ಶ್ರೀ ಮದ್ಭಗವದ್ಗೀತಾ : 116
41. ಯೋಗಸಂನ್ಯಸ್ತ ಕರ್ಮಾಣಂ ಜ್ಞಾನ-ಸಂಛಿನ್ನ-ಸಂಶಯಮ್। ಆತ್ಮವಂತಂ ನ ಕರ್ಮಾಣಿ ನಿಬಧ್ನಂತಿ ಧನಂಜಯ!॥
ಧನಂಜಯ = ಎಲೈ ಅರ್ಜುನನೆ!, ಜ್ಞಾನ ಸಂಛಿನ್ನ ಸಂಶಯಂ = ಪರಮಾತ್ಮಜ್ಞಾನದಿಂದ ಸಂಶಯಗಳೆಲ್ಲವೂ ತೊಲಗಿಹೋದವನೂ, ಯೋಗ ಸನ್ನ್ಯಸ್ತ ಕರ್ಮಾಣಂ = ಜ್ಞಾನಯೋಗದಿಂದ ಸಮಸ್ತ ಪುಣ್ಯಪಾಪ ಕರ್ಮಗಳನ್ನೂ ಪರಿತ್ಯಾಗ ಮಾಡಿದವನೂ, ಆತ್ಮವಂತಂ = ಯಾವಾಗಲೂ ಅಪ್ರಮತ್ತನಾಗಿ ಇರುವವನೂ (ಆದ ಸಾಧಕನನ್ನು), ಕರ್ಮಾಣಿ = ತ್ರಿಗುಣಗಳ ವ್ಯವಹಾರ ವಿಶೇಷಗಳಾದ ಪುಣ್ಯಪಾಪಕರ್ಮಗಳು, ನ-ನಿಬಧ್ನಂತಿ = ಬಂಧಿಸಲಾರವು.
ಅರ್ಜುನನೆ! ಸಾಧಕನು ಮೊದಲು ತನ್ನ ಸಂಶಯಗಳೆಲ್ಲವೂ ತೊಲಗಿಹೋಗುವಷ್ಟು ಆಳವಾಗಿ ಆತ್ಮಜ್ಞಾನವನ್ನು ಸಂಪಾದಿಸಬೇಕು. ಆಮೇಲೆ ಕರ್ಮಯೋಗದಿಂದಾಗಲೀ, ಕೇವಲ ವಿವೇಕಬಲದಿಂದಾಗಲೀ ಜ್ಞಾನಯೋಗದಲ್ಲಿ ಪ್ರವೇಶಿಸಬೇಕು. ಆಗ ತನ್ನ ಜ್ಞಾನಯೋಗಬಲದಿಂದ ಲೋಕದಲ್ಲಿನ ಕರ್ಮಗಳೆಲ್ಲವೂ ತ್ರಿಗುಣಗಳ ವ್ಯವಹಾರದ ವಿಶೇಷಗಳೇ ಎಂದು ಗುರುತಿಸಬೇಕು (ನೋಡು ಅಧ್ಯಾಯ 3, ಶ್ಲೋಕ 28). ಹೀಗೆ ಗುರುತಿಸುವುದರಿಂದ ಅವುಗಳ ಮೇಲೆ, ಅವುಗಳ ಫಲಿತಗಳ ಮೇಲೆ ರಾಗದ್ವೇಷಗಳನ್ನು ಬಿಟ್ಟುಬಿಡಬೇಕು. ಆಮೇಲೆ ತಾನು ತ್ರಿಗುಣಗಳ ಸಮಷ್ಟಿಸ್ವರೂಪವಾದ ಪ್ರಕೃತಿಗೆ ಅತೀತನಾದ್ದರಿಂದ ತನಗೆ ಗುಣಜನ್ಯಗಳಾದ ಕರ್ಮಗಳೊಂದಿಗೆ ಸಂಬಂಧವಿಲ್ಲವೆಂದು ಅರ್ಥಮಾಡಿಕೊಂಡು, ಆ ಕರ್ಮಗಳೆಲ್ಲವನ್ನೂ ಬಿಟ್ಟುಬಿಡಬೇಕು. ಹೀಗೆ ಬಿಟ್ಟಮೇಲೆ ತ್ರಿಗುಣಗಳಾಗಲೀ, ಅವುಗಳ ವಿಕಾರಗಳಾದ ಇಂದ್ರಿಯಗಳಾಗಲೀ ತನ್ನನ್ನು ಮರಳಿ ಮೋಹದಲ್ಲಿ ಬೀಳಿಸದಂತೆ ಅಪ್ರಮತ್ತನಾಗಿ ಇರಬೇಕು. ಅಂತಹ ಸಾಧಕನಿಗೆ ಕರ್ಮಬಂಧಗಳು ಅಂಟಿಕೊಳ್ಳುವ ಅವಕಾಶವೇ ಇಲ್ಲ. ಪ್ರಾರಬ್ಧಶೇಷದಿಂದ ಕೆಲವು ಕರ್ಮಗಳು ಆತನಿಂದ ನಡೆದುಹೋದರೂ ಅವುಗಳು ಆತನಿಗೆ ಬಂಧಕಾರಕಗಳು ಆಗವು.
ಅವತಾರಿಕೆ:
ಇನ್ನು ಪ್ರಸ್ತುತ ಸಂದರ್ಭಕ್ಕೆ ಮರಳಿಬರುತ್ತಾ, ಅರ್ಜುನನ
ಕರ್ತವ್ಯವನ್ನು ಮತ್ತೊಂದುಸಲ ನಿರ್ದೇಶಿಸುತ್ತಾ ಭಗವಂತನು ಈ ಅಧ್ಯಾಯವನ್ನು ಸಮಾಪ್ತಿ ಮಾಡಲಿದ್ದಾನೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ