ಗೀತೆ – 111 : ಪರಮಾತ್ಮ ಜ್ಞಾನವೆಂಬ ಅಗ್ನಿಜ್ವಾಲೆಯು ಜನ್ಮ ಜನ್ಮಾಂತರಗಳ ಪಾಪಪುಣ್ಯವನ್ನು ಭಸ್ಮ ಮಾಡುತ್ತದೆ

Gitacharya
Spread the love

ಶ್ರೀ ಮದ್ಭಗವದ್ಗೀತಾ : 111

36. ಅಪಿ ಚೇದಸಿ ಪಾಪೇಭ್ಯಃ ಸರ್ವೇಭ್ಯಃ ಪಾಪಕೃತ್ತಮಃ।
ಸರ್ವಂ ಜ್ಞಾನಪ್ಲವೇನೈವ ವೃಜಿನಂ ಸಂತರಿಷ್ಯಸಿ॥

ಸರ್ವೇಭ್ಯಃ = ಸಮಸ್ತವಾದ, ಪಾಪೇಭ್ಯಃ = ಪಾಪಿಗಳಿಗಿಂತ, ಪಾಪಕೃತ್ತಮಃ = (ನೀನು) ಅತ್ಯಧಿಕ ಪಾಪಿಯು, ಅಪಿ-ಚೇತ್‌-ಅಸಿ = ಆಗಿದ್ದರೂ ಕೂಡ, ಸರ್ವಂ = ಸಮಸ್ತವಾದ, ವೃಜಿನಂ = ಪಾಪಪುಣ್ಯರೂಪವಾದ ಸಂಸಾರ ಸಮುದ್ರವನ್ನು, ಜ್ಞಾನಪ್ಲವೇನ-ಏವ = ಜ್ಞಾನವೆಂಬ ಹಡಗಿನಿಂದಲೇ, ಸಂತರಿಷ್ಯಸಿ = ದಾಟಿಬಿಡುವೆ.

ಎಲೈ ಅರ್ಜುನನೆ! ನೀನು ಸಹಜವಾಗಿ ಪವಿತ್ರನೇ ಆಗಿದ್ದೀಯೆ. ಒಂದು ವೇಳೆ ನೀನು ಪಾಪಾತ್ಮರೆಲ್ಲರಲ್ಲಿಯೂ ಘೋರಾತಿಘೋರವಾದ ಪಾಪಾತ್ಮನೇ ಆಗಿದ್ದರೂ ಕೂಡ ಪರಮಾತ್ಮ ಜ್ಞಾನವೆಂಬ ಹಡಗನ್ನು ಆಶ್ರಯಿಸಿದರೆ ಸಾಕು, ಪಾಪಪುಣ್ಯಾದಿ ರೂಪವಾದ ಸಂಸಾರಸಾಗರವನ್ನು ಅವಲೀಲೆಯಾಗಿ ದಾಟಿಬಿಡುವೆ.

37. ಯಥೈಧಾಂಸಿ ಸಮಿದ್ಧೋಽಗ್ನಿಃ ಭಸ್ಮಸಾತ್ ಕುರುತೇಽರ್ಜುನ।
ಜ್ಞಾನಾಗ್ನಿ ಸ್ಸರ್ವಕರ್ಮಾಣಿ ಭಸ್ಮಸಾತ್ ಕುರುತೇ ತಥಾ॥

ಅರ್ಜುನ = ಎಲೈ ಅರ್ಜುನನೆ!, ಸಮಿದ್ಧಃ = ಚೆನ್ನಾಗಿ ಹತ್ತಿಕೊಳ್ಳುವಂತೆ ಮಾಡಲ್ಪಟ್ಟ, ಅಗ್ನಿಃ = ಬೆಂಕಿಯು, ಏಧಾಂಸಿ = ಕಟ್ಟಿಗೆಗಳನ್ನು, ಯಥಾ = ಹೇಗೆ, ಭಸ್ಮಸಾತ್‌ = ಬೂದಿಯಾಗಿ, ಕುರುತೇ = ಮಾಡಿಬಿಡುವುದೋ, ತಥಾ = ಹಾಗೆಯೇ, ಜ್ಞಾನಾಗ್ನಿಃ = ಪರಮಾತ್ಮ ಜ್ಞಾನವೆಂಬ ಅಗ್ನಿಯು, ಸರ್ವಕರ್ಮಾಣಿ = ಪಾಪಪುಣ್ಯರೂಪವಾದ ಸಮಸ್ತ ಕರ್ಮಗಳನ್ನೂ, ಭಸ್ಮಸಾತ್‌ = ಬೂದಿಯಾಗಿ, ಕುರುತೇ = ಮಾಡಿಬಿಡುತ್ತದೆ.

ಅರ್ಜುನನೆ! ಅಗ್ನಿಯನ್ನು ಚೆನ್ನಾಗಿ ಹತ್ತಿಸಿದರೆ ಅದರಲ್ಲಿ ಎಷ್ಟು ದೊಡ್ಡ ಕಟ್ಟಿಗೆಗಳ ರಾಶಿಯನ್ನು ಹಾಕಿದರೂ, ಆ ರಾಶಿಯನ್ನು ಅಗ್ನಿಯು ಬುೂದಿಮಾಡಿಬಿಡುತ್ತದೆ. ಹಾಗೆಯೇ ಪರಮಾತ್ಮಜ್ಞಾನವೆಂಬ ಅಗ್ನಿಯನ್ನು ಜಾಗ್ರತೆಯಾಗಿ ಅಭ್ಯಾಸಮಾಡಿ ಪ್ರಜ್ವಲಿಸುವ ಹಾಗೆ ಮಾಡಿದರೆ, ಅದು ನಿನ್ನ ಜನ್ಮಜನ್ಮಾಂತರಗಳಲ್ಲಿ ಮಾಡಿದ ಪಾಪಪುಣ್ಯಗಳೆಲ್ಲವನ್ನೂ ಕೂಡ ಭಸ್ಮೀಪಟಲ ಮಾಡಿಬಿಡುತ್ತದೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ