ಶ್ರೀ ಮದ್ಭಗವದ್ಗೀತೆ – 40
45. ತ್ರೈಗುಣ್ಯವಿಷಯಾ ವೇದಾಃ ನಿಸ್ತ್ರೈಗುಣ್ಯೋ ಭವಾರ್ಜುನ!।
ನಿರ್ದ್ವಂದ್ವೋ ನಿತ್ಯಸತ್ತ್ವಸ್ಥಃ ನಿರ್ಯೋಗ ಕ್ಷೇಮ ಆತ್ಮವಾನ್॥
ಅರ್ಜುನ = ಎಲೈ ಅರ್ಜುನನೆ! (ಹೀಗೆ ವಿವೇಕವಿಲ್ಲದವರಿಗೆ), ವೇದಾಃ = ಕರ್ಮಪ್ರತಿಪಾದಕವಾದ ವೇದಭಾಗಗಳೆಲ್ಲವೂ, ತ್ರೈಗುಣ್ಯ ವಿಷಯಾಃ = ತ್ರಿಗುಣಾತ್ಮಕವಾದ ಸಂಸಾರವನ್ನು ಮಾತ್ರವೇ ಪ್ರಕಾಶಿಸುತ್ತವೆ (ಉಂಟುಮಾಡುತ್ತವೆ). (ತ್ವಂ-ತು = ನೀನು ಮಾತ್ರ), ನಿಸ್ತ್ರೈಗುಣ್ಯಃ = ತ್ರಿಗುಣಗಳಿಂದ ಹುಟ್ಟಿದ ಕಾಮನೆಗಳು ಇಲ್ಲದವನೂ, ನಿರ್ದ್ವಂದ್ವಃ = ಸುಖದುಃಖಗಳನ್ನು ಉಂಟುಮಾಡುವ ಜಯಾಪಜಯಾದಿಗಳು ಇಲ್ಲದವನೂ, ನಿತ್ಯಸತ್ತ್ವಸ್ಥಃ = ಯಾವಾಗಲೂ ಸುಖದುಃಖಗಳ ವಿಷಯದಲ್ಲಿ ಚೆದುರಿಹೋಗದ ಧೀರತ್ವವು ಉಳ್ಳವನಾಗಿಯೂ, ನಿರ್ಯೋಗಕ್ಷೇಮಃ = ಯೋಗಕ್ಷೇಮಗಳಲ್ಲಿ ಆಸಕ್ತಿ ಇಲ್ಲದವನಾಗಿಯೂ, ಆತ್ಮವಾನ್ = ಯಾಮಾರಿಹೋಗದವನಾಗಿಯೂ, ಭವ = ಆಗು. (ಯೋಗವು = ಇಲ್ಲದುದ್ದನ್ನು ಹೊಂದುವುದು) (ಕ್ಷೇಮವು = ಇರುವುದನ್ನು ಕಾಪಾಡಿಕೊಳ್ಳುವುದು)
ಎಲೈ ಅರ್ಜುನನೆ! ನಿನಗೆ ಶ್ರೇಯಸ್ಸೇ ಪ್ರಧಾನವೆಂದು ಮತ್ತೆ ಮತ್ತೆ ಹೇಳುತ್ತಿರುವೆ. ಆದ್ದರಿಂದ ನಿನಗೆ ಕೆಲಸಕ್ಕೆ ಬರುವ ಉಪದೇಶವೊಂದನ್ನು ಮಾಡುವೆನು. ಶ್ರೇಯಸ್ಸು ಲಭಿಸಬೇಕೆಂದರೆ, ನಾನು ಇಷ್ಟಕ್ಕೂ ಮುಂಚೆ ಹೇಳಿದ ಈಶ್ವರ ನಿಷ್ಠಾರೂಪವಾದ ವಿವೇಕಬುದ್ಧಿಯು ಬಹಳ ಮುಖ್ಯ. ಅದು ಇಲ್ಲದವರಿಗೆ ವೇದಗಳಲ್ಲಿನ ಕರ್ಮಭಾಗಗಳೇ ಪ್ರಧಾನವೆಂದು ತೋರುವುವು. ಆ ಕರ್ಮಭಾಗಗಳು ಆಯಾ ಫಲಗಳನ್ನು ಕೊಡುವುದರಿಂದ ಸಂಸಾರಬಂಧಗಳನ್ನು ಹೆಚ್ಚಿಸುತ್ತವೆಯೇ ಹೊರತು, ಶ್ರೇಯಸ್ಸನ್ನು ಉಂಟುಮಾಡಲಾರವು. ಆದ್ದರಿಂದ ನೀನು ಅತ್ತ ಹೋಗಬೇಡ. ನೀನು ತ್ರಿಗುಣಗಳಿಂದ ಜನಿಸುವ ಕೋರಿಕೆಗಳನ್ನು ಸಂಪೂರ್ಣವಾಗಿ ಬಿಟ್ಟುಬಿಡು. ಹಾಗೆಯೇ ಲಾಭನಷ್ಟಗಳು, ಜಯಾಪಜಯಗಳು, ಶೀತೋಷ್ಣಗಳು, ಮೊದಲಾದ ದ್ವಂದ್ವಗಳಿಂದ ಉಂಟಾಗುವ ಸುಖದುಃಖಗಳನ್ನು ಕುರಿತು ಎಲ್ಲಕಾಲದಲ್ಲಿಯೂ ನಿಶ್ಚಲವಾಗಿ, ದೃಢಚಿತ್ತದಿಂದ ಧೈರ್ಯವಾಗಿರು. ಅಷ್ಟೇ ಅಲ್ಲದೆ, ನಿನ್ನ ಕರ್ತವ್ಯವನ್ನು ಆಚರಿಸುವಾಗ ಆ ಕರ್ತವ್ಯಾಚರಣೆಯಿಂದ ನೀನು ಸಂಪಾದಿಸಿಕೊಂಡ ಸಂಪತ್ತುಗಳಾಗಲೀ, ಕೀರ್ತಿಯಾಗಲೀ, ಹಿಗ್ಗುವುವೋ, ಕುಗ್ಗುವುವೋ, ಹೊಸದಾಗಿ ಬರುವುವೋ, ಬಾರವೋ ಎಂಬೀತರದ ಆಲೋಚನೆಗಳನ್ನು ಇಟ್ಟುಕೊಳ್ಳಬೇಡ. ಏಕೆಂದರೆ ನಾನು ಈಗ ಹೇಳಿದ ಲಕ್ಷಣಗಳಿಗೆ ವ್ಯತಿರೇಕವಾಗಿ ಇರುವವರಿಗೆ ಶ್ರೇಯಸ್ಸು ಲಭಿಸುವುದು ಕಷ್ಟವಾದ್ದರಿಂದ ಮೇಲೆ ಹೇಳಿದ ವಿಷಯಗಳಲ್ಲಿ ನೀನು ಯಾವಾಗಲೂ ಅಜಾಗ್ರತೆ ಇಲ್ಲದೆ ಇರುವವನಾಗು.
46.ಯಾವಾನರ್ಥ ಉದಪಾನೇ ಸರ್ವತ ಸ್ಸಂಪ್ಲುತೋದಕೇ।
ತಾವಾನ್ ಸರ್ವೇಷು ವೇದೇಷು ಬ್ರಾಹ್ಮಣಸ್ಯ ವಿಜಾನತಃ॥
ಉದಪಾನೇ = ಒಳ್ಳೆಯ ನೀರು ಸಿಗುವ ಬಿಂದಿಗೆ, ತೊಟ್ಟಿ, ಕೆರೆ, ಮೊದಲಾದವುಗಳಲ್ಲಿ, ಯಾವಾನ್-ಅರ್ಥಃ = ಎಷ್ಟು ಪ್ರಯೋಜನವು ಲಭಿಸುವುದೋ, ತಾವಾನ್ = ಅದೆಲ್ಲವೂ, ಸರ್ವತಃ-ಸಂಪ್ಲುತೋದಕೇ =-ತುಂಬಿ ಪ್ರವಹಿಸುತ್ತಾ ಪರಿಪೂರ್ಣವಾಗಿ ನೀರಿರುವ ಮಹಾನದಿಯಂತಹ ಉದಕಸ್ಥಾನದಲ್ಲಿ ಲಭಿಸುತ್ತದೆ. (ತಥಾ = ಹಾಗೆಯೇ) ಸರ್ವೇಷು- ವೇದೇಷು = ವೇದೋಕ್ತವಾದ ಕರ್ಮಗಳೆಲ್ಲದರಲ್ಲಿಯೂ, (ಯಾವಾನ್-ಅರ್ಥಃ = ಎಷ್ಟು ಪ್ರಯೋಜನವು ಲಭಿಸುವುದೋ), ತಾವಾನ್ = ಅದೆಲ್ಲವೂ, ವಿಜಾನತಃ = ಪರಮಾರ್ಥಜ್ಞಾನವುಳ್ಳ, ಬ್ರಹ್ಮಜ್ಞಾನನಿಷ್ಠಾವಂತನಿಗೆ ಲಭಿಸುವುದು.
ಮನೆಯಲ್ಲಿ ಚಿಕ್ಕ ಬಿಂದಿಗೆಯಲ್ಲಿ ನೀರನ್ನು ಹಿಡಿದಿಟ್ಟುಕೊಂಡಿರುತ್ತೇವೆ. ಅದು ಬಾಯಾರಿಕೆಯಾದಾಗ ಕುಡಿಯಲು ಕೆಲಸಕ್ಕೆ ಬರುವುದು. ಹಿತ್ತಲ ತೊಟ್ಟಿಯಲ್ಲಿ ನೀರು ತುಂಬಿಸಿಟ್ಟಿರುತ್ತೇವೆ. ಅದು ಬಟ್ಟೆ ಒಗೆಯಲು ಕೂಡ ಕೆಲಸಕ್ಕೆ ಬರುವುದು. ಒಳ್ಳೆಯ ಕೆರೆಯ ಹತ್ತಿರ ಹೋದಲ್ಲಿ ಒಳ್ಳೆಯ ನೀರನ್ನು ಕುಡಿಯಬಹುದು, ಬಟ್ಟೆಗಳನ್ನು ಒಗೆದುಕೊಳ್ಳಬಹುದು, ಸ್ನಾನವೂ ಮಾಡಬಹುದು, ಬಿಂದಿಗೆಯಲ್ಲಿ ನೀರನ್ನು ಮನೆಗೂ ತಂದುಕೊಳ್ಳಬಹುದು. ಅದೇ ತುಂಬಾ ನೀರು ಪ್ರವಹಿಸುತ್ತಿರುವ ಮಹಾನದಿಯ ಹತ್ತಿರ ಹೋದಲ್ಲಿ ಬಿಂದಿಗೆಯ ಪ್ರಯೋಜನವು ಅದರಲ್ಲಿಯೇ ಇರುವುದು, ತೊಟ್ಟಿಯ ಪ್ರಯೋಜನವು ಅದರಲ್ಲೇ ಇರುವುದು, ಕೆರೆಯ ಪ್ರಯೋಜನವು ಕೂಡಾ ಅದರಲ್ಲೇ ಇರುವುದು. ಅದಲ್ಲದೆ ಆ ನದಿಯನ್ನು ಜಾಗ್ರತೆಯಿಂದ ಬಳಸಿಕೊಂಡರೆ ಬೇಸಾಯ ಭೂಮಿಗೂ ನೀರು ಲಭಿಸುತ್ತದೆ. ಇದೇ ವಿಧವಾಗಿ, ವೇದೋಕ್ತವಾದ ವಿವಿಧ ಕರ್ಮಗಳಿಂದ ಯಾವಯಾವ ಪ್ರಯೋಜನಗಳು ಸಿದ್ಧಿಸುತ್ತವೆಯೋ ಅವೆಲ್ಲವೂ ಬ್ರಹ್ಮಜ್ಞಾನ ಸಂಪನ್ನನಾದವನಿಗೆ ಲಭಿಸಿಯೇ ತೀರುತ್ತವೆ. ಅದು ಮಾತ್ರವಲ್ಲದೆ ಅದಕ್ಕೆ ಮೀರಿದ ಮಹಾನಂದವು ಕೂಡಾ ಲಭಿಸಿ ತೀರುತ್ತದೆ.
ವಿವರಣೆ:
ಕರ್ಮಕಾಂಡದಲ್ಲಿನ ಕರ್ಮಗಳೆಲ್ಲ ಮಾಡಬೇಕಾದ ಅವಶ್ಯಕತೆ ಇಲ್ಲದವುಗಳೇ ಆದಲ್ಲಿ, ಅವುಗಳಲ್ಲಿ ಕೆಲವನ್ನು ಮಾತ್ರ ಸ್ವೀಯ ಕರ್ತವ್ಯಗಳಾಗಿ ಸ್ವೀಕರಿಸಿ, ಅವುಗಳನ್ನು ಆಚರಿಸುತ್ತ, “”ಅವುಗಳ ಫಲಿತವನ್ನು ಮಾತ್ರ ಈಶ್ವರನಿಗೆ ಅರ್ಪಿಸುತ್ತಿದ್ದೇನೆ”,-ಎಂದು ಒಬ್ಬನು ಹೇಳಿದರೆ, ಅದರಲ್ಲಿ ತರ್ಕಬದ್ಧತೆಯು ಏನು ಇರುವುದು? “”ಕೆಲಸಕ್ಕೆ ಬಾರದ ಫಲಿತಗಳನ್ನು ಈಶ್ವರನಿಗೆ ಕೊಟ್ಟುಬಿಟ್ಟರೆ, ಆತನು ಮಾತ್ರ ಸಂತೋಷಿಸುವನೇ?” ಎಂಬ ಪ್ರಶ್ನೆ ಒಂದಿರುವುದು. ಅದೂ ಅಲ್ಲದೆ, “”ಮೋಕ್ಷವು ಎಷ್ಟು ದೊಡ್ಡದಾದರೂ ಆಗಿರಬಹುದು. ಆದರೆ, ಅದೊಂದನ್ನು ಮಾತ್ರ ಸಂಪಾದಿಸಿ ಸುಮ್ಮನಿದ್ದುಬಿಟ್ಟರೆ ಉಳಿದ ಸತ್ಕರ್ಮಗಳ ಫಲಿತಗಳೆಲ್ಲವು ಇಲ್ಲದೇ ಹೋದಂತೆಯೇ ತಾನೆ?” ಎಂಬ ಎರಡನೆಯ ಪ್ರಶ್ನೆಯೂ ಉಂಟು. ಈ ಎರಡು ಪ್ರಶ್ನೆಗಳಿಗೂ ಈ ಶ್ಲೋಕದಲ್ಲಿ ಭಗವಂತನು ಉತ್ತರ ಕೊಟ್ಟಿದ್ದಾನೆ.
ಅವತಾರಿಕೆ:
ಇನ್ನು ಭಗವಂತನು ತನ್ನ ಶ್ರೋತನಾದ ಅರ್ಜುನನಿಗೆ ಕರ್ತವ್ಯವನ್ನು ನೇರವಾಗಿ ನಿರ್ದೇಶಿಸುತ್ತಿದ್ದಾನೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ