ಗೀತೆ – 46 : ಸ್ಥಿತಪ್ರಜ್ಞವು ಬೇಕೆನ್ನುವವನು ಇಂದ್ರೀಯಗಳನ್ನು ವಶದಲ್ಲಿಟ್ಟುಕೊಳ್ಳಬೇಕು

Gitacharya
Spread the love

ಶ್ರೀ ಮದ್ಭಗವದ್ಗೀತಾ : 46

61. ತಾನಿ ಸರ್ವಾಣಿ ಸಂಯಮ್ಯ ಯುಕ್ತ ಆಸೀತ ಮತ್ಪರಃ।
ವಶೇ ಹಿ ಯಸ್ಯೇಂದ್ರಿಯಾಣಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ॥

ತಾನಿ-ಸರ್ವಾಣಿ = ಆ ಇಂದ್ರಿಯಗಳೆಲ್ಲವನ್ನೂ, ಸಂಯಮ್ಯ = ನಿಗ್ರಹಿಸಿ, ಯುಕ್ತಃ = ಏಕಾಗ್ರಚಿತ್ತವುಳ್ಳವನಾಗಿ, ಮತ್ಪರಃ = ಭಗವಂತನಾದ ನಾನೇ ಹೊಂದತಕ್ಕ ಪರಮವಸ್ತುವೆಂಬ ಭಾವನೆವುಳ್ಳವನಾಗಿ, ಆಸೀತ = ಸುಸ್ಥಿರವಾಗಿ ಇರಬೇಕು. ಹಿ = ಏಕೆಂದರೆ, ಯಸ್ಯ = ಯಾವನಿಗಾದರೆ, ಇಂದ್ರಿಯಾಣಿ = ತನ್ನ ಇಂದ್ರಿಯಗಳು, ವಶೇ = ತನ್ನ ವಶದಲ್ಲಿ ಇರುತ್ತವೆಯೋ, ತಸ್ಯ = ಅಂತಹವನ, ಪ್ರಜ್ಞಾ = ವಿವೇಕಜ್ಞಾನವು, ಪ್ರತಿಷ್ಠಿತಾ = ಸುಸ್ಥಿರವಾದದ್ದು ಆಗುತ್ತದೆ. (ಅಂದರೆ ಅವನೇ ಸ್ಥಿತಪ್ರಜ್ಞನು.)

ಎಲೈ ಅರ್ಜುನನೆ! ಕಳೆದ ಎರಡು ಶ್ಲೋಕಗಳಲ್ಲಿ ಇಂದ್ರಿಯಜಯವನ್ನು ಕುರಿತು ನಾನು ಏಕೆ ಪ್ರಸ್ತಾಪಿಸಿದೆನೆಂದು ಹೇಳುವೆನು ಕೇಳು. ಯಾವನು ನನಗೆ ಸ್ಥಿತಪ್ರಜ್ಞತ್ವವು ಬೇಕೆಂದು ಕೇಳಿಕೊಳ್ಳುತ್ತಿದ್ದಾನೆಯೋ, ಆತನು ತನ್ನ ಇಂದ್ರಿಯಗಳಲ್ಲಿ ಯಾವೊಂದನ್ನೂ ಬಿಡದೆ, ಎಲ್ಲವನ್ನೂ ತನ್ನ ವಶದಲ್ಲಿ ಇಟ್ಟುಕೊಳ್ಳಬೇಕು. ಅದಕ್ಕೆ ಉಪಾಯವಾಗಿ ಭಗವಂತನಾದ ನನ್ನಲ್ಲಿಯೇ ಮನಸ್ಸನ್ನು ಲಗ್ನಮಾಡಿ, ತಾನು ಹೊಂದಬೇಕಾದ ಪರಮವಾದ ಚರಮಲಕ್ಷ್ಯವು ಆ ಭಗವಂತನೇ ಎಂಬ ಭಾವವನ್ನು ದೃಢಪಡಿಸಿಕೊಳ್ಳಬೇಕು. ಏಕೆಂದರೆ, ಇಂತಹ ಪ್ರಕ್ರಿಯೆಯಿಂದ ಸರ್ವೇಂದ್ರಿಯ ಜಯವನ್ನು ಸಾಧಿಸಿದವನು ಮಾತ್ರವೇ ಸ್ಥಿತಪ್ರಜ್ಞನಾಗಬಲ್ಲನು.
ಅವತಾರಿಕೆ:
58ನೆಯ ಶ್ಲೋಕದಿಂದ 61ನೆಯ ಶ್ಲೋಕದವರೆಗೂ ಇಂದ್ರಿಯನಿಗ್ರಹದಿಂದ ಸ್ಥಿತಪ್ರಜ್ಞತ್ವವನ್ನು ಸಾಧಿಸುವ ವಿಧಾನವನ್ನು ಭಗವಂತನು ವಿವರಿಸಿದನು. ಸಾಧಕರಿಗೆ ಇಂದ್ರಿಯನಿಗ್ರಹವೆಂಬುದು ಬಹಳ ಪ್ರಧಾನವಾದುದಾಗಿರುವುದರಿಂದ, ಸ್ಥಿತಪ್ರಜ್ಞತ್ವವನ್ನು ಸಾಧಿಸುವ ಮತ್ತೊಂದು ಪ್ರಕ್ರಿಯೆಯನ್ನು ಬೋಧಿಸಬೇಕೆಂದು ಬಯಸಿದ ಭಗವಂತನು, ಮೊದಲು ಇಂದ್ರಿಯಗಳು ಯಾವ ರೀತಿಯಲ್ಲಿ ಪತನವನ್ನು ಉಂಟು ಮಾಡುತ್ತವೆಯೋ ಆ ಪತನ ಸೋಪಾನಗಳನ್ನು ವಿಶ್ಲೇಷಿಸಿ ತೋರಿಸಿಕೊಡುತ್ತಾ, ಅದಾದ ಮೇಲೆ ಆ ಪತನವನ್ನು ತಪ್ಪಿಸಿಕೊಳ್ಳಲು, ಅವಲಂಬಿಸಬೇಕಾದ ಜಾಗ್ರತೆಗಳನ್ನು ಉಪದೇಶಿಸುತ್ತಾ, ಕೊನೆಗೆ 68ನೆಯ ಶ್ಲೋಕದಲ್ಲಿ ಮತ್ತೊಂದು ಸ್ಥಿತಪ್ರಜ್ಞಲಕ್ಷಣವನ್ನು ಪ್ರತಿಪಾದಿಸಲಿದ್ದಾನೆ. ಹಾಗಾಗಿ 7 ಶ್ಲೋಕಗಳ ಉದ್ದವಿರುವ ಈ ಉಪಪ್ರಕರಣದಲ್ಲಿ ಮೊದಲ ಎರಡು ಶ್ಲೋಕಗಳಲ್ಲಿಯೂ ಪತನ ಪ್ರಕ್ರಿಯೆಯನ್ನು ವರ್ಣಿಸಲಿದ್ದಾನೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ