ಶ್ರೀ ಮದ್ಭಗವದ್ಗೀತಾ : 119
ಅರ್ಜುನ ಉವಾಚ:
1. ಸಂನ್ಯಾಸಂ ಕರ್ಮಣಾಂ ಕೃಷ್ಣ! ಪುನರ್ಯೋಗಂ ಚ ಶಂಸಸಿ।
ಯಚ್ಛ್ರೇಯ ಏತಯೋರೇಕಂ ತನ್ಮೇ ಬ್ರೂಹಿ ಸುನಿಶ್ಚಿತಮ್॥
ಕೃಷ್ಣ = ಓ ಕೃಷ್ಣನೆ!, ಕರ್ಮಣಾಂ = ಶಾಸ್ತ್ರವಿಹಿತಗಳಾದ ಕರ್ಮಗಳ, ಸಂನ್ಯಾಸಂ= ಪರಿತ್ಯಾಗವನ್ನು, ಶಂಸಸಿ = ಸ್ತೋತ್ರ ಮಾಡುತ್ತಿರುವೆ. ಪುನಃ = ಮತ್ತೆ (ಕರ್ಮಣಾಂ = ಶಾಸ್ತ್ರವಿಹಿತವಾದ ಕರ್ಮಗಳ), ಯೋಗಂ-ಚ = ಅನುಷ್ಠಾನವನ್ನು ಕೂಡ (ಶಂಸಸಿ = ಪ್ರಶಂಸಿಸುತ್ತಿರುವೆ), ಏತಯೋಃ = ಈ ಎರಡರಲ್ಲಿಯೂ, ಯಃ = ಯಾವುದು, ಶ್ರೇಯಃ = ಅಧಿಕ ಶ್ರೇಷ್ಠವೋ, ತತ್-ಏಕಂ = ಆ ಒಂದನ್ನು, ಸುನಿಶ್ಚಿತಂ = ಚೆನ್ನಾಗಿ ನಿಶ್ಚಯವಾಗುವಂತೆ, ಮೇ = ನನಗೆ, ಬ್ರೂಹಿ = ಹೇಳು.
ಅರ್ಜುನನು ಹೇಳಿದನು :-
ಓ ಶ್ರೀಕೃಷ್ಣನೆ! ಹಿಂದಿನ ಶ್ಲೋಕದಲ್ಲಿ ನೀನು “”ಜ್ಞಾನಖಡ್ಗದಿಂದ ಸಂಶಯಗಳನ್ನು ಕತ್ತರಿಸಿಕೋ” ಎಂದಿರುವೆ. ಅದರ ಪಕ್ಕದಲ್ಲಿಯೇ “”ಕರ್ಮಯೋಗವನ್ನು ಆಚರಿಸು” ಎಂದು ಹೇಳಿಬಿಟ್ಟಿರುವೆ. ಈ ಜ್ಞಾನ ಕರ್ಮಗಳು ಪರಸ್ಪರ ವಿರುದ್ಧವಲ್ಲವೇ?! ಈ ಎರಡನ್ನೂ ಒಂದೇ ಸಲ ಆಚರಿಸುವುದು ಯಾರಿಗೂ ಸಾಧ್ಯವಾಗದು ಅಲ್ಲವೇ! ಆದ್ದರಿಂದ ನೀನು ಹೇಳುವ ಕರ್ಮಸಂನ್ಯಾಸದ ಸ್ವರೂಪವಾವುದು? ಕರ್ಮಸಂನ್ಯಾಸ, ಕರ್ಮಯೋಗಗಳಲ್ಲಿ ಯಾವುದು ಅಧಿಕಶ್ರೇಷ್ಠವು? ಒಂದುಸಲ ಇದು ಹೆಚ್ಚೆಂದೂ, ಮತ್ತೊಂದು ಸಲ ಅದು ಹೆಚ್ಚೆಂದೂ ಹೇಳಬೇಡ. ಯಾವುದೋ ಒಂದನ್ನು ನಿಶ್ಚಯಮಾಡಿ ಹೇಳು. ನಾನು ನಿನ್ನನ್ನೇ ನಂಬಿದ್ದೇನೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ