ಶ್ರೀ ಮದ್ಭಗವದ್ಗೀತಾ : 44
ಶ್ರೀ ಭಗವಾನುವಾಚ:-
55.ಪ್ರಜಹಾತಿ ಯದಾ ಕಾಮಾನ್ ಸರ್ವಾನ್ ಪಾರ್ಥ! ಮನೋಗತಾನ್। ಆತ್ಮನ್ಯೇವಾತ್ಮನಾ ತುಷ್ಟಃ ಸ್ಥಿತಪ್ರಜ್ಞಸ್ತದೋಚ್ಯತೇ॥
ಶ್ರೀಭಗವಾನ್ = ಶ್ರೀಭಗವಂತನು, ಉವಾಚ = ಹೇಳಿದನು. ಪಾರ್ಥ = ಎಲೈ ಅರ್ಜುನನೆ, ಯದಾ = ಯಾವಾಗ, ಆತ್ಮನಿ-ಏವ = ತನ್ನ ಆತ್ಮದಲ್ಲಿಯೇ, ಆತ್ಮನಾ = ತನ್ನ ಆತ್ಮದಿಂದಲೇ, ತುಷ್ಟಃ = ತೃಪ್ತಿಪಡೆದವನಾಗಿ, ಮನೋಗತಾನ್ = ತನ್ನ ಮನಸ್ಸಿಲ್ಲಿರುವ, ಕಾಮಾನ್ = ಕೋರಿಕೆಗಳನ್ನು, ಸರ್ವಾನ್ = ಎಲ್ಲವನ್ನೂ, ಪ್ರಜಹಾತಿ = ಬಿಟ್ಟುಬಿಡುತ್ತಾನೆಯೋ, ತದಾ = ಆಗ, (ಆ ಯೋಗಿಯು), ಸ್ಥಿತಪ್ರಜ್ಞಃ = ಸ್ಥಿತಪ್ರಜ್ಞನೆಂದು, ಉಚ್ಯತೇ = ಹೇಳಲ್ಪಡುತ್ತಾನೆ.
ಶ್ರೀ ಭಗವಂತನು ಹೇಳಿದನು :-
ಎಲೈ ಅರ್ಜುನನೆ! ಚಿಕ್ಕವಯಸ್ಸಿನಿಂದಲೂ ಜ್ಞಾನವೈರಾಗ್ಯ ನಿಷ್ಠನಾಗಿರುವ ಜ್ಞಾನಯೋಗಿಯಾಗಲೀ, ಅಥವಾ ಕರ್ಮಯೋಗದಿಂದ ಜ್ಞಾನಯೋಗದಲ್ಲಿ ಪ್ರವೇಶಿಸಿದ ಕರ್ಮಯೋಗಿಯಾಗಲೀ, ಯಾರಾದರೂ ಸರಿಯೇ, ಯಾವಾಗ ಬಾಹ್ಯದ ಲಾಭಾಪೇಕ್ಷೆ ಇಲ್ಲದವನಾಗಿ, ತನ್ನಲ್ಲಿ ತಾನೇ, ತನ್ನಿಂದ ತಾನೇ, ತೃಪ್ತಿಪಡುತ್ತಾ ಇರುತ್ತಾನೆಯೋ, ಅಂತಹ ತೃಪ್ತಿಯಿಂದ ಮನಸ್ಸಿನಲ್ಲಿರುವ ಬೇರೆ ಕೋರಿಕೆಗಳೆಲ್ಲವನ್ನೂ ಅಪ್ರಯತ್ನವಾಗಿ ಬಿಟ್ಟು ಬಿಡಬಲ್ಲವನಾಗುತ್ತಾನೆಯೋ, ಆಗ ಅಂತಹ ಯೋಗಿಯನ್ನು “ಸ್ಥಿತಪ್ರಜ್ಞನು’ ಎಂದು ಹಿರಿಯರು ಹೇಳುತ್ತಾರೆ.
56.ದುಃಖೇಷ್ವನುದ್ವಿಗ್ನ ಮನಾಃ ಸುಖೇಷು ವಿಗತಸ್ಪೃಹಃ।
ವೀತರಾಗಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ॥
ದುಃಖೇಷು = ದುಃಖಗಳಲ್ಲಿ, ಅನುದ್ವಿಗ್ನಮನಾಃ = ಕ್ಷೋಭೆ ಹೊಂದದ ಮನಸ್ಸುಳ್ಳವನೂ, ಸುಖೇಷು = ಸುಖಗಳಲ್ಲಿ, ವಿಗತಸ್ಪೃಹಃ = ಆಸಕ್ತಿ ಇಲ್ಲದವನೂ, ವೀತರಾಗಭಯಕ್ರೋಧಃ = ಆಸಕ್ತಿಯೂ, ಭಯವೂ, ಕೋಪವೂ, ಇಲ್ಲದವನೂ, ಮುನಿಃ = ತತ್ತ್ವಮನನಶೀಲನಾದವನೂ, ಸ್ಥಿತಧೀಃ = ಸ್ಥಿತಪ್ರಜ್ಞನೆಂದು, ಉಚ್ಯತೇ = ಹೇಳಲ್ಪಡುತ್ತಿದ್ದಾನೆ.
ಅರ್ಜುನನೆ! ಸ್ಥಿತಪ್ರಜ್ಞನನ್ನು ಗುರುತಿಸಲು ಇನ್ನೂ ನಾಲ್ಕು ಲಕ್ಷಣಗಳನ್ನು ಹೇಳುವೆನು. –
1. ಬಗೆಬಗೆಯ ಕಷ್ಟಗಳು ಬಂದು ಮೇಲೆ ಬಿದ್ದರೂ ಕೂಡ, ಆತನು ಕುಗ್ಗುವುದಿಲ್ಲ.
2. ಆತನು ಸುಖಗಳನ್ನು ಕೋರನು. ಅವುಗಳು ಬಂದು ಮೇಲೆ ಬಿದ್ದರೂ ಕೂಡ ಆಸಕ್ತಿ ತೋರಿಸನು.
3. ಆತನಿಗೆ ಯಾವುದರ ಮೇಲೆಯೂ ಅತ್ಯಾಸಕ್ತಿಯಾಗಲೀ, ಯಾವುದರಿಂದಲೂ ಭಯವಾಗಲೀ, ಯಾರ ಮೇಲೆಯೂ ಕೋಪವಾಗಲೀ ಇರುವುದಿಲ್ಲ.
4. ಆತನ ಮನಸ್ಸು ಯಾವಾಗಲೂ ಪರತತ್ತ್ವವನ್ನು ಮನನ ಮಾಡುತ್ತಿರುತ್ತದೆ.
ಈ ಲಕ್ಷಣಗಳಿಂದ, ಆ ವ್ಯಕ್ತಿಯು ಸ್ಥಿತಪ್ರಜ್ಞನೆಂದು ನಾವು ಗುರುತಿಸಬಹುದಾಗಿದೆ.
57. ಯಸ್ಸರ್ವತ್ರಾನಭಿಸ್ನೇಹಃ ತತ್ತತ್ ಪ್ರಾಪ್ಯ ಶುಭಾಶುಭಮ್।
ನಾಭಿನಂದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ॥
ಯಃ = ಯಾವ ಮುನಿಯು, ಸರ್ವತ್ರ = ಯಾವುದರ ಮೇಲೆ ಕೂಡ, ಅನಭಿಸ್ನೇಹಃ = ಆಸಕ್ತಿ ಇಲ್ಲದವನಾಗಿ, ತತ್-ತತ್ = ಆಯಾ, ಶುಭಾಶುಭಂ = ಶುಭವನ್ನಾಗಲೀ, ಅಶುಭವನ್ನಾಗಲೀ, ಪ್ರಾಪ್ಯ = ಹೊಂದಿ, ನ-ಅಭಿನಂದತಿ = ಸಂತೋಷಿಸನೋ (ಮೆಚ್ಚಿಕೊಳ್ಳನೋ), ನ-ದ್ವೇಷ್ಟಿ = ದ್ವೇಷಿಸನೋ, ತಸ್ಯ = ಅಂತಹ ಮುನಿಯ, ಪ್ರಜ್ಞಾ = ವಿವೇಕ ಜನಿತವಾದ ಜ್ಞಾನವು, ಪ್ರತಿಷ್ಠಿತಾ = ಸುಸ್ಥಿರವಾದುದಾಗಿದೆ.
ಅರ್ಜುನನೆ! ತತ್ತ್ವಮನನಶೀಲಿಗಳಾದ ಕೆಲವರು ಯೋಗಿಗಳಿಗೆ ಕಷ್ಟಸುಖಗಳು ಗೊತ್ತಾಗುತ್ತಲೇ ಇರುತ್ತವೆ. ಆದರೂ ಅವರಿಗೆ ಯಾವುದರ ಮೇಲೂ ಆಸಕ್ತಿ ಇರುವುದಿಲ್ಲ. ಅಂದರೆ ತನ್ನ ದೇಹದ ಮೇಲೆ, ಪ್ರಾಣಗಳ ಮೇಲೆ ಕೂಡ ಆಸಕ್ತಿ ಇರದು. ಅಂತಹವನಿಗೆ ದೈವವಶದಿಂದ ಶುಭ ಉಂಟಾದರೂ, ಅದಕ್ಕೆ ಅವನು ಸಂತೋಷಿಸನು. ಅದನ್ನು ಮೆಚ್ಚಿಕೊಂಡು ಇಂತಹವು ಮತ್ತಷ್ಟು ಬರಬೇಕು ಅಂದುಕೊಳ್ಳುವುದಿಲ್ಲ. ಹಾಗೆಯೇ ಅಶುಭ ಉಂಟಾದರೂ ಅದನ್ನು ದ್ವೇಷಿಸಿ, ಇದು ತೊಲಗಿಹೋಗಬೇಕು ಅಂದುಕೊಳ್ಳುವುದಿಲ್ಲ. ಅಂದರೆ, ಕಷ್ಟಸುಖಗಳನ್ನು ಅನುಭವಿಸುತ್ತಲೇ ಇರುತ್ತಾನೆ. ಆದರೆ ನಿರ್ವಿಕಾರವಾಗಿ ಇರುತ್ತಾನೆ. ಅಂತಹವನೇ ಸ್ಥಿತಪ್ರಜ್ಞನು.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ