ಶ್ರೀ ಮದ್ಭಗವದ್ಗೀತಾ : 117
42. ತಸ್ಮಾದಜ್ಞಾನ-ಸಂಭೂತಂ ಹೃತ್ ಸ್ಥಂ ಜ್ಞಾನಾಸಿನಾಽಽತ್ಮನಃ।
ಛಿತ್ವೈನಂ ಸಂಶಯಂ ಯೋಗಂ ಆತಿಷ್ಠೋತ್ತಿಷ್ಠ ಭಾರತ!॥
ಭಾರತ = ಜ್ಞಾನಾಸಕ್ತಿಯುಳ್ಳ ಎಲೈ ಅರ್ಜುನನೆ!, ತಸ್ಮಾತ್ = ಸಂಶಯಶೀಲನು ಅಧೋಗತಿಗೆ ಹೋಗುತ್ತಾನೆ ಆದ್ದರಿಂದ, ಅಜ್ಞಾನ ಸಂಭೂತಂ = ಅಜ್ಞಾನದಿಂದ ಹುಟ್ಟಿರುವುದೂ, ಹೃತ್‌ಸ್ಥಂ = ನಿನ್ನ ಮನಸ್ಸಿನಲ್ಲಿ ಬಲವಾಗಿ ನಾಟಿಕೊಂಡಿರುವುದೂ, ಆತ್ಮನಃ = ನಿನ್ನ ಸ್ವಸ್ವರೂಪಕ್ಕೆ ಸಂಬಂಧಿಸಿರುವುದೂ ಆದ, ಏನಂ = ಈ, ಸಂಶಯಂ = ಸಂದೇಹವನ್ನು, ಜ್ಞಾನಾಸಿನಾ = ಜ್ಞಾನವೆಂಬ ಖಡ್ಗದಿಂದ, ಛಿತ್ವಾ = ಕತ್ತರಿಸಿ, ಯೋಗಂ = ನಿಷ್ಕಾಮಕರ್ಮಯೋಗವನ್ನು, ಆತಿಷ್ಠ = ಆಚರಿಸು, ಉತ್ತಿಷ್ಠ = ಯುದ್ಧಕ್ಕಾಗಿ ಎದ್ದು ನಿಲ್ಲು.
ಜ್ಞಾನಾಸಕ್ತಿಯುಳ್ಳ ಎಲೈ ಅರ್ಜುನನೆ! ಕರ್ಮಯೋಗಾನುಷ್ಠಾನದಿಂದ ಚಿತ್ತವು ಶುದ್ಧವಾಗುವುದೆಂದೂ, ಅದರಿಂದ ಪರಮಾತ್ಮಜ್ಞಾನವು ಉದಯಿಸುವುದೆಂದೂ, ಅದರಿಂದ ಕರ್ಮಬಂಧಗಳು ತೊಲಗಿ ಹೋಗುವುವೆಂದೂ, ಈ ಕರ್ಮಮಾರ್ಗ ಜ್ಞಾನಮಾರ್ಗಗಳ ಸಮನ್ವಯ ವಿಷಯದಲ್ಲಿ ಸಂದೇಹಶೀಲನಾದವನು ನಶಿಸಿಹೋಗುವನೆಂದೂ, ನಿನಗೆ 40, 41ನೇ ಶ್ಲೋಕಗಳಲ್ಲಿ ವಿವರಿಸಿ ಹೇಳಿದ್ದೇನೆ. ಆದರೂ ನೀನು ಈಗ ಇರುವ ಪರಿಸ್ಥಿತಿ ಯಾವುದೆಂದರೆ ನಿನ್ನ ಹೃದಯದಲ್ಲಿ “”ನನ್ನವರು, ಪರರು” ಎಂಬ ಅಜ್ಞಾನವು ಆಳವಾಗಿ ನಾಟಿಕೊಂಡುಬಿಟ್ಟಿದೆ. ಅದಕ್ಕೆ ಕಾರಣ ನಿನ್ನ ಸ್ವಸ್ವರೂಪವಾವುದೋ ನಿನಗೆ ತಿಳಿಯದಿರುವುದೇ ಆಗಿದೆ. ಅದಕ್ಕಾಗಿಯೇ “”ನಾನು ಈ ಯುದ್ಧವನ್ನು ಮಾಡಬಹುದೇ, ಮಾಡಬಾರದೇ?” ಎಂಬ ಸಂದೇಹವು ನಿನ್ನನ್ನು ಹಿಡಿದುಕೊಂಡು ಪೀಡಿಸುತ್ತಿದೆ. ಅದರಿಂದಲೇ ನೀನೀಗ ರಥದಲ್ಲಿ ಕುಳಿತುಬಿಟ್ಟಿದ್ದೀಯೆ. ಈ ಎಲ್ಲ ಪ್ರಕ್ರಿಯೆಗೂ ಮೂಲಕಾರಣವು ನಿನ್ನ ಅಜ್ಞಾನವೇ ಆಗಿದೆ. ಆದ್ದರಿಂದ ಅದನ್ನು ನಿನಗೆ ನಾನೀಗ ಕೊಟ್ಟ ಜ್ಞಾನವೆಂಬ ಖಡ್ಗದಿಂದ ಕತ್ತರಿಸು. ಹಾಗೆ, ಸಂದೇಹಗಳೆಲ್ಲವನ್ನೂ ಒದರಿಕೊಂಡು, ನಿಷ್ಕಾಮಕರ್ಮಯೋಗವಾಗಿ ಯುದ್ಧಕರ್ಮವನ್ನು ಆಚರಿಸು. ಇನ್ನು ನಿಸ್ಸಂಕೋಚವಾಗಿ ಎದ್ದು ನಿಲ್ಲು.
ಓಂ ತತ್ಸದಿತಿ, ಶ್ರೀಮದ್ಭಗವದ್ಗೀತಾಸು, ಉಪನಿಷತ್ಸು,
ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನ ಸಂವಾದೇ
ಜ್ಞಾನಯೋಗೋನಾಮ ಚತುರ್ಥೋಽಧ್ಯಾಯಃ
ಜ್ಞಾನಯೋಗವೆಂಬ ಹೆಸರುಳ್ಳ ನಾಲ್ಕನೆಯ ಅಧ್ಯಾಯವು ಮುಗಿಯಿತು.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ