ಶ್ರೀ ಮದ್ಭಗವದ್ಗೀತಾ : 47
62. ಧ್ಯಾಯತೋ ವಿಷಯಾನ್ ಪುಂಸಃ
ಸಂಗಸ್ತೇಷೂಪಜಾಯತೇ।
ಸಂಗಾತ್ ಸಂಜಾಯತೇ ಕಾಮಃ
ಕಾಮಾತ್ ಕ್ರೋಧೋಽಭಿಜಾಯತೇ॥
63. ಕ್ರೋಧಾದ್ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ। ಸ್ಮೃತಿಭ್ರಂಶಾದ್ಬುದ್ಧಿನಾಶಃ ಬುದ್ಧಿನಾಶಾತ್ ಪ್ರಣಶ್ಯತಿ॥
ವಿಷಯಾನ್ = ಆಯಾ ವಿಷಯಗಳನ್ನು ಕುರಿತು, ಧ್ಯಾಯತಃ = ಆಲೋಚನೆ ಮಾಡುತ್ತಿರುವ, ಪುಂಸಃ = ಮಾನವನಿಗೆ, ತೇಷು = ಆ ವಿಷಯಗಳ ಮೇಲೆ, ಸಂಗಃ = ಆಸಕ್ತಿಯು, ಉಪಜಾಯತೇ = ಹುಟ್ಟುತ್ತದೆ. ಸಂಗಾತ್ = ಆ ಆಸಕ್ತಿಯಿಂದ, ಕಾಮಃ = ಇದು ನನಗೆ ಬೇಕೆಂಬ ಕೋರಿಕೆ, ಸಂಜಾಯತೇ = ಉಂಟಾಗುತ್ತದೆ. ಕಾಮಾತ್ = ಅಂತಹ ಕೋರಿಕೆಯಿಂದ, ಕ್ರೋಧಃ = ಕೋಪವು, ಅಭಿಜಾಯತೇ = ಹೆಚ್ಚುತ್ತದೆ. ಕ್ರೋಧಾತ್ = ಆ ಕೋಪದಿಂದ, ಸಮ್ಮೋಹಃ = ಕರ್ತವ್ಯ-ಅಕರ್ತವ್ಯಗಳ ವಿಷಯದಲ್ಲಿ ಅವಿವೇಕವು, ಭವತಿ = ಉಂಟಾಗುತ್ತದೆ. ಸಮ್ಮೋಹಾತ್ = ಆ ಅವಿವೇಕದಿಂದ, ಸ್ಮೃತಿವಿಭ್ರಮಃ = ಗೊತ್ತಿರುವ ಒಳ್ಳೆಯ ವಿಷಯಗಳನ್ನು ಮರೆತುಹೋಗುವುದು (ಭವತಿ = ಉಂಟಾಗುತ್ತದೆ). ಸ್ಮೃತಿಭ್ರಂಶಾತ್ = ಅಂತಹ ಮರೆವಿನಿಂದ, ಬುದ್ಧಿನಾಶಃ = ವಿವೇಕಬುದ್ಧಿಯ ನಾಶವು ಸಂಭವಿಸುತ್ತದೆ. ಬುದ್ಧಿನಾಶಾತ್ = ಅಂತಹ ವಿವೇಕ ವಿನಾಶದಿಂದ , ಪ್ರಣಶ್ಯತಿ = ಮಾನವನಲ್ಲಿ ಮಾನವತ್ವವೇ ನಶಿಸಿಹೋಗುತ್ತದೆ.
ಅರ್ಜುನನೆ! ಇಂದ್ರಿಯಗಳು ಮಾನವನಿಗೆ ಹೇಗೆ ಪತನವನ್ನು ಉಂಟುಮಾಡುತ್ತವೆಯೋ ವಿವರಿಸುವೆನು ಕೇಳು. ಮಾನವನು ಆಯಾ ಬಾಹ್ಯೇಂದ್ರಿಯಗಳಿಂದ ಆಯಾ ವಿಷಯಗಳನ್ನು, ಅಂದರೆ, ರೂಪಗಳು, ಶಬ್ದಗಳು, ಮೊದಲಾದವುಗಳನ್ನು ತನ್ನ ಮನಸ್ಸಿನೊಳಗೆ ಗ್ರಹಿಸುತ್ತಾನೆ. ಹಾಗೆ ಗ್ರಹಿಸಿದ ವಿಷಯಗಳನ್ನು ಕುರಿತು ಆ ಮನಸ್ಸು ಮತ್ತೆಮತ್ತೆ ಆಲೋಚಿಸುವುದಕ್ಕೆ ಪ್ರಾರಂಭಿಸುತ್ತದೆ. ಹಾಗೆ ಆಲೋಚಿಸಿದಷ್ಟೂ, ಅವುಗಳಲ್ಲಿ ತನಗೆ ಇಷ್ಟವಾದವುಗಳ ಮೇಲೆ ಆಸಕ್ತಿಯು ಉಂಟಾಗುವುದಕ್ಕೆ ಪ್ರಾರಂಭವಾಗುತ್ತದೆ. ಈ ಆಸಕ್ತಿಯು ಹೆಚ್ಚಾದಷ್ಟೂ “”ಈ ಪದಾರ್ಥವು ನನಗೆ ಬೇಕು” ಎಂಬ ಆಸೆಯನ್ನು ಚಿಗುರಿಸುತ್ತದೆ. ಈ ಆಸೆಯಿಂದ ಆ ವ್ಯಕ್ತಿಯು ಅದನ್ನು ಸಂಪಾದಿಸುವ ಪ್ರಯತ್ನವನ್ನು ಪ್ರಾರಂಭಿಸುತ್ತಾನೆ. ಆ ಪ್ರಯತ್ನಕ್ಕೆ ಯಾರಾದರೂ ಅಡ್ಡಬಂದರೆ ಅವರ ಮೇಲೆ ಕೋಪವು ಹೊತ್ತಿ ಉರಿಯುತ್ತದೆ. ಒಂದೊಂದು ಸಲ ತನ್ನ ಮನಸ್ಸು ಗ್ರಹಿಸಿದ ವಿಷಯಗಳಲ್ಲಿ ಕೆಲವು ತನಗೆ ಹಿಡಿಸವು. ಹಾಗೆ ಹಿಡಿಸದವುಗಳು ತನ್ನ ಮೇಲೆ ಬಂದು ಬಿದ್ದಾಗ ಕೂಡ ಕೋಪವು ಉಂಟಾಗುತ್ತಿರುತ್ತದೆ. ಈ ಕೋಪವು ವಿಪರೀತವಾದಾಗ ಆ ವ್ಯಕ್ತಿಗಿರುವ ವಿವೇಕಜ್ಞಾನವು ನೆಲಸಮವಾಗಿ ಬಿಡುತ್ತವೆ. ಅದರಿಂದ ಅದಕ್ಕೆ ಮುಂಚೆ ತಾನು ಕೇಳಿದ ಒಳ್ಳೆಯ ವಿಷಯಗಳೆಲ್ಲವೂ ಮರೆತುಹೋಗಿ ಬಿಡುತ್ತವೆ. ಒಳ್ಳೆಯ ವಿಷಯಗಳು ಮನಸ್ಸಿನಿಂದ ಅಳಿಸಿಹೋದಾಗ, ತನಗೆ ಯಾವುದು ಕರ್ತವ್ಯವೋ, ಯಾವುದು ಅಕರ್ತವ್ಯವೋ ತಿಳಿದುಕೊಳ್ಳುವ ವಿವೇಕವು ಹೊರಟುಹೋಗಿಬಿಡುತ್ತದೆ. ಅದು ಹೋದರೆ ಮಾನವನಲ್ಲಿ ಮಾನವತ್ವವೇ ಹೋಗಿಬಿಡುತ್ತದೆ. ಅಂದರೆ ಮಾನವನಲ್ಲಿ ಯಾವ ಗುಣವು ಇರುವುದರಿಂದ ಆತನು ಪಶುಪಕ್ಷ್ಯಾದಿಗಳಿಗಿಂತ ಭಿನ್ನನಾಗಿ, ಉತ್ತಮ ಪುರುಷಾರ್ಥಗಳನ್ನು ।ಸಾಧಿಸಬಲ್ಲವನಾಗುತ್ತಾನೆಯೋ, ಅಂತಹ ಸಾಧನೆಗೆ ಅನರ್ಹನಾಗಿ ಬಿಡುತ್ತಾನೆ. ಅದೇ ಮಾನವನ ನಿಜವಾದ ನಾಶವು.
ಅವತಾರಿಕೆ:
ಇಂದ್ರಿಯಗಳು ಉಂಟುಮಾಡುವ ಪತನ ಪ್ರಕ್ರಿಯೆಗೆ ಮೂಲಬೀಜವಾವುದೋ ಅದನ್ನು ವಿವರಿಸಿಯಾಗಿದೆ. ಇನ್ನು ಇದನ್ನು ಜಯಿಸುವ ಮಾರ್ಗವನ್ನು ಹೇಳಬೇಕಿದೆ. ಅದನ್ನು ಕೂಡ ಭಗವಂತನು ಯುಕ್ತಿ ವಿಶ್ಲೇಷಣಾ ಪೂರ್ವಕವಾಗಿಯೇ ಹೇಳಲಿದ್ದಾನೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ