರ್ಮಗಳಿಂದಲೂ, ಆಗಬೇಕಾದ್ದು ಏನೂ ಇರುವುದಿಲ್ಲವೆಂದೂ ಅರ್ಥಮಾಡಿಕೋ.
ವಿವರಣೆ:
ಈ ಅಧ್ಯಾಯದ ಪ್ರಾರಂಭದಲ್ಲಿಯೇ ಅರ್ಜುನನು ತಾನು ಕರ್ಮಪರಿತ್ಯಾಗವನ್ನು ಮಾಡುವೆನೆಂದು ಭಗವಂತನಿಗೆ ಹೇಳಿದನು. ಅದಕ್ಕೆ ಭಗವಂತನು ಅಂಗೀಕರಿಸದೆ, ವಿಧವಿಧವಾದ ಹೇತುಗಳನ್ನು ತೋರಿಸಿ, ಕರ್ಮ ಮಾಡಲೇಬೇಕು ಎಂದು ಹೇಳಿದನು. ಆಮೇಲೆ ಭಗವಂತನು ಜ್ಞಾನಮಾರ್ಗವನ್ನು, ಕರ್ಮಯೋಗಮಾರ್ಗವನ್ನು ಕೂಡ ವಿಂಗಡಿಸಿ ತೋರಿಸಿ 47 ನೆಯ ಶ್ಲೋಕದಲ್ಲಿ ಅರ್ಜುನನಿಗೆ ಮಾತ್ರ ಜ್ಞಾನಯೋಗದ ಅರ್ಹತೆ ಇಲ್ಲವೆಂದು, ಕರ್ಮಯೋಗದ ಅರ್ಹತೆ ಮಾತ್ರವೇ ಇದೆ ಎಂದು ಕಡ್ಡಾಯವಾಗಿ ಹೇಳಿದನು. ಆಮೇಲೆ 52, 53ನೆಯ ಶ್ಲೋಕಗಳಲ್ಲಿ “”ಕರ್ಮಯೋಗವೇ ಸಾಧಕನನ್ನು ಜ್ಞಾನಯೋಗಕ್ಕೆ ತೆಗೆದುಕೊಂಡು ಹೋಗುತ್ತದೆ” ಎಂದು ಕೂಡ ಹೇಳಿದನು. ಇದರಿಂದ “”ಭಗವಂತನಿಗೆ ಜ್ಞಾನಯೋಗದ ಮೇಲೆಯೇ ಹೆಚ್ಚು ಗೌರವವಿರುವ ಹಾಗೆ ಕಾಣಿಸುತ್ತಿದೆ” ಎಂದು ಭಾವಿಸಿದ ಅರ್ಜುನನು, “”ಜ್ಞಾನಯೋಗಸಿದ್ಧನಾದ ಸ್ಥಿತಪ್ರಜ್ಞನ ಲಕ್ಷಣಗಳು ಹೇಗೆ ಇರುತ್ತವೆ?” ಎಂದು 54ನೆಯ ಶ್ಲೋಕದಲ್ಲಿ ಪ್ರಶ್ನಿಸಿದನು. ಅದಕ್ಕೆ ಸಮಾಧಾನವಾಗಿ ಭಗವಂತನು ಇಲ್ಲಿಯವರೆಗೆ ಆರು ತರಹದ ಸ್ಥಿತಪ್ರಜ್ಞಲಕ್ಷಣಗಳನ್ನು ಅರ್ಜುನನಿಗೆ ಬೋಧಿಸಿದನು. ಇನ್ನು ಇದರಿಂದ ಕರ್ಮಮಾರ್ಗ ಜ್ಞಾನಮಾರ್ಗಗಳ ಸಾರವನ್ನು ಸೂತ್ರಪ್ರಾಯವಾಗಿ ಹೇಳುವುದು ಪೂರ್ತಿ ಆಯಿತು ಎಂದು ಭಾವಿಸಿದ ಭಗವಂತನು, ಇನ್ನು ನಾಲ್ಕು ಶ್ಲೋಕಗಳಲ್ಲಿ ತನ್ನ ಉಪದೇಶವನ್ನು ಮುಗಿಸಬೇಕೆಂದುಕೊಂಡು, ಆ ಮುಕ್ತಾಯಕ್ಕೆ ಪೂರ್ವರಂಗವಾಗಿ ಜ್ಞಾನಸಿದ್ಧನಾದವನಿಗೂ, ಆಗದವನಿಗೂ, ಇರುವ ತಾರತಮ್ಯವನ್ನು ಸ್ವಲ್ಪ ಕವಿತಾಮಯವಾಗಿಯೂ, ಸ್ವಲ್ಪ ಒಗಟಿನ ಕಥೆಯಂತೆಯೂ, ಕೊಂಚ ಸಂಕೇತಾತ್ಮಕವಾಗಿಯೂ ಈ ಶ್ಲೋಕದಲ್ಲಿ ಉಪದೇಶಿಸಿದ್ದಾನೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ