ಶ್ರೀ ಮದ್ಭಗವದ್ಗೀತಾ : 43
52. ಯದಾ ತೇ ಮೋಹಕಲಿಲಂ ಬುದ್ಧಿರ್ವ್ಯತಿತರಿಷ್ಯತಿ।
ತದಾ ಗಂತಾಸಿ ನಿರ್ವೇದಂ ಶ್ರೋತವ್ಯಸ್ಯ ಶ್ರುತಸ್ಯ ಚ॥
ತೇ = ನಿನ್ನ, ಬುದ್ಧಿಃ = ಮನಸ್ಸು, ಮೋಹಕಲಿಲಂ = ಅವಿವೇಕವೆಂಬ ಕಾಲುಷ್ಯವನ್ನು, ಯದಾ = ಯಾವಾಗ, ವ್ಯತಿತರಿಷ್ಯತಿ = ದಾಟಿಬಿಡುವುದೋ, ತದಾ = ಆಗ, (ನೀನು), ಶ್ರೋತವ್ಯಸ್ಯ = ಕೇಳಲ್ಪಡುವ ವಿಷಯದಲ್ಲಿಯೂ, ಶ್ರುತಸ್ಯ-ಚ = ಹಿಂದೆ ಕೇಳಿದ್ದರ ವಿಷಯದಲ್ಲಿಯೂ ಕೂಡ, ನಿರ್ವೇದಂ = ವೈರಾಗ್ಯವನ್ನು, ಗಂತಾಸಿ = ಪಡೆಯುವೆ.
ಎಲೈ ಅರ್ಜುನನೆ! ಕರ್ಮಯೋಗಾನುಷ್ಠಾನವನ್ನು ಮಾಡುತ್ತಾ,
ಮಾಡುತ್ತಾ ಕ್ರಮವಾಗಿ ನಿನ್ನ ಮನಸ್ಸಿನಲ್ಲಿರುವ ಅವಿವೇಕವು, ಅಂದರೆ ಸತ್ಪದಾರ್ಥವನ್ನು ಗುರುತು ಹಿಡಿಯದಂತೆ ಮಾಡುವ ಅಜ್ಞಾನವು ಕಡಿಮೆಯಾಗುತ್ತಾ ಬರುತ್ತದೆ. ಆ ಕಡಿಮೆಯಾಗುವುದು ಪರಿಪಕ್ವಸ್ಥಿತಿಗೆ ಬಂದು ಸೇರಿದಾಗ, ಇಲ್ಲಿಯವರೆಗೂ ಯಾವ ಯಾವ ವೇದಾಂತಗಳನ್ನು ಕೇಳಿರುವೆಯೋ, ಅವುಗಳ ಮೇಲೆ ವೈರಾಗ್ಯ ಉಂಟಾಗುವುದು. ಅಂದರೆ, ಅವುಗಳಿಂದ ಇನ್ನು ಮುಂದೆ ಕೆಲಸವಿಲ್ಲ ಎಂಬ ಅನುಭವವು ಆಗುತ್ತದೆ. ಹಾಗೆಯೇ ಇನ್ನು ಮುಂದೆ ಕೇಳಬೇಕಾದ ಹೊಸ ವಿಷಯ ಯಾವುದೂ ಇಲ್ಲವೆಂಬ ವೈರಾಗ್ಯವು ಕೂಡ ಉಂಟಾಗುತ್ತದೆ. ಜ್ಞಾನಸಿದ್ಧಿಗೆ ಇದು ಮೊದಲನೆಯ ಮೆಟ್ಟಿಲು.
53. ಶ್ರುತಿವಿಪ್ರತಿಪನ್ನಾ ತೇ ಯದಾ ಸ್ಥಾಸ್ಯತಿ ನಿಶ್ಚಲಾ।
ಸಮಾಧಾವಚಲಾ ಬುದ್ಧಿಃ ತದಾ ಯೋಗಮವಾಪ್ಸ್ಯಸಿ॥
ಯದಾ = ಯಾವಾಗ, ಶ್ರುತಿವಿಪ್ರತಿಪನ್ನಾ = ಬೇರೆ ಬೇರೆ ವೇದವಾಕ್ಯಗಳಿಂದ ಬೇರೆ ಬೇರೆ ಮಾರ್ಗಗಳಿಗೆ ಎಳೆಯಲ್ಪಟ್ಟ, ತೇ = ನಿನ್ನ, ಬುದ್ಧಿಃ = ಆಲೋಚನಾ ಪರಂಪರೆಯು, ಸಮಾಧೌ = ಆತ್ಮಸ್ವರೂಪದಲ್ಲಿ, ಅಥವಾ ಪರಮೇಶ್ವರನಲ್ಲಿ, ನಿಶ್ಚಲಾ = ಇತ್ತ ಅತ್ತ ಹೋಗದೆಯೂ, ಅಚಲಾ = ಸಂಶಯಗಳು ಇಲ್ಲದೆಯೂ, ಸ್ಥಾಸ್ಯತಿ = ದೃಢವಾಗಿ ನಿಂತು ಬಿಡುತ್ತದೆಯೋ, ತದಾ = ಆಗ, (ನೀನು), ಯೋಗಂ = ಜ್ಞಾನಯೋಗವನ್ನು ಅಂದರೆ ತತ್ತ್ವಜ್ಞಾನವನ್ನು, ಅವಾಪ್ಸ್ಯಸಿ = ಪಡೆದುಕೊಳ್ಳುವೆ.
ಅರ್ಜುನನೆ! ಹಿಂದಿನ ಶ್ಲೋಕದಲ್ಲಿ ಹೇಳಿದ ಹಾಗೆ ವೈರಾಗ್ಯದ ಪರಿಪಕ್ವದಶೆಯನ್ನು ತಲುಪಿದರೆ ಏನಾಗುವುದೋ ಅದನ್ನು ಹೇಳುವೆ, ಕೇಳು. ವೇದಗಳಲ್ಲಿ ಬಗೆಬಗೆಯ ಸಾಧಕರಿಗೋಸ್ಕರ, ಬಗೆಬಗೆಯ ಸಾಧನಾ ಮಾರ್ಗಗಳು ಬೋಧಿಸಲ್ಪಟ್ಟಿರುತ್ತವೆ. ಅವುಗಳ ಫಲವರ್ಣನೆಗಳು ಕೂಡ ಬಗೆಬಗೆಯಾಗಿ ಇರುತ್ತವೆ. ಅಂತಹ ವರ್ಣನೆಗಳಿಂದ ನಿನ್ನ ಮನಸ್ಸು ಇತ್ತಕಡೆ ಕೆಲಕಾಲ, ಅತ್ತಕಡೆ ಕೆಲಕಾಲ, ತೂಗಾಡುತ್ತಾ ಇರುತ್ತದೆ. ಆದರೆ ಕರ್ಮಯೋಗಸಾಧನೆ ಸ್ವಲ್ಪ ಮುಂದಕ್ಕೆ ಸಾಗಿದಾಗ, ನಿನ್ನ ಮನಸ್ಸಿನಲ್ಲಿರುವ ಸಂದೇಹಗಳೆಲ್ಲವೂ ತೊಲಗಿಹೋಗಿ ನಿನಗೆ ಒಂದು ಸ್ಥಿರನಿಶ್ಚಯವು ಏರ್ಪಡುವುದು. ಅಂದರೆ, ನಿನ್ನ ಸಾಧನಾಮಾರ್ಗವಾವುದೋ ನಿನಗೆ ನಿಶ್ಚಯವಾಗುವುದು. ಈ ಸ್ಥಿತಿ ತಲುಪಿದ ಕೂಡಲೇ ನಿನ್ನ ಬುದ್ಧಿಯು ಪರಮಾತ್ಮನಲ್ಲಿ ದೃಢವಾಗಿ ಲಗ್ನವಾಗಿಬಿಡುವುದು. ಆ ಪರಮಾತ್ಮ ಲೀನಸ್ಥಿತಿಯು ಸ್ಥಿರವಾದಾಗ, ನಿನಗೆ ಜ್ಞಾನದ ಅನುಭವವು ತಾನಾಗಿಯೇ ಲಭಿಸುವುದು. ಇದೇ ನಿರ್ವಿಕಲ್ಪ ಸಮಾಧಿ.
ಅರ್ಜುನ ಉವಾಚ:
54. ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ!।
ಸ್ಥಿತಧೀಃ ಕಿಂ ಪ್ರಭಾಷೇತ ಕಿಮಾಸೀತ ವ್ರಜೇತ ಕಿಮ್॥
ಅರ್ಜುನಃ = ಅರ್ಜುನನು, ಉವಾಚ = ಹೇಳಿದನು. ಕೇಶವ = ಓ ಶ್ರೀಕೃಷ್ಣನೇ!, ಸಮಾಧಿಸ್ಥಸ್ಯ = ಜ್ಞಾನಯೋಗ ಸಮಾಧಿಯಲ್ಲಿರುವ, ಸ್ಥಿತಪ್ರಜ್ಞಸ್ಯ = ಆತ್ಮಜ್ಞಾನನಿಷ್ಠಾವಂತನನ್ನು, ಭಾಷಾ = ಇತರರು ಮಾತನಾಡಿಸಿದಾಗ ಪ್ರತಿಸ್ಪಂದಿಸುವ ವಿಧಾನವು, ಕಾ = ಹೇಗೆ ಇರುತ್ತದೆ? ಸ್ಥಿತಧೀಃ = ಸ್ಥಿತಪ್ರಜ್ಞನು (ಜ್ಞಾನನಿಷ್ಠನು), ಕಿಂ = ಹೇಗೆ, ಪ್ರಭಾಷೇತ = ಸ್ವಯಂ ಮಾತನಾಡುವನು? ಕಿಂ = ಹೇಗೆ, ಆಸೀತ = ಕುಳಿತುಕೊಳ್ಳುವನು? ಕಿಂ = ಯಾವ ರೀತಿ, ವ್ರಜೇತ = ನಡೆದಾಡುವನು?
ಅರ್ಜುನನು ಹೇಳಿದನು :-
“”ಓ ಶ್ರೀಕೃಷ್ಣನೇ! ನೀನು ಹೇಳಿದ ಹಾಗೆ ಆತ್ಮದಲ್ಲಿ ದೃಷ್ಟಿಯನ್ನು ಲಗ್ನಮಾಡಿಕೊಂಡು, ಜ್ಞಾನಯೋಗಸಿದ್ಧಿಯನ್ನು ಪಡೆದುಕೊಂಡ ಸ್ಥಿತಪ್ರಜ್ಞನನ್ನು ಗುರುತಿಸುವ ವಿಧಾನವಾದರೂ ಯಾವುದು? ಅಂತಹವನು ಇತರರು ಮಾತನಾಡಿಸಿದರೆ ಮರುಮಾತನಾಡುವ ರೀತಿ ಯಾವುದು? ತಾನೇ ಸ್ವಯಂ ಮಾತನಾಡಬೇಕಾಗಿ ಬಂದರೆ ಮಾತನಾಡುವ ರೀತಿ ಯಾವುದು? ಆತನು ಕೂತರೂ, ನಿಂತರೂ, ನಡೆದಾಡಿದರೂ, ಯಾವುದಾದರೂ ವ್ಯತ್ಯಾಸವಿರುತ್ತದೆಯೇ? ಅಥವಾ ನಮ್ಮ ಹಾಗೆಯೇ ಇರುತ್ತದೆಯೇ?
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ