ಶ್ರೀ ಮದ್ಭಗವದ್ಗೀತಾ : 118
5. ಕರ್ಮಸಂನ್ಯಾಸಯೋಗ
ಅಧ್ಯಾಯದ ಅವತಾರಿಕೆ:
ಧರ್ಮಶಾಸ್ತ್ರ, ತತ್ತ್ವಶಾಸ್ತ್ರಗಳನ್ನು ಕಲಬೆರಕೆ ಮಾಡಿಕೊಂಡು ಗೊಂದಲದಲ್ಲಿರುವ ಅರ್ಜುನನು ಮಾಡಿದ ಪ್ರಶ್ನೆಗಳಿಗೆ ಶ್ರೀಭಗವಂತನು 2ನೆಯ ಅಧ್ಯಾಯದಿಂದ ಸಮಾಧಾನಗಳನ್ನು ಪ್ರಾರಂಭಿಸಿದನು. 2ನೆಯ ಅಧ್ಯಾಯದಲ್ಲಿ ಆತನು “”ಕರ್ಮಣ್ಯೇವಾಧಿಕಾರಸ್ತೇ” (2-47) (ಎಲೈ ಅರ್ಜುನನೆ! ನಿನಗೆ ಕರ್ಮಯೋಗಾಚರಣೆಗೆ ಮಾತ್ರವೇ ಅರ್ಹತೆ ಇದೆ) ಎಂದು ನಿಷ್ಕರ್ಷೆಯಾಗಿ ಹೇಳಿದರೂ ಜ್ಞಾನಯೋಗವನ್ನೇ ಬಹಳ ಸ್ತುತಿಮಾಡಿದನು.
ಅದರಿಂದ ಅರ್ಜುನನು ಮತ್ತಷ್ಟು ಗೊಂದಲದಲ್ಲಿಬಿದ್ದು “”ಬುದ್ಧಿಂ ಮೋಹಯಸೀವ ಮೇ” (3-2) (ನನ್ನನ್ನು ಗೊಂದಲದಲ್ಲಿ ಹಾಕುತ್ತಿದ್ದೀಯೆ), “”ಜ್ಞಾನಯೋಗವು ಶ್ರೇಷ್ಠವಾದರೆ, ನನ್ನನ್ನು ಕರ್ಮಯೋಗದಲ್ಲಿ ಏತಕ್ಕೆ ಹೋಗು ಎಂದು ಹೇಳುತ್ತಿದ್ದೀಯೆ?” ಎಂದು ಭಗವಂತನನ್ನು ಪ್ರಶ್ನಿಸಿದನು.
ಭಗವಂತನು 3ನೆಯ ಅಧ್ಯಾಯದಲ್ಲಿ ಸಮಾಧಾವನ್ನು ಹೇಳುತ್ತಾ “ಆತ್ಮರತಿ’, “ಆತ್ಮತೃಪ್ತಿ’, “ಆತ್ಮಸಂತುಷ್ಟಿ’ ಎಂಬ ಮೂರು ಲಕ್ಷಣಗಳು ಇರುವವರಿಗೆ ಮಾತ್ರವೇ ಜ್ಞಾನಯೋಗದಲ್ಲಿ ಪ್ರವೇಶಾರ್ಹತೆ ಇರುತ್ತದೆಯೆಂದೂ, ಅರ್ಜುನನಂತಹವರಿಗೆ ಆ ಸ್ಥಿತಿ ಇಲ್ಲವಾದ್ದರಿಂದ ಅಂತಹವರು ತಮಗೆ ವಿಹಿತವಾದ ಕರ್ಮಗಳನ್ನೇ ಕರ್ಮಯೋಗವನ್ನಾಗಿ ಮಾಡಿಕೊಳ್ಳಬೇಕೆಂದೂ, ಉಪದೇಶಿಸಿದನು.
ಆದರೂ ಅಲ್ಲಿಗೇ ಸುಮ್ಮನಾಗದೆ, ಭಗವಂತನು ನಾಲ್ಕನೆಯ ಅಧ್ಯಾಯದೊಳಗೆ ತಾನೇ ಸ್ವಯಂ ಪ್ರವೇಶಿಸಿ, ಕರ್ಮಾಕರ್ಮಗಳ ಏಕತ್ವಸೂತ್ರವನ್ನು ಚೆನ್ನಾಗಿ ವಿವರಿಸಿ, ಜ್ಞಾನಯೋಗವನ್ನು ಮತ್ತೊಂದು ಸಾರಿ ಸ್ತೋತ್ರಮಾಡಿ, ಕೊನೆಯ ಶ್ಲೋಕದಲ್ಲಿ ಮಾತ್ರ “”ಅರ್ಜುನನೆ! ಎಲ್ಲ ಸಂದೇಹಗಳನ್ನೂ ಬಿಟ್ಟು, ಎದ್ದು ನಿಂತು ಯುದ್ಧ ಮಾಡು” ಎಂದು ಮತ್ತೆ ಕರ್ಮಯೋಗಮಾರ್ಗವನ್ನು ಅರ್ಜುನನ ಕರ್ತವ್ಯವನ್ನಾಗಿ ಉಪದೇಶಿಸಿದನು.
ಜ್ಞಾನಯೋಗವೆಂದರೆ ಕರ್ಮಗಳ ಸಂನ್ಯಾಸದಿಂದ ಕೂಡಿರುವುದು. ಕರ್ಮಯೋಗವೆಂದರೆ ಕರ್ಮಗಳ ಆಚರಣೆಯಿಂದ ಕೂಡಿರುವುದು. “”ಈ ಎರಡರಲ್ಲಿಯೂ ಭಗವಂತನಿಗೆ ಯಾವುದು ಹೆಚ್ಚಿಗೆ ಪ್ರೀತಿಕರವು?” ಎಂಬ ಪ್ರಶ್ನೆಗೆ ಸಮಾಧಾನವು ಇಲ್ಲಿ ಸರಿಯಾಗಿ ಸಿಗುತ್ತಿಲ್ಲ.
ಹೋಗಲಿ, “”ಭಗವಂತನು ಹೆಚ್ಚಾಗಿ ಕರ್ಮಸಂನ್ಯಾಸಮಾರ್ಗವನ್ನೇ ಸ್ತೋತ್ರಮಾಡುತ್ತಿದ್ದಾನಾದ್ದರಿಂದ ಅದನ್ನೇ ತಿಳಿದುಕೊಳ್ಳೋಣವೇ” ಅಂದರೆ 3ನೆಯ ಅಧ್ಯಾಯದಲ್ಲಿಯೇ ಆತನು “”ನ ಚ ಸಂನ್ಯಸನಾದೇವ ಸಿದ್ಧಿಂ ಸಮಧಿಗಚ್ಛತಿ” (3-4) (ಜ್ಞಾನಸಿದ್ಧಿ ಉಂಟಾಗದೆ ಸಂನ್ಯಾಸಾಶ್ರಮವನ್ನು ತೆಗೆದುಕೊಂಡಮಾತ್ರಕ್ಕೆ ಆತ್ಮಜ್ಞಾನಸಿದ್ಧಿಯಾಗದು) – ಎಂದು ಒಂದು ಮಾತನ್ನು ಹೇಳಿದನು.
ಹಾಗಾಗಿ “”ಕರ್ಮಸಂನ್ಯಾಸಮಾರ್ಗದಲ್ಲಿ ಎರಡು ದಶೆಗಳಿವೆ ಎಂದು ಭಗವಂತನ ಆಶಯವೇನೋ” ಎಂದೆನಿಸುತ್ತಿದೆ. ಅವುಗಳಲ್ಲಿ ಜ್ಞಾನಸಿದ್ಧಿ ಇಲ್ಲದೆಯೇ ಸಂನ್ಯಾಸಾಶ್ರಮ ತೆಗೆದುಕೊಂಡು, ಗೃಹಸ್ಥಧರ್ಮಗಳೆಲ್ಲವನ್ನೂ ಬಿಟ್ಟುಬಿಡುವ ವಿಧಾನವು ಒಂದು. ಇಂತಹ ಸಂನ್ಯಾಸಿಗಳು ಅರ್ಜುನನ ಕಾಲಕ್ಕೆ ಅಲ್ಲಲ್ಲಿ ಕಾಣಿಸುತ್ತಲೇ ಇದ್ದಾರೆ. ಅವರನ್ನು “ಆಶ್ರಮ ಸಂನ್ಯಾಸಿಗಳು’ ಎಂದೂ, “ವಿವಿದಿಷಾಸಂನ್ಯಾಸಿಗಳು’ ಎಂದೂ ಹೇಳುತ್ತಿರುತ್ತಾರೆ. ಇವರಿಗೆ ಗೃಹಸ್ಥಾಶ್ರಮ ಕರ್ಮಗಳಾದರೆ ಇರವು. ಆದರೆ, ಸಂನ್ಯಾಸಾಶ್ರಮಕ್ಕೆ ಸಂಬಂಧಿಸಿದ ನಿಯಮಗಳು ಕೆಲವು ಇರುತ್ತವೆ. ನಿಯಮಗಳೆಲ್ಲವೂ ಕರ್ಮರೂಪಗಳೇ. ಉದಾಹರಣೆಗೆ ಊರಿಂದಾಚೆ ಕಾಡಲ್ಲಿ ನಿವಾಸವು, ಭಿಕ್ಷಾಟನೆಯಿಂದ ಜೀವನವು, ಬಂದ ಭಿಕ್ಷೆಯನ್ನು ನೀರಿನಿಂದ ತೊಳೆದುಕೊಂಡು ರುಚಿ ಇಲ್ಲದೆ ಆಹಾರವನ್ನು ಸ್ವೀಕರಿಸುವುದು, ಕಾಷಾಯವಸ್ತ್ರ ಧಾರಣೆ ಮೊದಲಾದವು. ಆದ್ದರಿಂದ ಇವರ ಕರ್ಮಸಂನ್ಯಾಸವು ಪಾಕ್ಷಿಕಸಂನ್ಯಾಸವೇ ಹೊರತು ಪರಿಪೂರ್ಣಸಂನ್ಯಾಸವಲ್ಲ.
ಪರಿಪೂರ್ಣ ಸಂನ್ಯಾಸವು ತೆಗೆದುಕೊಳ್ಳುವುದರಿಂದ ಬರುವುದಲ್ಲ; ಬಿಟ್ಟುಬಿಡುವುದರಿಂದ ಹೋಗುವುದಲ್ಲ. ಮರದಹಣ್ಣು ತಾನಾಗಿಯೇ ಹಣ್ಣಾದಂತೆ ಪರಿಪೂರ್ಣ ಕರ್ಮಸಂನ್ಯಾಸವು ತಾನಾಗಿಯೇ ಬರುತ್ತದೆ.
ಹಾಗಾಗಿ ಭಗವಂತನು “”ಈಗ ಅರ್ಜುನನಿಗೆ ನಿಷೇಧಿಸುತ್ತಿರುವುದು ಆಶ್ರಮರೂಪವಾದ ಸಂನ್ಯಾಸವನ್ನೋ? ಪರಿಪೂರ್ಣಸಂನ್ಯಾಸವನ್ನೋ” ಎಂಬ ವಿಷಯವನ್ನು ಅರ್ಜುನನು ತಿಳಿದುಕೊಳ್ಳಬೇಕು.
ಆದರೆ, ಅರ್ಜುನನಿಗೆ ಜ್ಞಾನಸ್ಥಿತಿ ಇಲ್ಲವೆಂದು ಭಗವಂತನು ಒಂದಕ್ಕೆರಡು ಸಲ ಸೂಚನೆ ಮಾಡುತ್ತಲೇ ಇದ್ದಾನೆ. ಆದ್ದರಿಂದ ಪರಿಪೂರ್ಣ ಸಂನ್ಯಾಸವನ್ನು ಅರ್ಜುನನ ವಿಷಯದಲ್ಲಿ ಆತನು ಅನುಮತಿಸದೇ ಇರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ, ಅರ್ಜುನನಿಗೆ ಜ್ಞಾನವನ್ನು ಪಡೆಯಬೇಕೆಂಬ “ವಿವಿದಿಷ’ ಇರುವುದಲ್ಲವೇ! ಇಂತಹವನು ಆಶ್ರಮಸಂನ್ಯಾಸವನ್ನು ಏಕೆ ತೆಗೆದುಕೊಳ್ಳಬಾರದು? ಆದರೆ ಭಗವಂತನು ಅದನ್ನೂ ಕೂಡ ಅನುಮತಿಸುತ್ತಿರುವಂತೆ ಕಾಣಿಸುತ್ತಿಲ್ಲ. ಏಕೆಂದರೆ, 4ನೇ ಅಧ್ಯಾಯದ ಕೊನೆಯಲ್ಲಿ ಆತನು “”ಛಿತ್ವೈನಂ ಸಂಶಯಂ ಯೋಗಮಾತಿಷ್ಠೋತ್ತಿಷ್ಠ ಭಾರತ” (4-42) (ಸಂದೇಹಗಳನ್ನು ಒದರಿಕೊಂಡುಬಿಡು. ಕರ್ಮಯೋಗವನ್ನೇ ಆಶ್ರಯಿಸು. ಎದ್ದು ನಿಂತು ಯುದ್ಧಮಾಡು” ಎಂದು ಸ್ಪಷ್ಟವಾಗಿ ಹೇಳಿಬಿಡುತ್ತಿದ್ದಾನೆ.
ಆದ್ದರಿಂದ ಜ್ಞಾನಪರಿಪಾಕವಿಲ್ಲದವನು ಆಶ್ರಮಸಂನ್ಯಾಸವನ್ನು ಸ್ವೀಕರಿಸುವುದು ಉತ್ತಮವೋ? ನಿಷ್ಕಾಮಕರ್ಮಯೋಗದಲ್ಲಿ ಇದ್ದುಬಿಡುವುದೇ ಉತ್ತಮವೋ? ಎಂಬ ಅಂಶಗಳನ್ನು ನಿರ್ಣಿಯಿಸಿಕೊಳ್ಳಬೇಕಾದ ಅವಶ್ಯಕತೆಯು ಅರ್ಜುನನಿಗೆ ಉಂಟಾಗಿದೆ. ಹೆಚ್ಚಿನದಾವುದೋ ನಿರ್ಣಯವಾದರೆ ಅಲ್ಲವೇ, ಅದರ ಮೇಲೆ ಅಭಿರುಚಿಯು ಹುಟ್ಟುವುದು?! ಅದಕ್ಕಾಗಿಯೇ ಅರ್ಜುನನು ಆ ಪ್ರಶ್ನೆಯಿಂದಲೇ 5ನೆಯ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದಾನೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ