ಶ್ರೀ ಮದ್ಭಗವದ್ಗೀತಾ :
35. ಯಜ್ ಜ್ಞಾತ್ವಾ ನ ಪುನರ್ಮೋಹಂ ಏವಂ ಯಾಸ್ಯಸಿ ಪಾಂಡವ!।
ಯೇನ ಭೂತಾನ್ಯಶೇಷೇಣ ದ್ರಕ್ಷ್ಯಸ್ಯಾತ್ಮನ್ಯಥೋ ಮಯಿ॥
ಪಾಂಡವ = ಎಲೈ ಅರ್ಜುನನೆ!, ಯತ್ = ಯಾವ ವಿಷಯವನ್ನು, ಜ್ಞಾತ್ವಾ = ತಿಳಿದುಕೊಂಡು, ಪುನಃ = ಮತ್ತೆ, ಏವಂ = ಈ ವಿಧವಾದ, ಮೋಹಂ = ಅಜ್ಞಾನವನ್ನು (ನನ್ನವರು, ಇತರರು, ಎಂಬ ಅಜ್ಞಾನವನ್ನು) ನ-ಯಾಸ್ಯಸಿ = ಪಡೆಯಲಿರುವೆಯೋ, ಯೇನ = ಮತ್ತು ಯಾವ ಜ್ಞಾನದಿಂದ, ಅಶೇಷೇಣ = ಪೂರ್ತಿಯಾಗಿ, ಅಂದರೆ ಬ್ರಹ್ಮ ವಿಷ್ಣು ಮಹೇಶ್ವರರಿಂದ ಸೂಕ್ಷ್ಮಕ್ರಿಮಿಗಳವರೆಗೆ ಇರುವ, ಭೂತಾನಿ = ಜೀವಿಗಳನ್ನು, ಆತ್ಮನಿ = ನಿನ್ನಲ್ಲಿಯೂ, ಅಥೋ = ಮತ್ತು, ಮಯಿ = ಪರಮಾತ್ಮನಲ್ಲಿಯೂ, ದ್ರಕ್ಷ್ಯಸಿ = ನೋಡಬಲ್ಲೆಯೋ, (ತತ್-ವಿದ್ಧಿ = ಅಂತಹ ಜ್ಞಾನವನ್ನು ತಿಳಿದುಕೋ).
ಅರ್ಜುನನೆ! ಸದ್ಗುರುಗಳ ಹತ್ತಿರಕ್ಕೆ ಹೋಗಿ ಯಾವಯಾವುವೋ ವಿಷಯಗಳನ್ನು ಕೇಳಬಾರದು. ಯಾವುದನ್ನು ತಿಳಿದುಕೊಂಡರೆ ಈಗ ನಿನಗೆ ಉಂಟಾದಂತೆ “”ನನ್ನವರು, ಇತರರು” ಮೊದಲಾದ ರೂಪಗಳಿರುವ ಅಜ್ಞಾನವು ಮತ್ತೆ ಅಂಟಿಕೊಳ್ಳದೋ, ಯಾವುದನ್ನು ತಿಳಿದುಕೊಂಡರೆ ಪ್ರಪಂಚದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರಿಂದ ಸೂಕ್ಷ್ಮಕ್ರಿಮಿಗಳವರೆಗೆ ಇರುವ ಜೀವಿಗಳೆಲ್ಲರೂ ಅರ್ಜುನನಾದ ನಿನ್ನಲ್ಲಿಯೇ ಇದ್ದಾರೆಂದೂ, ಅಷ್ಟೇ ಅಲ್ಲದೆ, ನಿನ್ನೊಂದಿಗೆ ಸಮಸ್ತ ಜೀವಿಗಳೂ ಪರಮಾತ್ಮನಲ್ಲೇ ಇದ್ದಾರೆಂದೂ, ಸ್ವಯಂ ಪ್ರತ್ಯಕ್ಷವಾಗಿ ದರ್ಶಿಸಬಲ್ಲೆಯೋ ಅದೇ ನಿಜವಾದ ಜ್ಞಾನವು. ಅದನ್ನು ಕುರಿತೇ ಕೇಳಬೇಕು. ಅದನ್ನೇ ತಿಳಿದುಕೊಳ್ಳಬೇಕು. ಈ ಜ್ಞಾನವು ಉಂಟಾದರೆ, ನಿನ್ನಲ್ಲಿಯೇ ಪರಮಾತ್ಮನಿದ್ದಾನೆಂದೂ, ಪರಮಾತ್ಮನಲ್ಲಿಯೇ ನೀನು ಇದ್ದೀಯೆಂದೂ ಅನುಭವವು ಉಂಟಾಗುತ್ತದೆ. ಅಂದರೆ ನೀನು, ಪರಮಾತ್ಮನು ಎಂಬುವರು ಬೇರೆ ಬೇರೆ ಅಲ್ಲವೆಂದೂ, ಇಬ್ಬರೂ ಒಂದೇ ಎಂದೂ ಅನುಭವವು ಉಂಟಾಗುತ್ತದೆ. ಇದೇ ನಿಜವಾದ ಜ್ಞಾನವು.
ಅವತಾರಿಕೆ:
ಇನ್ನು ಮೂರು ಶ್ಲೋಕಗಳಲ್ಲಿ ಜ್ಞಾನಮಹಿಮೆಯನ್ನು ವರ್ಣಿಸುತ್ತಿದ್ದಾನೆ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ