ಗೀತೆ – 115 : ಅರ್ಥವಿಲ್ಲದ ಸಂದೇಹಗಳನ್ನು ಇಟ್ಟುಕೊಳ್ಳಬೇಡ

Gitacharya
Spread the love

ಶ್ರೀ ಮದ್ಭಗವದ್ಗೀತಾ : 115

40. ಅಜ್ಞಶ್ಚಾ-ಶ್ರದ್ದಧಾನಶ್ಚ ಸಂಶಯಾತ್ಮಾ ವಿನಶ್ಯತಿ।
ನಾಯಂ ಲೋಕೋಽಸ್ತಿ ನ ಪರಃ ನ ಸುಖಂ ಸಂಶಯಾತ್ಮನಃ॥

ಅಜ್ಞಃ-ಚ = ವಿಷಯವು ತಿಳಿಯದವನೂ, ಅಶ್ರದ್ದಧಾನಃ-ಚ = ವಿಷಯವು ತಿಳಿದರೂ ಆಚರಣೆಯಲ್ಲಿ ಇಡದವನೂ, ಸಂಶಯಾತ್ಮಾ-(ಚ) = ಯಾವಾಗಲೂ ಸಂದೇಹ ಉಳ್ಳವನೂ, ವಿನಶ್ಯತಿ = ಅಧೋಗತಿಗೆ ಹೋಗುತ್ತಾನೆ. ಸಂಶಯಾತ್ಮನಃ = ಎಲ್ಲವನ್ನೂ ಅನುಮಾನಿಸುವವನಿಗೆ, ಅಯಂ = ಈ, ಲೋಕಃ = ಭೌತಿಕಜೀವನವೇ, ನ-ಅಸ್ತಿ = ಇಲ್ಲ. ಪರಃ = ಪರಲೋಕಜೀವನವು ಕೂಡ, ನ = ಇಲ್ಲ. ಸುಖಂ = (ಎರಡೂ ಕಡೆ) ಸುಖವು, ನ = ಇಲ್ಲ.

ಅರ್ಜುನನೆ! ಯಾವ ವಿಷಯದಲ್ಲಾದರೂ ಸರಿಯೇ, ವಿಷಯಪರಿಜ್ಞಾನವು ಇಲ್ಲದವನು, ಅದು ಇದ್ದರೂ ಕೂಡ ಆಚರಣೆಯಲ್ಲಿ ಇಡದವನು, ಎಲ್ಲ ವಿಷಯಗಳಲ್ಲೂ ಯಾವಾಗಲೂ ಸಂದೇಹಪಡುತ್ತಾ ಇರುವವನು – ಎಂಬ ಈ ಮೂವರು ಯಾವಾಗಲೂ ಅಧೋಗತಿಯ ಪಾಲಾಗುತ್ತಾ ಇರುತ್ತಾರೆ. ಇವರಲ್ಲಿ ವಿಷಯಪರಿಜ್ಞಾನವಿಲ್ಲದವನಿಗೆ ಕಷ್ಟಪಟ್ಟು ಜ್ಞಾನವನ್ನು ಉಂಟುಮಾಡಬಹುದು. ವಿಷಯವು ತಿಳಿದಿದ್ದರೂ ಕೂಡ ಸೋಮಾರಿತನವು ಮೊದಲಾದವುಗಳಿಂದ ಆಚರಣಶೂನ್ಯನಾಗಿ ಇರುವವನನ್ನು ಒಪ್ಪಿಸಿ ದಾರಿಯಲ್ಲಿ ಇಡಬಹುದು. ಆದರೆ ಎಲ್ಲ ವಿಷಯಗಳಲ್ಲಿಯೂ ಎಲ್ಲರಮೇಲೂ ಕೆಲಸಕ್ಕೆಬಾರದ ಅನುಮಾನಗಳಿಂದ
ಇತ್ತ ಅತ್ತ ತೂಗುತ್ತಿರುವವನನ್ನು ಭೌತಿಕಲೋಕದಲ್ಲಿ ಕೂಡಾ ಯಾವ ವಿಧವಾದ ವಿಜಯವೂ ಆಶ್ರಯಿಸದು. ಅಂತಹವನಿಗೆ ಪರಲೋಕವು ಸಿದ್ಧಿಸದು. ಇಷ್ಟೇಕೆ? ಇವನಿಗೆ ಯಾವಾಗಲೂ ಎಲ್ಲಿಯೂ ಸುಖವೆಂಬುದೇ ಇರದು. ಆದ್ದರಿಂದ ಸಂಶಯಶೀಲನು ಅಧಮಾಧಮನು. ಈ ಸೂತ್ರವು ಆತ್ಮಜ್ಞಾನ ವಿಷಯದಲ್ಲಿ ಇನ್ನಷ್ಟು ತೀವ್ರವಾಗಿ ಅನ್ವಯಿಸುತ್ತದೆ. ನಿನಗೆ ಪರಮಾತ್ಮನನ್ನು ಕುರಿತು ಇಷ್ಟು ತರ್ಕಬದ್ಧವಾಗಿ ಇಷ್ಟೊಂದು ಪ್ರಮಾಣಸಮ್ಮತವಾಗಿ ವಿವರಿಸಿದಮೇಲೂ ಕೂಡಾ ಇನ್ನೂ ಸಂದೇಹಗಳಲ್ಲಿಯೇ ತೂಗುತ್ತಿದ್ದರೆ, ನಿನಗೆ ಯಾವ ವಿಧವಾದ ಸುಖವೂ ಇರದು. ಆದ್ದರಿಂದ, ಅರ್ಥವಿಲ್ಲದ ಸಂದೇಹಗಳನ್ನು ಇಟ್ಟುಕೊಳ್ಳಬೇಡ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ