ಗೀತೆ – 41 : ಜ್ಞಾನ ಮಾರ್ಗದಲ್ಲಿ ಪ್ರವೇಶಿಸಲು ನಿನಗೆ ಯೋಗ್ಯತೆ ಇಲ್ಲ

Gitacharya
Spread the love

ಶ್ರೀ ಮದ್ಭಗವದ್ಗೀತಾ : 41

47.ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ।
ಮಾ ಕರ್ಮಫಲ ಹೇತುರ್ಭೂಃ ಮಾತೇ ಸಂಗೋಽಸ್ತ್ವಕರ್ಮಣಿ॥

ತೇ = ಎಲೈ ಅರ್ಜುನನೆ!, ನಿನಗೆ, ಕರ್ಮಣಿ-ಏವ = ಕರ್ಮಮಾರ್ಗದಲ್ಲಿ ಮಾತ್ರವೇ, ಅಧಿಕಾರಃ = ಅರ್ಹತೆ ಇರುವುದು. (ಜ್ಞಾನಯೋಗದಲ್ಲಿ ಅಲ್ಲ. ಆದ್ದರಿಂದಲೇ), ಫಲೇಷು = ಕರ್ಮಗಳ ಫಲಿತಗಳ ವಿಷಯದಲ್ಲಿ, (ಅಧಿಕಾರಃ = ಕೋರಿಕೆ), ಕದಾಚನ = ಯಾವ ದಶೆಯಲ್ಲಿಯೂ ಕೂಡ, ಮಾ = ಇಲ್ಲದಂತಾಗಲಿ. (ತ್ವಂ = ನೀನು) ಕರ್ಮಫಲಹೇತುಃ = ಮಾಡುವ ಕರ್ಮಗಳ ಫಲಿತಗಳಿಗೆ ಕಾರಣವು, ಮಾ-ಭೂಃ = ಆಗಬೇಡ. ತೇ = ನಿನಗೆ, ಅಕರ್ಮಣಿ = ಕರ್ಮಮಾಡದೇ ಇರುವಲ್ಲಿ, ಸಂಗಃ = ಆಸಕ್ತಿಯು, ಮಾ-ಅಸ್ತು = ಇಲ್ಲವಾಗಲಿ!

ಎಲೈ ಅರ್ಜುನನೆ! ನಿನ್ನ ವೈಯಕ್ತಿಕ ವಿಷಯಕ್ಕೆ ಬಂದರೆ ಪ್ರಸ್ತುತದಲ್ಲಿ ನಿನಗೆ ಜ್ಞಾನಮಾರ್ಗದಲ್ಲಿ ಪ್ರವೇಶಿಸಲು ಯೋಗತ್ಯೆ ಇಲ್ಲ. ಕರ್ಮಮಾರ್ಗದಲ್ಲಿ ನಡೆಯಲಷ್ಟೇ ನಿನಗೆ ಅರ್ಹತೆಯುಂಟು. ಆದರೆ, ನೀನು ಶ್ರೇಯಸ್ಸು ಬೇಕೆಂದು ಕೋರುತ್ತಿರುವೆಯಾದ್ದರಿಂದ ನೀನು ಕರ್ಮಾಚರಣೆ ಮಾಡುವಾಗ ತೆಗೆದುಕೊಳ್ಳಬೇಕಾದ ಜಾಗ್ರತೆಗಳು ಕೆಲವು ಇವೆ.
1. ನೀನು ಮಾಡುವ ಕೆಲಸಗಳ ಫಲಿತಗಳ ಮೇಲೆ ನಿನಗೆ ಕೋರಿಕೆ ಇರುವಂತಿಲ್ಲ.
2. ಕರ್ಮಗಳ ಫಲಿತಗಳ ಮೇಲೆ ಆಸಕ್ತಿ ಹೆಚ್ಚಾದರೆ, ಅದು ಪಾಪಪುಣ್ಯಗಳಿಗೆ ದಾರಿಮಾಡಿಕೊಡುವುದು. ಅವು ಪುನರ್ಜನ್ಮಕ್ಕೆ ಕಾರಣವಾಗುವುವು. ನೀನು ಅಂತಹ ಪುನರ್ಜನ್ಮಕ್ಕೆ ಕಾರಣವಾಗುವಂತಿಲ್ಲ.
3. “”ಆದರೆ ಇಷ್ಟು ಕಷ್ಟಪಟ್ಟು ಕೆಲಸಗಳನ್ನು ಮಾಡುವುದೇಕೆ? ಪೂರ್ತಿಯಾಗಿ ಕರ್ಮಗಳನ್ನೇ ಬಿಟ್ಟುಬಿಡುತ್ತೇನೆ” ಎಂಬ ಕರ್ಮರಾಹಿತ್ಯದ ಪ್ರೀತಿಯೂ ಕೂಡ ನಿನಗೆ ಉಂಟಾಗಬಾರದು. ಇವುಗಳೇ ಕರ್ಮಯೋಗಕ್ಕೆ ಪ್ರಧಾನಸೂತ್ರಗಳು.
ವಿವರಣೆ:
ಈ ಕರ್ಮಯೋಗದಲ್ಲಿರುವ ಕಗ್ಗಂಟು ಇದೇನೇ! ಕರ್ಮಫಲಗಳನ್ನು ಕೋರಬಾರದು, ಕರ್ಮಾಚರಣೆ ವಿಷಯದಲ್ಲಿ ಮಾತ್ರ ಅಶ್ರದ್ಧೆ ಕೆಲಸಕ್ಕೆ ಬಾರದು. ಫಲಿತದ ಮೇಲಿನ ಆಸೆಯಿಂದ ಹಗಲಿರುಳು ಕೆಲಸಮಾಡುವ ಸಾಮಾನ್ಯ ಮಾನವರು ಎಷ್ಟು ಶ್ರದ್ಧೆಯಾಗಿ ಕರ್ಮಾಚರಣೆ ಮಾಡುವರೋ, ಕರ್ಮಯೋಗಾಭ್ಯಾಸಿಯು ಕೂಡ ಅಷ್ಟು ಶ್ರದ್ಧೆಯಾಗಿಯೇ ಮಾಡಬೇಕು. ಇದನ್ನು ಸಾಧಿಸಿದಲ್ಲಿ ಸಾಮಾನ್ಯರು ಸಾಧಿಸಲಾಗದ ದೊಡ್ಡ ವಿಜಯಗಳು, ನಿತ್ಯತೃಪ್ತಿಯು, ಸಮಬುದ್ಧಿಯು, ನಿನ್ನ ಸ್ವಂತವಾಗುವುವು.
ಅವತಾರಿಕೆ:
“ಕರ್ಮಯೋಗ, ಕರ್ಮಯೋಗ’ ಎನ್ನುತ್ತಿದ್ದೀರಲ್ಲವೇ, ಇಲ್ಲಿ “ಯೋಗ’ ಅಂದರೆ ಏನು? ಇದಕ್ಕೆ ಇಲ್ಲಿ ಭಗವಂತನು ನಿರ್ವಚನ ಕೊಡುತ್ತಿದ್ದಾನೆ.

48. ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ!।
ಸಿದ್ಧ್ಯಸಿದ್ಧ್ಯೋ ಸ್ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ॥

ಧನಂಜಯ = ಎಲೈ ಅರ್ಜುನನೆ! ಸಂಗಂ = ಫಲಿತಗಳ ಮೇಲೆ ಆಸಕ್ತಿಯನ್ನು, ತ್ಯಕ್ತ್ವಾ = ಬಿಟ್ಟುಬಿಟ್ಟು, ಸಿದ್ಧ್ಯಸಿದ್ಧ್ಯೋಃ = ಕಾರ್ಯಸಿದ್ಧಿಯಲ್ಲಿ, ಕಾರ್ಯಗಳ ವೈಫಲ್ಯದಲ್ಲಿಯೂ ಕೂಡ, ಸಮಃ = ಸಮವಾದ ಮಾನಸಿಕಸ್ಥಿತಿಯುಳ್ಳವನು, ಭೂತ್ವಾ = ಆಗಿ, ಯೋಗಸ್ಥಃ = ಈ ವಿಧವಾದ ಯೋಗದಲ್ಲಿರುತ್ತಾ, ಕರ್ಮಾಣಿ = ಎಲ್ಲ ಕೆಲಸಗಳನ್ನು, ಕುರು = ಮಾಡು. ಸಮತ್ವಂ = ಸಿದ್ಧಿ, ಅಸಿದ್ಧಿಗಳಲ್ಲಿ ಸಮವಾದ ಮಾನಸಿಕಸ್ಥಿತಿಯನ್ನು ಹೊಂದಿರುವುದೇ, ಯೋಗಃ = ಯೋಗವೆಂದು, ಉಚ್ಯತೇ = ಹೇಳಲ್ಪಡುತ್ತಿದೆ.

ಎಲೈ ಅರ್ಜುನನೆ! ಯುದ್ಧವು ಮಾತ್ರವೇ ಅಲ್ಲ. ನೀನು ಯಾವ ಕೆಲಸ ಮಾಡಿದರೂ ಸರಿಯೇ, ಯೋಗಸ್ಥಿತಿಯಲ್ಲಿ ಇದ್ದುಕೊಂಡೇ ಮಾಡು. ಅಂದರೆ, ಜಯಾಪಜಯಗಳಲ್ಲಿ ಜಯವನ್ನು ಕುರಿತು, ಲಾಭನಷ್ಟಗಳಲ್ಲಿ ಲಾಭವನ್ನು ಕುರಿತು, ಸುಖದುಃಖಗಳಲ್ಲಿ ಸುಖವನ್ನು ಕುರಿತು ಮತ್ತು ಈ ತರಹದವುಗಳನ್ನು ಕುರಿತು ನಿನಗಿರುವ ಆಸಕ್ತಿಯನ್ನು ಬಿಟ್ಟುಬಿಡಬೇಕು. ಇದು ಎಟುಕಬೇಕಾದರೆ, ನೀನು ಪ್ರಾರಂಭಿಸಿದ ಕೆಲಸವು ಸಫಲವಾದರೂ, ವಿಫಲವಾದರೂ ಕೂಡ, ಸಮವಾಗಿ ಇರುವುದನ್ನು ಕಲಿಯಬೇಕು. ಈ ಸಮಭಾವವೇ ನಿಜವಾದ ಯೋಗವಯ್ಯಾ!

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ