ಗೀತೆ 39 : ವೇದದಲ್ಲಿರುವ ಸಾಂಖ್ಯ ಯೋಗ , ನಿಷ್ಕಾಮ ಯೋಗ ಕರ್ಮ ಅರ್ಥವಾಗದು

Gitacharya
Spread the love

ಶ್ರೀ ಮದ್ಭಗವದ್ಗೀತಾ : 39

42. ಯಾಮಿಮಾಂ ಪುಷ್ಪಿತಾಂ ವಾಚಂ ಪ್ರವದಂತ್ಯವಿಪಶ್ಚಿತಃ।
ವೇದವಾದರತಾಃ ಪಾರ್ಥ! ನಾನ್ಯದಸ್ತೀತಿ ವಾದಿನಃ॥

ಪಾರ್ಥ = ಎಲೈ ಅರ್ಜುನನೆ!, ವೇದವಾದರತಾಃ = ಸಕಾಮಕರ್ಮದ ಪ್ರತಿಪಾದಕಗಳಾದ ವೇದವಾಕ್ಯಗಳಲ್ಲಿ ಮಾತ್ರವೇ ಆಸಕ್ತಿ ಉಳ್ಳವರಾಗಿ, ಅನ್ಯತ್‌ = ಮತ್ತೊಂದು ಏನೂ, ನ-ಅಸ್ತಿ-ಇತಿ = ಇಲ್ಲವೆಂದು, ವಾದಿನಃ = ವಾದಿಸುತ್ತಿರುವವರಾಗಿ, ಪುಷ್ಪಿತಾಂ = ಚೆನ್ನಾಗಿ ಅರಳಿದ ಹೂವುಗಳಿರುವ ಮರದಂತೆ ಮೇಲ್ನೋಟಕ್ಕೆ ಅಂದವಾಗಿ ಕಾಣಿಸುವ, ಯಾಂ-ಇಮಾಂ-ವಾಚಂ = ಯಾವ ಈ ಮಾತುಗಳನ್ನು, ಪ್ರವದಂತಿ = ಹೆಚ್ಚಾಗಿ ಮಾತನಾಡುತ್ತಿರುವರೋ (ಅವರು), ಅವಿಪಶ್ಚಿತಃ = ವಿವೇಕರಹಿತರು.

ಕೆಲವು ಪಂಡಿತರಿಗೆ ವೇದದಲ್ಲಿರುವ ಸಾಂಖ್ಯಯೋಗ ವಾಕ್ಯಗಳಾಗಲೀ, ನಿಷ್ಕಾಮಕರ್ಮಯೋಗ ವಾಕ್ಯಗಳಾಗಲೀ, ಅರ್ಥವಾಗದು. ಆದ್ದರಿಂದ ಅವರಿಗೆ ಈಶ್ವರನಿಷ್ಠಾರೂಪವಾದ ನಿಶ್ಚಯಬುದ್ಧಿಯು ಆಗದು. ಅಂತಹವರು ವೇದದಲ್ಲಿರುವ ಸಕಾಮಕರ್ಮ ಪ್ರತಿಪಾದಕ ವಾಕ್ಯಗಳನ್ನು, ಅವುಗಳ ಫಲಗಳನ್ನು ವರ್ಣಿಸುವ ಸ್ತುತಿವಾಕ್ಯಗಳನ್ನು ಹಿಡಿದುಕೊಂಡು, ಅವುಗಳ ಮೇಲೇ ವಿಧವಿಧವಾಗಿ ಆಕರ್ಷಕವಾದ ಉಪನ್ಯಾಸಗಳು, ವಾದಗಳನ್ನು, ಮಾಡುತ್ತಾ ಇರುತ್ತಾರೆ. ಎಲೈ ಅರ್ಜುನನೆ! ಆ ತರಹದವರೆಲ್ಲರೂ ನಿಜವಾದ ಪಂಡಿತರಲ್ಲ. ಅವರು ಅವಿವೇಕಿಗಳು.
ವಿವರಣೆ:
ಇಲ್ಲಿ ಮೂರು ಶ್ಲೋಕಗಳು ಸೇರಿ ಒಂದೇ ವಾಕ್ಯವಾಗಿ ಇರುವುವು. ಆದಾಗ್ಯೂ ತುಂಬ ದೀರ್ಘವಾದ ವಾಕ್ಯವನ್ನು ಸರಳಗೊಳಿಸಲು, ಯಾವ ಶ್ಲೋಕಕ್ಕೆ ಆ ಶ್ಲೋಕವನ್ನು ಒಂದು ವಾಕ್ಯವಾಗಿ ಸಮನ್ವಯಮಾಡಿಕೊಳ್ಳುತ್ತಾ, ನಾವು ಮುಂದೆ ಸಾಗೋಣ.

43. ಕಾಮಾತ್ಮಾನ ಸ್ಸ್ವರ್ಗಪರಾಃ ಜನ್ಮಕರ್ಮ ಫಲಪ್ರದಾಮ್‌।
ಕ್ರಿಯಾವಿಶೇಷ ಬಹುಲಾಂ ಭೋಗೈಶ್ವರ್ಯಗತಿಂ ಪ್ರತಿ॥

ಕಾಮಾತ್ಮಾನಃ = (ಅಂತಹ ಪಂಡಿತರು) ಕೋರಿಕೆಗಳಲ್ಲಿ ಆಸಕ್ತಿ ಉಳ್ಳವರಾಗಿ, ಸ್ವರ್ಗಪರಾಃ = ಸ್ವರ್ಗಲೋಕವೇ ಪರಮವು ಎಂಬ ಅಭಿಪ್ರಾಯ ಉಳ್ಳವರಾಗಿ, ಭೋಗೈಶ್ವರ್ಯಗತಿಂ ಪ್ರತಿ = ಸುಖಭೋಗಗಳನ್ನು, ಐಶ್ವರ್ಯವನ್ನು ಹೊಂದುವುದನ್ನು ಕುರಿತು (ಹೊಂದಲು), ಕ್ರಿಯಾವಿಶೇಷಬಹುಲಾಂ = ತರತರದ ಕ್ರಿಯೆಗಳು ಉಳ್ಳದ್ದು, ಜನ್ಮಕರ್ಮಫಲಪ್ರದಾಂ = ಪುನರ್ಜನ್ಮವೆಂಬ ಕರ್ಮಫಲವನ್ನು ತಂದೊಡ್ಡುವುದೂ ಆದ, (ವಾಚಂ-ಪ್ರವದಂತಿ = ಮಾತನ್ನು ಆಡುತ್ತಾ ಇರುತ್ತಾರೆ.)

ಇಂತಹ ವಾದಗಳು ಮಾಡುವ ಪಂಡಿತರ ಮನಸ್ಸುಗಳೆಲ್ಲವೂ ॥ವಿಧವಿಧವಾದ ಐಹಿಕವಾಂಛೆಗಳಿಂದ ತುಂಬಿರುತ್ತವೆ. ಅವರಿಗೆ /ಸ್ವರ್ಗಲೋಕ ಪ್ರಾಪ್ತಿಯೇ ಪರಮಲಕ್ಷ್ಯವು. “”ಈ ವಿಧವಾದ ಕರ್ಮ ಮಾಡುವುದರಿಂದ, ಈ ವಿಧವಾದ ಸುಖಭೋಗವುಂಟಾಗುವುದು, ಈ ವಿಧವಾದ ಐಶ್ವರ್ಯವು ಲಭಿಸುವುದು ಎಂಬೀ ಮಾತನ್ನು ವೇದವೇ ಹೇಳುತ್ತಿದೆ” ಎಂದು ಚೆನ್ನಾಗಿ, ಉಪನ್ಯಾಸಗಳನ್ನು ಮಾಡುತ್ತಾ ಇರುತ್ತಾರೆ. ಅಂತಹ ಕೋರಿಕೆಗಳ ಸಾಧನೆಗಾಗಿ, ಚಿತ್ರವಿಚಿತ್ರವಾದ ಕರ್ಮಗಳುಳ್ಳ ಕರ್ಮಪ್ರಯೋಗಗಳನ್ನು ಉಪದೇಶಿಸುತ್ತಾ ಇರುತ್ತಾರೆ. ಎಲೈ ಅರ್ಜುನನೆ! ಇಂತಹ ಕರ್ಮಗಳೆಲ್ಲವೂ ಜನ್ಮಪರಂಪರೆಯನ್ನು ಉಂಟುಮಾಡುತ್ತಾ ಇರುತ್ತವೆಯೇ ಹೊರತು, ಆ ಪರಂಪರೆಯನ್ನು ನಿಲ್ಲಿಸವು.

44. ಭೋಗೈಶ್ವರ್ಯಪ್ರಸಕ್ತಾನಾಂ ತಯಾಪಹೃತ ಚೇತಸಾಮ್‌। ವ್ಯವಸಾಯಾತ್ಮಿಕಾ ಬುದ್ಧಿಃ ಸಮಾಧೌ ನ ವಿಧೀಯತೇ॥

ತಯಾ = ಆ ವಿಧವಾಗಿ ಚೆನ್ನಾಗಿ ಅರಳಿದ ಹೂವಿನ ಗಿಡಗಳಂತಹ ವಾಕ್ಪ್ರವಾಹದಿಂದ, ಅಪಹೃತಚೇತಸಾಂ = ದೋಚಲ್ಪಟ್ಟ ಚಿತ್ತವುಳ್ಳವರೂ, ಭೋಗೈಶ್ವರ್ಯ ಪ್ರಸಕ್ತಾನಾಂ = ಸುಖಭೋಗಗಳ ಮೇಲೆ, ಐಶ್ವರ್ಯಗಳ ಮೇಲೆ, ಅತ್ಯಾಸಕ್ತಿವುಳ್ಳವರೂ ಆದವರ, ಸಮಾಧೌ = ಮನಸ್ಸಿನಲ್ಲಿ, ವ್ಯವಸಾಯಾತ್ಮಿಕಾ-ಬುದ್ಧಿಃ = ಹಿಂದೆ ಹೇಳಿದ ನಿಶ್ಚಯಾತ್ಮಕವಾದ ಆಲೋಚನೆ, ನ-ವಿಧೀಯತೇ = ನಿಲ್ಲದು.
ಅಂತಹ ಪಂಡಿತರ ಚಂದದ ಉಪನ್ಯಾಸಗಳಿಗೆ ಹೆಚ್ಚು ಜನರು ಬೀಳುತ್ತಿರುತ್ತಾರೆ. ಏಕೆಂದರೆ, ಸಾಮಾನ್ಯವಾಗಿ ಜನರಿಗೆ ಭೋಗಗಳಲ್ಲಿ, ಐಶ್ವರ್ಯಗಳಲ್ಲಿ, ಮಾತ್ರವೇ ಅಧಿಕವಾಗಿ ಆಸಕ್ತಿ ಇರುತ್ತದೆ. ಅಂತಹವರು ಸಕಾಮಕರ್ಮಗಳನ್ನು ಎಷ್ಟು ವಿಸ್ತಾರವಾಗಿ ಎಷ್ಟುದಿನ ಮಾಡಿದರೂ, ಈಶ್ವರನಿಷ್ಠಾರೂಪವಾದ ನಿಶ್ಚಯಾತ್ಮಕಬುದ್ಧಿಯು ಉಂಟಾಗಲಾರದು.
ಅವತಾರಿಕೆ:
ಈ ವಿಷಯವನ್ನೇ ಭಗವಂತನು ಮುಂದಿನ ಶ್ಲೋಕದಲ್ಲಿ ಇನ್ನಷ್ಟು ಸ್ಪಷ್ಟಪಡಿಸುತ್ತಿದ್ದಾನೆ.
ಈ ವಿಧವಾಗಿ ವಿವೇಕಬುದ್ಧಿ ಇಲ್ಲದೆ ಕರ್ಮಗಳನ್ನು ಆಚರಿಸುವವರಿಗೆ ಬರಬಹುದಾದ ನಷ್ಟವಾವುದೋ ಅದನ್ನು ಹೇಳುತ್ತಾ, ವಿವೇಕಸಹಿತರಾಗಿ ಕರ್ತವ್ಯದ ಆಚರಣೆಯನ್ನು ಮಾಡುವವರು ಎಂತಹ ವಿವೇಕದಿಂದ ಅದನ್ನು ಮಾಡಬೇಕೋ ಭಗವಂತನು ಇನ್ನು ಮುಂದಿನ ಶ್ಲೋಕದಲ್ಲಿ ಸ್ಪಷ್ಟಪಡಿಸುತ್ತಿದ್ದಾನೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ