ಶ್ರೀ ಮದ್ಭಗವದ್ಗೀತಾ : 109
34. ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ।
ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಸ್ತತ್ತ್ವದರ್ಶಿನಃ॥
ಪ್ರಣಿಪಾತೇನ = ಸಾಷ್ಟಾಂಗ ಪ್ರಣಾಮದಿಂದ, ಪರಿಪ್ರಶ್ನೇನ = ವಿನಯ ಪೂರ್ವಕವಾಗಿ ಪ್ರಶ್ನಿಸುವುದರಿಂದ, ಸೇವಯಾ = ಶುಶ್ರೂಷೆಯಿಂದ, ತತ್ = ಆ ಬ್ರಹ್ಮಜ್ಞಾನವನ್ನು, ವಿದ್ಧಿ = ತಿಳಿದುಕೋ. ತತ್ತ್ವದರ್ಶಿನಃ = ತತ್ತ್ವಾನುಭವವಿರುವ, ಜ್ಞಾನಿನಃ = ಜ್ಞಾನಿಗಳು, ತೇ = ನಿನಗೆ, ಜ್ಞಾನಂ = ಬ್ರಹ್ಮಜ್ಞಾನವನ್ನು, ಉಪದೇಕ್ಷ್ಯಂತಿ = ಉಪದೇಶಿಸಬಲ್ಲರು.
ಅರ್ಜುನನೆ! ನಾನು ಕೊಡುತ್ತಿರುವ ಈ ಜ್ಞಾನದ ವಿಷಯದಲ್ಲಿ ಸಂದೇಹಗಳು ಉಂಟಾಗುತ್ತಾ ಇರುವುದು ಸಾಮಾನ್ಯ ಮಾನವರಿಗೆ ಸಹಜವು. ಅಂತಹ ಸಮಯದಲ್ಲಿ ನಿನಗೆ ಯಾವ ವಿಷಯದಲ್ಲಿ ಸಂದೇಹ ಉಂಟಾಗಿದೆಯೋ ಅದಕ್ಕೆ ಸಂಬಂಧಿಸಿದ ತತ್ತ್ವವೇತ್ತರ (ನಿಪುಣರ) ಸಮೀಪಕ್ಕೆ ಹೋಗಬೇಕು.
ಅ) ಹೋಗಿ ಪ್ರ-ನಿ-ಪಾತವನ್ನು ಮಾಡಬೇಕು.
ಆ) ಆಮೇಲೆ ಪರಿ-ಪ್ರಶ್ನೆಯನ್ನು ಮಾಡಬೇಕು.
ಇ) ಆ ನಂತರ ಗುರುಗಳಿಗೆ ತಕ್ಕ ಸೇವೆಗಳನ್ನು ಮಾಡಬೇಕು.
ಈ ಮೂರು ಮೆಟ್ಟಿಲನ್ನು ನೀನು ಆಚರಿಸಿದರೆ, ಯಾವ ರಂಗದಲ್ಲಾದರೂ ಸರಿಯೇ, ತುಟ್ಟತುದಿಯ ತತ್ತ್ವವನ್ನು ದರ್ಶಿಸುವ ಜ್ಞಾನಸಂಪನ್ನರಾದ ಗುರುಗಳು ನಿನ್ನ ಸಂದೇಹಗಳನ್ನು ತೀರಿಸುವರು. ನಿರ್ಮಲವಾದ (ಸಂದೇಹಗಳಿಗೆ ಅವಕಾಶವಿಲ್ಲದ) ಜ್ಞಾನವನ್ನು ಕೊಡುವರು.
ವಿವರಣೆ:
ಜ್ಞಾನವೇ ಪ್ರಶಸ್ತವು ಎಂದು ಹಿಂದಿನ ಶ್ಲೋಕದಲ್ಲಿ ಹೇಳಿರುವನು. ಆದ್ದರಿಂದ ಅಂತಹ ಜ್ಞಾನವನ್ನು ಪಡೆಯುವ ಉಪಾಯಗಳನ್ನು ಹೇಳಬೇಕಾಗಿದೆ. ಭಗವಂತನು ಇನ್ನು ಮುಂದಿನ 7 ಶ್ಲೋಕಗಳಲ್ಲಿ ಆ ಉಪಾಯಗಳನ್ನು ಉಪದೇಶಿಸಲಿದ್ದು ಜ್ಞಾನಪ್ರಾಪ್ತಿಗೆ ಅತ್ಯಂತ ಕೀಲಕವಾದ ಪ್ರಧಾನೋಪಾಯವನ್ನು ಈ ಶ್ಲೋಕದಲ್ಲಿ ಉಪದೇಶಿಸುತ್ತಿದ್ದಾನೆ. ಈ ಶ್ಲೋಕದಲ್ಲಿರುವ ಪದಗಳು ಸಂಕೇತಮಯವಾಗಿ ಇರುವುದರಿಂದ ಅವುಗಳ ವಿವರಣೆಯನ್ನು ತಿಳಿದುಕೊಳ್ಳುವುದು ಅವಶ್ಯಕ.
1. ಪ್ರಣಿಪಾತವು (ಪ್ರ-ನಿ-ಪಾತವು) :
ಪಾತವೆಂದರೆ ಬಗ್ಗಿಬಿಡುವುದು. ನಿ-ಪಾತವೆಂದರೆ ಹೃದಯಪೂರ್ವಕವಾಗಿ ಬಗ್ಗುವುದು. (“ನಿ’ ಎಂಬುದು ಸಂಧಿಯಲ್ಲಿ “ಣಿ’ ಯಾಗಿ ಬದಲಾಗುತ್ತದೆ)
ಪ್ರ-ಣಿ-ಪಾತವು ಎಂದರೆ, ಹೃದಯಪೂರ್ವಕವಾಗಿ ಮಾತ್ರವೇ ಅಲ್ಲದೆ ಕ್ರಿಯಾಪೂರ್ವಕವಾಗಿ ಕೂಡ ಬಗ್ಗಿಬಿಡುವುದು. ಸಾಷ್ಟಾಂಗ ವಂದನಾದಿಗಳು ಇದಕ್ಕೆ ಸೂಚಕಗಳು.
ಇಲ್ಲಿ ಬಗ್ಗಿಬಿಡುವುದೆಂದರೆ ಅವರು ಹೇಳುವ ವಿಷಯವನ್ನು ಶ್ರದ್ಧೆಯಾಗಿ ಗ್ರಹಿಸಲು ಸಿದ್ಧವಾಗುವುದು. (ಅಷ್ಟೇ ಹೊರತು, ಅವರೊಂದಿಗೆ ವಾದಕ್ಕೆ ಇಳಿಯುವುದು ಅಂತಲ್ಲ.)
2. ಪರಿಪ್ರಶ್ನೆ (ಪರಿ-ಪ್ರಶ್ನೆ) :
ಪ್ರಶ್ನೆ – ಅಂದರೆ ಪ್ರಶ್ನಿಸುವುದು.
ಪರಿಪ್ರಶ್ನೆ – ಅಂದರೆ ವಿನಯಪೂರ್ವಕವಾಗಿ ಪ್ರಶ್ನಿಸುವುದು. ಮಧ್ಯದಲ್ಲಿ ಈ ವಿನಯವೇತಕ್ಕೆ ಎಂದೆನ್ನಬಾರದು. ಅವಿನಯವೆಂಬುದು ಹೃದಯದಲ್ಲಿ ಕೆಲವು ನಿರ್ಣಯಗಳನ್ನು ಮುಂಚೆಯೇ ಮಾಡಿಬಿಟ್ಟು, ಇನ್ನು ಮುಂದೆ ಮತ್ತೊಂದು ವಿಷಯವನ್ನು ಒಳಕ್ಕೆ ಬರದಂತೆ ಮಾಡುತ್ತದೆ. ಆದ್ದರಿಂದ ವಾದಗಳನ್ನು ಎಬ್ಬಿಸುತ್ತದೆ. ವಿನಯವೆಂಬುದು ಹೃದಯವನ್ನು ತೆರೆದಿಟ್ಟು, ಮೃದುವಾಗಿಟ್ಟು, ಹೊಸ ವಿಷಯಗಳನ್ನು ಆದರಪೂರ್ವಕವಾಗಿ ಆಹ್ವಾನಿಸುತ್ತದೆ. ಅದರಿಂದ ಹೇಳಲ್ಪಡುವ ವಿಷಯವು ಇನ್ನಷ್ಟು ವಿಸ್ಪಷ್ಟವಾಗಿ ಆ ಹೃದಯಕ್ಕೆ ಎಟುಕುತ್ತದೆ. ಆದ್ದರಿಂದ ಬರಿಯ ಪ್ರಶ್ನಸ್ಥಿತಿಯನ್ನು ದಾಟಿ ಪರಿಪ್ರಶ್ನೆ ಸ್ಥಿತಿಯನ್ನು ಸೇರಿಕೋ. ಹಾಗೆ ಸೇರಿಕೊಂಡು “”ಬಂಧವೆಂದರೆ ಏನು? ಮೋಕ್ಷವೆಂದರೆ ಏನು? ಜ್ಞಾನವೆಂದರೆ ಏನು? ಅಜ್ಞಾನವೆಂದರೆ ಏನು?” ಎಂದು ಹೀಗೆ ಆಳವಾದ ಪ್ರಶ್ನೆಗಳನ್ನು ಮಾಡಬೇಕು. ಹೀಗೆ ಪ್ರಶ್ನೆಗಳು ಹುಟ್ಟಬೇಕಾದರೆ, ಮೊದಲು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವುದನ್ನು ಕಲಿಯಬೇಕು. ಅದಾದ ಮೇಲೆ ಗುರುಗಳನ್ನು ಪರಿಪ್ರಶ್ನಿಸುವ ಅರ್ಹತೆಯು ಬರುತ್ತದೆ.
3. ಸೇವೆ :
ಪರಿಪ್ರಶ್ನೆ ಮಾಡಿದಷ್ಟಕ್ಕೆ ಸದ್ಗುರುಗಳಿಂದ ಸಮಾಧಾನಗಳು ಉದುರಿಬೀಳದೇ ಇರಬಹುದು. ಆಗ ಅವರಿಗೆ ತಕ್ಕ ಸೇವೆಗಳು ಮಾಡಬೇಕು. ಸೇವೆ ಎಂಬುದು ನಿನ್ನ ಹೃದಯದಲ್ಲಿನ ವಿನಯವನ್ನು, ಜ್ಞಾನತೃಷ್ಣೆಯನ್ನು ಮಾತ್ರವಲ್ಲದೆ ಶಿಷ್ಯನಾದ ನಿನ್ನಲ್ಲಿರುವ ಜ್ಞಾನದ ಅರ್ಹತೆಯನ್ನು ಗುರುಗಳಿಗೆ ವ್ಯಕ್ತಪಡಿಸುತ್ತದೆ.
ಜ್ಞಾನಾರ್ಹತೆ ಅಂದರೆ ಸಂಪಾದಿಸುವ ಜ್ಞಾನವನ್ನು ದುರ್ವಿನಿಯೋಗ ಮಾಡದೇ ಇರಬಲ್ಲ ಸಾಮರ್ಥ್ಯವು.
ಈ ವಿಷಯದಲ್ಲಿ ನಂಬಿಕೆ ಉಂಟಾದರೆ ಹೊರತು ಗುರುಗಳು ವಿದ್ಯಾರಹಸ್ಯಗಳನ್ನು ಬಹಿರಂಗಪಡಿಸರು. ಆದ್ದರಿಂದ ಸಾಧಕನು ಮಾಡುವ ಪರಿಪ್ರಶ್ನೆಯು ಸೇವಾಪೂರ್ವಕವಾಗಿ ಇರಬೇಕು.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ