ಶ್ರೀ ಮದ್ಭಗವದ್ಗೀತಾ : 42
49.ದೂರೇಣ ಹ್ಯವರಂ ಕರ್ಮ ಬುದ್ಧಿಯೋಗಾದ್ಧನಂಜಯ।
ಬುದ್ಧೌ ಶರಣಮನ್ವಿಚ್ಛ ಕೃಪಣಾಃ ಫಲ ಹೇತವಃ॥
ಧನಂಜಯ = ಎಲೈ ಅರ್ಜುನನೆ!, ಕರ್ಮ = ಸ್ವಾರ್ಥಫಲಾಪೇಕ್ಷೆಯಿಂದ ಮಾಡುವ ಕರ್ಮವು, ಬುದ್ಧಿಯೋಗಾತ್ = ಈಗ ಹೇಳಿದ ಸಮತ್ವಬುದ್ಧಿಯಿಂದ ಮಾಡುವ ಕರ್ಮಯೋಗಕ್ಕಿಂತಲೂ, ದೂರೇಣ = ದೂರವಾಗಿ, ಅವರಂ = ಬಹಳ ಕೆಳಗಿನದು ಆಗಿರುವುದು, ಹಿ = ಅಲ್ಲವೇ!, (ಆದ್ದರಿಂದ ನೀನು), ಬುದ್ಧೌ = ಈಗ ಹೇಳಿದ ಯೋಗಸಂಬಂಧವಾದ ಆಲೋಚನೆಯಲ್ಲಿ, ಶರಣಂ = ರಕ್ಷಣೆಯನ್ನು, ಅನ್ವಿಚ್ಛ = ಪ್ರಾರ್ಥಿಸು. ಫಲಹೇತವಃ = ಸ್ವಾರ್ಥದಿಂದ ತುಂಬಿದ ಫಲದ ಉತ್ಪತ್ತಿಗೆ ಕಾರಣವಾದವರು, ಕೃಪಣಾಃ = ದೀನರು (ಜಿಪುಣರು).
ಅರ್ಜುನನೆ ಈಗ ಹೇಳಿದ ಕರ್ಮಯೋಗದ ಮತ್ತೊಂದು ಹೆಸರೇ ಬುದ್ಧಿಯೋಗವು. ಅಂದರೆ ಸಮತ್ವ ಬುದ್ಧಿಯಿಂದ ಕೂಡಿದ ಯೋಗವನ್ನು ಇದರೊಂದಿಗೆ ಹೋಲಿಸಿದರೆ ಸ್ವಾರ್ಥಪೂರಿತವಾದ ಕಾಮ್ಯಕರ್ಮವು ಬಹಳ ನೀಚವಾದದ್ದಾಗಿದೆ. ಆದ್ದರಿಂದ ಶ್ರೇಯಸ್ಸನ್ನು ಕೊಡುವ ನೀನು ಈ ಬುದ್ಧಿಯೋಗವನ್ನೇ ಶರಣಾಗು. ಅದರಿಂದ ಲಭಿಸುವ ಪರತತ್ತ್ವಜ್ಞಾನಕ್ಕೆ
ಕೂಡಾ ಶರಣಾಗು. ಅದರಿಂದ ನಿನಗೆ ಭಯವಿಲ್ಲದ ಸ್ಥಿತಿಯು ಏರ್ಪಡುವುದು. ಇನ್ನು ಉಳಿದ ಸ್ವಾರ್ಥ ಕರ್ಮಗಳೆಲ್ಲವೂ ಪುನರ್ಜನ್ಮಕ್ಕೆ ಕಾರಣಗಳಾಗುವುವು ಎಂದು ಇದಕ್ಕೆ ಮೊದಲೇ ಹೇಳಿದ್ದೇನಲ್ಲವೆ! ಈ ಮಾತನ್ನು ಲೆಕ್ಕಿಸದೆ ಅಂತಹ ಸ್ವಾರ್ಥ ಕರ್ಮಗಳಲ್ಲಿ ಆಸಕ್ತಿಯನ್ನು ತೋರಿಸುವವರು ಪರಮದೀನರು. ಅಂದರೆ, ಜನ್ಮಪರಂಪರಾ ರೂಪವಾದ ದುಃಖವನ್ನು ಅವರು ತಪ್ಪಿಸಿಕೊಳ್ಳಲಾರರು. ಅಷ್ಟೇ ಅಲ್ಲದೆ, ಅಂತಹವರು ಪರಮ ಜಿಪುಣರಂಥವರು. ಜಿಪುಣನು ಎಷ್ಟು ಸಂಪಾದಿಸಿದರೂ ತಾನೂ
ತಿನ್ನಲಾರ, ಮತ್ತೊಬ್ಬನಿಗೂ ಕೊಡಲಾರ. ಹಾಗೆಯೇ ಇವರು ಮಾಡುವ ಕರ್ಮಗಳಿಂದ ಪರೋಪಕಾರವೂ ಇಲ್ಲ, ಪರ್ಯವಸಾನದಲ್ಲಿ ಇವರಿಗೂ ದುಃಖವು ತಪ್ಪಿದ್ದಲ್ಲ.
ಅವತಾರಿಕೆ:
ಕರ್ಮಗಳನ್ನು ಮಾಡುವಲ್ಲಿ ಇರುವ ಜಾಣತನವನ್ನು (ಕೌಶಲವನ್ನು)ಇನ್ನು ಭಗವಂತನು ನಿರ್ವಚಿಸಲಿದ್ದಾನೆ.
50. ಬುದ್ಧಿಯುಕ್ತೋ ಜಹಾತೀಹ ಉಭೇ ಸುಕೃತ ದುಷ್ಕೃತೇ।
ತಸ್ಮಾದ್ಯೋಗಾಯ ಯುಜ್ಯಸ್ವ ಯೋಗಃ ಕರ್ಮಸು ಕೌಶಲಮ್॥
ಬುದ್ಧಿಯುಕ್ತಃ = ಸಮತ್ವ ಬುದ್ಧಿರೂಪವಾದ ಕರ್ಮಯೋಗದಿಂದ ಕೂಡಿದ ಸಾಧಕನು, ಸುಕೃತದುಷ್ಕೃತೇ = ಪುಣ್ಯ ಪಾಪಗಳು, ಉಭೇ = ಎರಡನ್ನೂ, ಇಹ = ಇಲ್ಲಿ ಈ ಜನ್ಮದಲ್ಲಿಯೇ, ಜಹಾತಿ = ಬಿಟ್ಟುಬಿಡುತ್ತಿದ್ದಾನೆ. ತಸ್ಮಾತ್ = ಆದ್ದರಿಂದ, ಯೋಗಾಯ = ಈ ಕರ್ಮಯೋಗಕ್ಕಾಗಿ, ಯುಜ್ಯಸ್ವ = ತೊಡಗಿಸಿಕೋ. ಕರ್ಮಸು = ಮಾಡುವ ಕೆಲಸಗಳಲ್ಲಿ, ಯೋಗಃ = ಸಮತ್ವ ಬುದ್ಧಿಯಿಂದ ಇರುವುದೇ, ಕೌಶಲಂ = ಜಾಣತನವೆಂದು ಹೇಳಲ್ಪಡುತ್ತದೆ.
ಎಲೈ ಅರ್ಜುನನೆ, ನಾನು ಹೇಳಿದ ಸಮತ್ವಬುದ್ಧಿರೂಪವಾದ ಕರ್ಮಯೋಗವನ್ನು ಆಚರಿಸುವವನು ಈ ಜನ್ಮದಲ್ಲಿಯೇ ಪುಣ್ಯಪಾಪಗಳು ಎರಡನ್ನೂ ದಾಟಿಹೋಗಿ, ಜ್ಞಾನಯೋಗದಲ್ಲಿ ಸೇರಿಕೊಳ್ಳಬಲ್ಲವನಾಗುತ್ತಾನೆ. ನಾನು ಹೇಳುವ ಯೋಗದಲ್ಲಿ ನೀನು ಹೊಸದಾಗಿ ಪ್ರಾಣಾಯಾಮಾದಿ ಕ್ರಿಯೆಗಳನ್ನೇನೂ ಮಾಡಬೇಕಿಲ್ಲ. ನೀನು ಪ್ರತಿದಿನ ಯಾವ ಕೆಲಸವನ್ನು ಮಾಡುವೆಯೋ ಆ ಕೆಲಸವನ್ನೇ ಸಮತ್ವಬುದ್ಧಿಯಿಂದ ಮಾಡು, ಅಷ್ಟು ಸಾಕು.ಇದು ಇಷ್ಟು ಸುಲಭವಾದದ್ದು. ಸಾಮಾನ್ಯವಾಗಿ ಲೋಕದಲ್ಲಿ ಕರ್ಮಗಳೆಲ್ಲವು ಯಾವುದಾದರೊಂದು ಮೋಹಬಂಧವನ್ನು ಉಂಟುಮಾಡುತ್ತವೆ. ಆದರೆ ಆ ಕರ್ಮಗಳನ್ನೇ ಬುದ್ಧಿಯೋಗಪೂರ್ವಕವಾಗಿ ಮಾಡಿದರೆ, ಆಗ ಅವು ಮೋಹಬಂಧಗಳನ್ನು ಬಿಡಿಸುವಂತಹವು ಆಗುತ್ತವೆ. ಆದ್ದರಿಂದ ನಿನ್ನ ಜಾಣತನವು ಎಲ್ಲಿರುವುದೆಂದರೆ, ಮಾಡುವ ಕರ್ಮದಲ್ಲಿ ಸಮತ್ವಯೋಗವನ್ನು ಜೋಡಿಸುವಲ್ಲಿರುವುದು. ಅದೇ ನಿಜವಾದ ಜಾಣತನ. ಆದ್ದರಿಂದ ಅಂತಹ ಜಾಣತನವನ್ನು ಕಲ್ಪಿಸಿಕೊಡುವ ಕರ್ಮಯೋಗಕ್ಕಾಗಿ ನಿನ್ನನ್ನು ನೀನು ತೊಡಗಿಸಿಕೋ.
51. ಕರ್ಮಜಂ ಬುದ್ಧಿ ಯುಕ್ತಾ ಹಿ ಫಲಂ ತ್ಯಕ್ತ್ವಾ ಮನೀಷಿಣಃ।
ಜನ್ಮಬಂಧ ವಿನಿರ್ಮುಕ್ತಾಃ ಪದಂ ಗಚ್ಛಂತ್ಯನಾಮಯಮ್॥
ಮನೀಷಿಣಃ = ತಿಳಿವಳಿಕೆ ಇರುವ ಜ್ಞಾನಿಗಳು, ಬುದ್ಧಿಯುಕ್ತಾಃ = ಈಗ ಹೇಳಿದ ಸಮತ್ವಬುದ್ಧಿ ಇರುವವರಾಗಿ, ಕರ್ಮಜಂ = ಕರ್ಮದಿಂದ ಹುಟ್ಟುವ, ಫಲಂ = ಜನ್ಮ ಪರಂಪರಾ ರೂಪವಾದ ಫಲವನ್ನು, ತ್ವಕ್ತ್ವಾ = ಬಿಟ್ಟು, ಜನ್ಮಬಂಧವಿನಿರ್ಮುಕ್ತಾಃ = ಜನ್ಮವೆಂಬ ಬಂಧದಿಂದ ಬಿಡುಗಡೆಯನ್ನು ಪಡೆದವರಾಗಿ, ಅನಾಮಯಂ = ಉಪದ್ರವಗಳಾಗಲೀ, ವಿನಾಶನವಾಗಲೀ ಇಲ್ಲದ, ಪದಂ = ಮೋಕ್ಷಸ್ಥಾನವನ್ನು, ಹಿ = ನಿಶ್ಚಯವಾಗಿ, ಗಚ್ಛಂತಿ = ಪಡೆದುಕೊಳ್ಳುತ್ತಾರೆ,
ಎಲೈ ಅರ್ಜುನನೆ! ಪ್ರತಿಯೊಬ್ಬನೂ ಯಾವುದೋ ಒಂದು ಕೆಲಸವನ್ನು ಮಾಡಬೇಕೆಂಬುದು ತಪ್ಪಿದ್ದಲ್ಲ. ಆದರೆ ಬುದ್ಧಿವಂತರು ಆ ಕೆಲಸಗಳನ್ನೇ ಹೇಳಿದ ಸಮತ್ವಬುದ್ಧಿಯಿಂದ ಕೂಡಿದವರಾಗಿ ಮಾಡುವರು. ಅದರಿಂದ ಅವರಿಗೆ ಪರಮಾತ್ಮ ಜ್ಞಾನಸಿದ್ಧಿಯು ಕೂಡಾ ಲಭಿಸುತ್ತದೆ. ಹಾಗಾಗಿಯೇ, ಅವರಿಗೆ ಕರ್ಮಗಳಿಂದಾಗುವ ಬಂಧಗಳೆಲ್ಲವೂ ತೊಲಗಿಹೋಗಿ ಶಾಶ್ವತವಾದ ವಿಷ್ಣುಪದವು, ಅಂದರೆ ಮೋಕ್ಷವು, ಲಭಿಸುವುದು. ಇದು ನಿಶ್ಚಯವು.
ಅವತಾರಿಕೆ:
“”ಕರ್ಮಯೋಗಾನುಷ್ಠಾನದಿಂದ ಕ್ರಮವಾಗಿ ಜ್ಞಾನಸಿದ್ಧಿಯು ಲಭಿಸುವುದು” ಎಂದು ಹೇಳುತ್ತಿರುವಿರಿ ಅಲ್ಲವೆ! ಅದು ಯಾವ ಕಾಲಕ್ಕೆ ಲಭಿಸುವುದು? ಎಂಬ ಪ್ರಶ್ನೆಗೆ ಭಗವಂತನು ಎರಡು ಶ್ಲೋಕಗಳಲ್ಲಿ ಉತ್ತರ ನೀಡುತ್ತಿದ್ದಾನೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ