ಶ್ರೀಮದ್ಭಗವದ್ಗೀತಾ : 48
64. ರಾಗದ್ವೇಷ ವಿಯುಕ್ತೈಸ್ತು ವಿಷಯಾನಿಂದ್ರಿಯೈಶ್ಚರನ್।
ಆತ್ಮವಶ್ಯೈರ್ವಿಧೇಯಾತ್ಮಾ ಪ್ರಸಾದ ಮಧಿಗಚ್ಛತಿ॥
ತು = ಮೇಲೆ ಹೇಳಿದ್ದಕ್ಕೆ ಭಿನ್ನವಾಗಿ, ರಾಗದ್ವೇಷವಿಯುಕ್ತೈಃ = ಕೋರಿಕೆಯಾಗಲೀ, ಜಿಗುಪ್ಸೆಯಾಗಲೀ ಇಲ್ಲದ್ದು, ಆತ್ಮವಶ್ಯೈಃ = ತನ್ನ ವಶದಲ್ಲಿ ಇರುವಂತಹುದೂ ಆದ, ಇಂದ್ರಿಯೈಃ = ಇಂದ್ರಿಯಗಳಿಂದ, ವಿಷಯಾನ್ = ಆಯಾ ಇಂದ್ರಿಯ ವಿಷಯಗಳನ್ನು, ಚರನ್ = ಅನುಭವಿಸುತ್ತಿರುವ, ವಿಧೇಯಾತ್ಮಾ = ತನಗೆ ಸ್ವಾಧೀನವಾದ ಮನಸ್ಸುಳ್ಳ ವ್ಯಕ್ತಿಯು, ಪ್ರಸಾದಂ = ಮಾನಸಿಕ ನಿರ್ಮಲತ್ವವನ್ನು, ಅಧಿಗಚ್ಛತಿ = ಪಡೆದುಕೊಳ್ಳುವನು.
ಅರ್ಜುನನೆ! ಇಂದ್ರಿಯಗಳು ಪತನವನ್ನು ಉಂಟುಮಾಡುವ ಪ್ರಕ್ರಿಯೆ ಯಾವುದೋ ಅರ್ಥವಾಯಿತಲ್ಲವೆ! ಅವೇ ಇಂದ್ರಿಯಗಳಿಂದ ಪರಮ ಪ್ರಶಾಂತಿಯನ್ನು ಪಡೆದುಕೊಳ್ಳುವ ಉಪಾಯವನ್ನು ಹೇಳುತ್ತೇನೆ, ಕೇಳು. ಸಾಮಾನ್ಯವಾಗಿ ಇಂದ್ರಿಯಗಳೆಲ್ಲವೂ ರಾಗದ್ವೇಷಗಳಿಂದಲೇ ಪ್ರವರ್ತಿಸುತ್ತಾ ಇರುತ್ತವೆ. ಸಾಧಕನು ಈ ವಿಷಯವನ್ನು ಗುರುತಿಸಿ, ಇಂದ್ರಿಯಗಳಿಗೆ ಆಯಾ ವಿಷಯಗಳಲ್ಲಿರುವ ರಾಗದ್ವೇಷಗಳನ್ನು ತನ್ನ ಮನೋಬಲದಿಂದ ತೊಲಗಿಸಿ, ಆ ಇಂದ್ರಿಯಗಳನ್ನು ತನ್ನ ವಶಕ್ಕೆ ತಂದುಕೊಳ್ಳಬೇಕು. ಹಾಗೆ ತನ್ನ ವಶಕ್ಕೆ ಬಂದ ಇಂದ್ರಿಯಗಳಿಂದ ಆಯಾ ವಿಷಯಗಳನ್ನು ಅನುಭವಿಸುತ್ತಿರುವಾಗ ಆತನ ಮನಸ್ಸು ಮಾತ್ರ ಹಿಡಿತ ತಪ್ಪಿ, ರಾಗದ್ವೇಷಗಳಲ್ಲಿ ಬಿದ್ದುಬಿಡುವ ಅವಕಾಶವು ಇರುತ್ತದೆ. ಅದನ್ನು ಕೂಡ ಗುರುತಿಸಿ ವಿಷಯಾನುಭವದ ಸಮಯದಲ್ಲಿ ಕೂಡ ತನ್ನ ಮನಸ್ಸು ತಾನು ಕೋರಿದ ಹಾಗೆ ತನ್ನ ನಿಯಂತ್ರಣದಲ್ಲಿ ಇರುವ ಹಾಗೆ ಹಿಡಿತವನ್ನು ಸಾಧಿಸಬೇಕು. ಅಂತಹ ಹಿಡಿತ ಸಾಧಿಸಿದ ಮನುಷ್ಯನಿಗೆ ಮಾನಸಿಕವಾದ ನಿರ್ಮಲತ್ವವು ಸಿದ್ಧಿಸುತ್ತದೆ.
65. ಪ್ರಸಾದೇ ಸರ್ವದುಃಖಾನಾಂ ಹಾನಿರಸ್ಯೋಪ ಜಾಯತೇ।
ಪ್ರಸನ್ನ ಚೇತಸೋ ಹ್ಯಾಶು ಬುದ್ಧಿಃ ಪರ್ಯವತಿಷ್ಠತೇ॥
ಪ್ರಸಾದೇ = ಮಾನಸಿಕ ನಿರ್ಮಲತ್ವವು ಸಿದ್ಧಿಸಿದಾಗ, ಅಸ್ಯ = ಇಂತಹ ಮುನಿಗೆ, ಸರ್ವದುಃಖಾನಾಂ = ಮೂರು ವಿಧವಾದ ದುಃಖಗಳ, ಹಾನಿಃ = ಉಪಶಮನವು, ಉಪಜಾಯತೇ = ಉಂಟಾಗುತ್ತದೆ. ಹಿ = ಏಕೆಂದರೆ, ಪ್ರಸನ್ನಚೇತಸಃ = ನಿರ್ಮಲವಾದ ಮನಸ್ಸು ಉಳ್ಳವನಿಗೆ, ಬುದ್ಧಿಃ = ಪ್ರಜ್ಞೆಯು (ವಿವೇಕಜ್ಞಾನವು), ಆಶು = ಬೇಗನೆ, ಪರ್ಯವತಿಷ್ಠತೇ= ಸ್ವಾತ್ಮಸ್ವರೂಪದಲ್ಲಿ ಸುಸ್ಥಿರವಾಗಿ ನಿಂತುಬಿಡುತ್ತದೆ.
ಅರ್ಜುನನೆ! ಹಿಂದಿನ ಮೂರು ಶ್ಲೋಕಗಳಲ್ಲಿ ಹೇಳಿದ ಹಾಗೆ ಮಾನಸಿಕ ಪ್ರಸನ್ನತೆಯನ್ನು ಸಾಧಿಸಿದ ಮುನಿಗೆ ಆಧ್ಯಾತ್ಮಿಕ, ಆಧಿಭೌತಿಕ ಆಧಿದೈವಿಕಗಳು ಎಂದು ಹೇಳಲ್ಪಡುವ ಸರ್ವವಿಧ ದುಃಖಗಳೂ ಉಪಶಮಿಸಿ ಹೋಗುತ್ತವೆ. ಏಕೆ ಹೀಗೆ ಆಗುತ್ತವೆಂದರೆ, ಮನಸ್ಸು ನಿರ್ಮಲವಾದ ಸಮಯಕ್ಕೆ, ಆ ಮನಸ್ಸಿನಲ್ಲಿರುವ ಪ್ರಜ್ಞೆಯು (ವಿವೇಕಜ್ಞಾನವು), ಬೇಗನೆ ತನಗೆ ಅಧಿಷ್ಠಾನಭೂತವಾದ ಸ್ವಸ್ವರೂಪವಾಗಿ (ಸತ್ಪಾರ್ಥವಾಗಿ) ಬದಲಾಗಿ, ಹಾಗೆಯೇ ಸ್ಥಿರವಾಗಿ ಬಿಡುತ್ತದೆ. ಇದನ್ನೇ ಸ್ವಸ್ವರೂಪಸ್ಥಿತಿ ಎನ್ನುತ್ತಾರೆ. ಜೀವಿಯ ಸ್ವಸ್ವರೂಪವಾದ ಸತ್ಪದಾರ್ಥವು ದುಃಖಗಳಿಗೆ ಅತೀತವಾದದ್ದು, ಮತ್ತು ಆನಂದಾತ್ಮಕವಾದದ್ದು. ಆದ್ದರಿಂದ ಆ ಜೀವಿಯು ದುಃಖಾತೀತನೂ, ಆನಂದಸ್ವರೂಪನೂ ಆಗಿಬಿಡುತ್ತಾನೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ