ಶ್ರೀ ಮದ್ಭಗವದ್ಗೀತಾ : 49
66. ನಾಸ್ತಿ ಬುದ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ।
ನ ಚಾಭಾವಯತ ಶ್ಶಾಂತಿಃ ಅಶಾಂತಸ್ಯ ಕುತ ಸ್ಸುಖಮ್?॥
ಅಯುಕ್ತಸ್ಯ = (ಚಿತ್ತ) ಏಕಾಗ್ರತೆ ಇಲ್ಲದವನಿಗೆ, ಬುದ್ಧಿಃ = ಪರಮಾತ್ಮನನ್ನು ಕುರಿತ ವಿವೇಕಜ್ಞಾನವು, ನ-ಅಸ್ತಿ = ಉಂಟಾಗದು. ಅಯುಕ್ತಸ್ಯ = ಏಕಾಗ್ರತೆ ಇಲ್ಲದವನಿಗೆ, ಭಾವನಾ-ಚ = ಪರಮಾತ್ಮಜ್ಞಾನದ ಮೇಲೆ ಆಸಕ್ತಿಯು ಕೂಡ, ನ = ಇರುವುದಿಲ್ಲ. ಚ = ಮತ್ತು, ಅಭಾವಯತಃ = ಪರಮಾತ್ಮ ತತ್ತ್ವವನ್ನು ಆಸಕ್ತಿಯಿಂದ ಚಿಂತನೆ ಮಾಡದವನಿಗೆ, ಶಾಂತಿಃ = ಮಾನಸಿಕವಾದ ಉಪಶಾಂತಿಯು, ನ = ಇರುವುದಿಲ್ಲ. ಅಶಾಂತಸ್ಯ = ಮಾನಸಿಕ ತರಂಗಗಳು ಉಪಶಮನವಾಗದವನಿಗೆ, ಸುಖಂ = ಸುಸ್ಥಿರವಾದ ಸುಖವು, ಕುತಃ = ಎಲ್ಲಿಂದ ಬರುವುದು?
ಅರ್ಜುನನೆ! ಮಾನಸಿಕವಾದ ಪ್ರಶಾಂತಿಯಿಂದ ಮಾನವನಿಗೆ ಜನ್ಮಸಾರ್ಥಕತ್ವವು ಉಂಟಾಗುವುದೆಂದು ಹೇಳಿದೆನಲ್ಲವೆ! ಏಕೆ ಹಾಗೆ ಹೇಳಿದೆನೆಂದರೆ, ಮನುಷ್ಯನು ಕೋರಿಕೊಳ್ಳುವ ಶಾಶ್ವತಸುಖವು ಸಿಗಬೇಕಾದರೆ, ಆತನು ಮೂರು ಸೋಪಾನಗಳನ್ನು ಏರಲೇಬೇಕು – –
1. ಶಾಶ್ವತಸುಖವು ಬೇಕಾದರೆ, ಮಾನಸಿಕ ಶಾಂತಿಯನ್ನು ಸಂಪಾದಿಸಬೇಕು.
2. ಮಾನಸಿಕ ಶಾಂತಿ ಬೇಕಾದರೆ, ಪರಮಾತ್ಮತತ್ತ್ವ ಭಾವನೆಯನ್ನು ಮಾಡಲೇಬೇಕು.
3.ಪರಮಾತ್ಮತತ್ತ್ವಭಾವನೆಯು ಬೇಕೆಂದರೆ, ಚಿತ್ತವನ್ನು
ಏಕಾಗ್ರಗೊಳಿಸಬೇಕು.
ಈ ಏಕಾಗ್ರತೆಯೇ ಪರಮಾತ್ಮನನ್ನು ಕುರಿತ ವಿವೇಕಜ್ಞಾನವನ್ನು ಕೂಡ ಉಂಟುಮಾಡುತ್ತದೆ.
ಹಾಗಾಗಿ, ನಾನು ಬಣ್ಣಿಸಿದ ಈ ಸೋಪಾನದಲ್ಲಿ ಮೊದಲನೆಯ ಮೆಟ್ಟಿಲು ಏಕಾಗ್ರತೆ. ಎರಡನೆಯ ಮೆಟ್ಟಿಲು ಪರಮಾತ್ಮ ಚಿಂತನೆ. ಮೂರನೆಯ ಮೆಟ್ಟಿಲು ಮಾನಸಿಕ ತರಂಗಗಳ ಉಪಶಮನ. ಈ ಮೆಟ್ಟಿಲುಗಳನ್ನು ಹತ್ತಿದರೆ ಸಿಗುವ ಮಹಡಿಯ ಹೆಸರೇ ಶಾಶ್ವತಸುಖವು. ಆದ್ದರಿಂದ ಈ ಮೆಟ್ಟಿಲುಗಳನ್ನು ಹತ್ತದವನಿಗೆ ಶಾಶ್ವತಸುಖವು ಬರಬೇಕೆಂದರೆ ಎಲ್ಲಿಂದ ಬರುತ್ತದೆ?
67.ಇಂದ್ರಿಯಾಣಾಂ ಹಿ ಚರತಾಂ ಯನ್ಮನೋಽನುವಿಧೀಯತೇ।
ತದಸ್ಯ ಹರತಿ ಪ್ರಜ್ಞಾಂ ವಾಯುರ್ನಾವ ಮಿವಾಂಭಸಿ॥
ಹಿ = ಏಕೆ ಆತ್ಮಜ್ಞಾನವು ಇರದೆಂದರೆ, ಚರತಾಂ = ತಮ್ಮ ತಮ್ಮ ವಿಷಯಗಳ ಹಿಂದೆ ಓಡುತ್ತಿರುವ, ಇಂದ್ರಿಯಾಣಾಂ = ಇಂದ್ರಿಯಗಳಲ್ಲಿ, ಯತ್ = ಯಾವ ಇಂದ್ರಿಯವನ್ನು, ಮನಃ = ಮನಸ್ಸು, ಅನುವಿಧೀಯತೇ = ಅನುಸರಿಸಿ ಪ್ರವರ್ತಿಸುತ್ತದೆಯೋ, ತತ್ = ಆ ಇಂದ್ರಿಯವು, ಅಸ್ಯ = ಈ ಸಾಧಕನ, ಪ್ರಜ್ಞಾಂ = ಆತ್ಮವಿಷಯವಾದ ಜ್ಞಾನವನ್ನು, ಅಂಭಸಿ = ನೀರಿನ ಮಧ್ಯದಲ್ಲಿರುವ, ನಾವಂ = ಹಡಗನ್ನು, ವಾಯುಃ ಇವ = ಗಾಳಿಯಂತೆ, ಹರತಿ = ಪಕ್ಕಕ್ಕೆ ಎಳೆದು ಬಿಡುತ್ತದೆ.
ಇಂದ್ರಿಯಗಳನ್ನು ನಿಗ್ರಹಿಸಿ ಆತ್ಮಜ್ಞಾನವನ್ನು ಸಂಪಾದಿಸಬೇಕೆಂದು ಸಾಧಕನು ಪ್ರಯತ್ನಿಸುತ್ತಿರುವಾಗ, ಮಧ್ಯದಲ್ಲಿ ಎಲ್ಲಿಯೋ ಚಿಕ್ಕ ತಪ್ಪು ನಡೆದು ಹೋಗಿ, ಒಂದು ಇಂದ್ರಿಯವು ಆತನ ಹಿಡಿತದಿಂದ ಜಾರಿಹೋಗುತ್ತದೆ. ಅಂದರೆ, ಆತನ ಮನಸ್ಸು ಆ ಇಂದ್ರಿಯದ ಹಿಂದೆಯೇ ಓಡುತ್ತದೆ. ಹಾಗೆ ಆದರೆ, ಒಂದು ಇಂದ್ರಿಯವಾದರೂ ಸಾಕು, ಆ ಸಾಧಕನ ಸಾಧನೆಯನ್ನೆಲ್ಲಾ ಹಾಳುಮಾಡಿ, ಆತನನ್ನು ಪಕ್ಕದಾರಿಗೆ ಮರಳಿಸಿ, ಆತನ ವಿವೇಕಜ್ಞಾನವನ್ನು ಕಿತ್ತೊಗೆಯಬಲ್ಲದ್ದಾಗುತ್ತದೆ. ಇದಕ್ಕೆ ಉದಾಹರಣೆ, ಸಮುದ್ರದ ಮಧ್ಯದಲ್ಲಿ ಪ್ರಯಾಣಮಾಡುತ್ತಿರುವ ಹಡಗು. ಆ ಹಡಗು ಬಿರುಗಾಳಿಗೆ
ಸಿಲುಕಿಕೊಂಡಾಗ, ಅದರ ಚುಕ್ಕಾಣಿಯು ಸ್ವಲ್ಪ ತಪ್ಪಿಹೋದರೂ ಸರಿಯೆ, ಆ ಹಡಗು ಪೂರ್ತಿಯಾಗಿ ಎಲ್ಲೋ ಕೊಚ್ಚಿಕೊಂಡು ಹೋಗಿ ಬಿಡುತ್ತದೆ. ಇಂದ್ರಿಯಗಳ ಬಲವು ಕೂಡ ಅಂತಹದ್ದೇ ಆಗಿದೆ. ಅದಕ್ಕಾಗಿಯೇ ಇಂದ್ರಿಯನಿಗ್ರಹವು ಬಹಳ ಮುಖ್ಯ.
ಅವತಾರಿಕೆ:
62ನೆಯ ಶ್ಲೋಕದಿಂದ ಪ್ರಾರಂಭಿಸಿದ ಸ್ಥಿತಪ್ರಜ್ಞತ್ವ ನಿರ್ವಚನವನ್ನು ಭಗವಂತನು ಈ ಮುಂದಿನ ಶ್ಲೋಕದಲ್ಲಿ ಸಮಾಪ್ತಿಮಾಡುತ್ತಿದ್ದಾನೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ